ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಸಾಮರ್ಥ್ಯ ಅರಿಯದ ಸಮಾಜದ ಅಭಿವೃದ್ಧಿ ಅಸಾಧ್ಯ: ಪ್ರಧಾನಿ ಮೋದಿ

‘ಪರೀಕ್ಷಾ ಪೇ ಚರ್ಚಾ’ದಲ್ಲಿ ಲಿಂಗ ಸಮಾನತೆಯ ಮಹತ್ವ
Last Updated 1 ಏಪ್ರಿಲ್ 2022, 16:05 IST
ಅಕ್ಷರ ಗಾತ್ರ

ನವದೆಹಲಿ: ‘ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಗುರುತಿಸುವಲ್ಲಿ ಸಮಾಜ ಸೋತರೆ ಅಂಥ ಸಮಾಜವು ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ. ಗಂಡು ಮತ್ತು ಹೆಣ್ಣುಮಕ್ಕಳನ್ನು ಯಾವುದೇ ಭೇದಭಾವವಿಲ್ಲದೆ ಕಾಣಬೇಕು ಮತ್ತು ಅವರಿಗೆ ಸಮಾನ ಅವಕಾಶ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಇಲ್ಲಿನ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ಶುಕ್ರವಾರ ‘ಪರೀಕ್ಷಾ ಪೇ ಚರ್ಚಾ 2022’ದ ಐದನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲೂ ಪಾಲ್ಗೊಂಡರು.

ಸಂವಾದದಲ್ಲಿ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಮೋದಿ ಅವರು, ‘ಹುಡುಗ ಮತ್ತು ಹುಡುಗಿಯರ ನಡುವಿನ ತಾರತಮ್ಯದ ವಿಚಾರ ಈಗ ಹಿಂದಿನಂತಿಲ್ಲ. ಕಾಲ ಬದಲಾದಂತೆ ಈ ವಿಚಾರದಲ್ಲೂ ಬದಲಾವಣೆಯಾಗಿದೆ. ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆಯು ಗಂಡುಮಕ್ಕಳ ಸಂಖ್ಯೆಯನ್ನೂ ಮೀರಿಸುತ್ತದೆ. ಹೆಣ್ಣುಮಕ್ಕಳ ಉತ್ಸಾಹ ಮತ್ತು ಆಕಾಂಕ್ಷೆಗಳ ಬಗ್ಗೆ ಪ್ರತಿ ಭಾರತೀಯನೂ ಹೆಮ್ಮೆ ಪಡಬಹುದಾದ ಕಾಲಘಟ್ಟವಿದು. ಈಗ ಪ್ರತಿ ಕುಟುಂಬಕ್ಕೂ ಹೆಣ್ಣುಮಕ್ಕಳು ದೊಡ್ಡ ಆಸ್ತಿ ಮತ್ತು ಶಕ್ತಿಯಾಗಿದ್ದಾರೆ’ ಎಂದರು.

‘ಮಗಳು ಕೆಲಸಕ್ಕೆ ಹೋಗದೇ ತನ್ನ ಅತ್ತೆಮನೆಯಲ್ಲಿ ನೆಲೆಸುತ್ತಾಳೆ ಎಂದು, ಮಗನಿಗಾಗಿ ತಮ್ಮ ಸಂಪನ್ಮೂಲಗಳನ್ನು ವಿನಿಯೋಗಿಸುವ ಪೋಷಕರಿದ್ದಾರೆ. ಕೆಲವೆಡೆ ಮಾತ್ರ ಇಂಥವರು ಇರಬಹುದು. ಆದರೆ, ಈ ವಿಷಯಗಳಲ್ಲಿ ಈಗ ದೊಡ್ಡಮಟ್ಟದಲ್ಲಿ ಬದಲಾವಣೆಯಾಗಿದೆ. ತಂದೆ–ತಾಯಿಯನ್ನು ನೋಡಿಕೊಳ್ಳುವ ಸಲುವಾಗಿಯೇ ವಿವಾಹವಾಗದ ಅನೇಕ ಹೆಣ್ಣುಮಕ್ಕಳನ್ನು ನೋಡಿದ್ದೇನೆ. ಅಂತೆಯೇ ಪುತ್ರರು ತಮ್ಮ ಸಂಸಾರಗಳಲ್ಲಿ ಸುಖವಾಗಿದ್ದರೂ ಅವರ ಹೆತ್ತವರು ವೃದ್ಧಾಶ್ರಮದಲ್ಲಿರುವುದನ್ನೂ ನೋಡಿದ್ದೇನೆ’ ಎಂದೂ ಪ್ರಧಾನಿ ಹೇಳಿದರು.

‘ಈಗ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು– ಗಂಡಿನ ನಡುವೆ ತಾರತಮ್ಯ ಮಾಡದೇ ಸಮಾನ ಅವಕಾಶ ನೀಡಿದರೆ, ನಂತರದ ಪೀಳಿಗೆಯವರು ಮತ್ತಷ್ಟು ಉತ್ತಮವಾದದ್ದನ್ನು ಮಾಡಬಹುದು’ ಎಂದು ಅವರು ತಿಳಿಸಿದರು.

‘ಪರೇಶಾನಿ ಪೇ ಚರ್ಚಾ’ ಯಾವಾಗ ಮಾಡ್ತೀರಿ: ಎನ್‌ಸಿಪಿ ಪ್ರಶ್ನೆ
ಮುಂಬೈ (ಪಿಟಿಐ):
ಮೋದಿ ಅವರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮವನ್ನು ಸ್ವಾಗತಿಸಿರುವ ಎನ್‌ಸಿಪಿ, ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ‘ಪರೇಶಾನಿ ಪೇ ಚರ್ಚಾ’ ಯಾವಾಗ ಆಯೋಜಿಸುತ್ತೀರಿ ಎಂದು ಪ್ರಧಾನಿಯವರನ್ನು ಪ್ರಶ್ನಿಸಿದೆ.

‘ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಒತ್ತಡದಲ್ಲಿದ್ದಾರೆ. ಅವರನ್ನು ಒತ್ತಡದಿಂದ ಮುಕ್ತಗೊಳಿಸಲು ಅವರೊಂದಿಗೆ ಸಂವಹನ ನಡೆಸಿದ್ದಕ್ಕಾಗಿ ನಾವು ಪ್ರಧಾನ ಮಂತ್ರಿಗೆ ಧನ್ಯವಾದ ಹೇಳುತ್ತೇವೆ. ಆದರೆ, ಅವರು ವಿದ್ಯಾರ್ಥಿಗಳ ಪೋಷಕರ ಕಳವಳಗಳನ್ನು ಪರಿಹರಿಸಲು ‘ಪರೇಶಾನಿ ಪೇ ಚರ್ಚಾ’ (ಕಷ್ಟಗಳ ಮೇಲೆ ಸಂವಾದ) ಯಾವಾಗ ನಡೆಸಲಿದ್ದಾರೆ’ ಎಂದು ಎನ್‌ಸಿಪಿಯ ವಕ್ತಾರ ಕ್ಲೈಡ್ ಕ್ರಾಸ್ಟೊ ಕೇಳಿದ್ದಾರೆ.

ಮೆಹಂಗಾಯಿ ಪೇ ಚರ್ಚಾ ಯಾವಾಗ ನಡೆಸ್ತೀರಿ: ಕಾಂಗ್ರೆಸ್ ಪ್ರಶ್ನೆ
ಮುಂಬೈ, (ಪಿಟಿಐ):
‘ಚಾಯ್ ಪೇ ಚರ್ಚಾ’, ‘ಪರೀಕ್ಷಾ ಪೇ ಚರ್ಚಾ’ ಮಾಡುವುದರಲ್ಲಿ ನಿರತರಾಗಿರುವ ಪ್ರಧಾನಿ ಮೋದಿ ಅವರು ‘ಮೆಹಂಗಾಯಿ ಪೇ ಚರ್ಚಾ’ ಯಾವಾಗ ನಡೆಸುತ್ತಾರೆ ಎಂದು ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಪ್ರಶ್ನಿಸಿದ್ದಾರೆ.

‘ಪರೀಕ್ಷಾ ಪೇ ಚರ್ಚಾ’ದಂಥ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಪ್ರಧಾನಿ ಮಗ್ನರಾಗಿದ್ದಾರೆ. ಹಣದುಬ್ಬರ, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಸಮಯವಿಲ್ಲ ಎಂದು ತೋರುತ್ತದೆ’ ಎಂದು ವ್ಯಂಗ್ಯವಾಗಿ ನುಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT