ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ ವಂಚನೆ: ಜೆಎನ್‌ಯು ಸೇರಿ ಹಲವು ವಿ.ವಿಗಳ ಸಿಬ್ಬಂದಿ ಹಣ ವಸೂಲಿ

Last Updated 7 ಜನವರಿ 2023, 14:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜೆಎನ್‌ಯು ಮಾಜಿ ಉದ್ಯೋಗಿಯೊಬ್ಬರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ(ಡಿಡಿಎ) ವಸತಿ ಅಭಿವೃದ್ಧಿ ಯೋಜನೆ ಅಡಿ ಮನೆಗಳನ್ನು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಹಣ ವಂಚಿಸಿರುವುದಾಗಿ ಜೆಎನ್‌ಯು ಮತ್ತು ಐಐಟಿ– ದೆಹಲಿಯ ಹಲವು ಪ್ರಾಧ್ಯಾಪಕರು ಆರೋಪಿಸಿದ್ದಾರೆ.

ನಿವಾಸಗಳಿಗಾಗಿ ಸುಮಾರು ಏಳು ವರ್ಷಗಳ ಕಾಲ ಕಾದರೂ ನಿವಾಸಗಳು ಮಂಜೂರಾಗದೇ ಇದ್ದಾಗ ಸಂತ್ರಸ್ತರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯು ವಂಚನೆ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜೆಎನ್‌ಯು ಪರಿಸರ ವಿಜ್ಞಾನ ವಿಭಾಗದಲ್ಲಿ ತಾಂತ್ರಿಕ ಉದ್ಯೋಗಿ ಆಗಿದ್ದ ಡಾ. ಡಿ.ಪಿ. ಗಾಯಕ್‌ವಾಡ್‌ ಅವರು ತಮ್ಮ ನಿವೃತ್ತಿಗೆ ಕೆಲವೇ ದಿನಗಳು ಇರುವಂತೆ ನೊಬೆಲ್‌ ಸೋಶಿಯೊ–ಸೈಂಟಿಫಿಕ್‌ ವೆಲ್‌ಫೇರ್‌ ಆರ್ಗನೈಜೇಷನ್‌ (ಎನ್‌ಎಸ್‌ಎಸ್‌ಡಬ್ಲ್ಯುಒ) ಹೆಸರಿನ ವಸತಿ ಸಂಸ್ಥೆಯ ಕುರಿತು ತಮ್ಮ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದರು. ಈ ಸಂಸ್ಥೆಯು ದ್ವಾರಕ– ನಜಾಫ್‌ಗಢ ಪ್ರದೇಶದ ಎಲ್‌– ವಲಯದಲ್ಲಿ (ದೆಹಲಿಯಲ್ಲಿ ಡಿಡಿಎ ಗುರುತಿಸಿರುವ ಸುಮಾರು 23,000 ಹೆಕ್ಟೇರ್‌ ಪ್ರದೇಶದ ವಸತಿ ಪ್ರದೇಶ) ಭೂಮಿ ಹೊಂದಿರುವುದಾಗಿ ಹೇಳಿದ ಅವರು ಭೂಮಿಯ ಸದಸ್ಯತ್ವವನ್ನು ಸಹೋದ್ಯೋಗಿಗಳಿಗೆ ಮಾರಾಟ ಮಾಡಿದರು.

ಈ ವಸತಿ ಯೋಜನೆಯು ಆರಂಭವಾಗಿದೆ ಎಂದು ನಂಬಿಸಿದ್ದ ಅವರು, ಹಲವಾರು ಕಂತುಗಳಲ್ಲಿ ₹2 ಲಕ್ಷದಿಂದ ₹16 ಲಕ್ಷದ ವರೆಗೆ ಜೆಎನ್‌ಯು, ಐಐಟಿ–ದೆಹಲಿ ಮತ್ತು ಇತರ ವಿ.ವಿಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದಿಂದ ಮೂರು ವರ್ಷಗಳ ಕಾಲ ಹಣ ಪಡೆದಿದ್ದರು.

ಈ ಕುರಿತು ಮಾಹಿತಿ ನೀಡಿರುವ ವಂಚನೆಯ ಸಂತ್ರಸ್ತ, ಜೆಎನ್‌ಯು ಪ್ರಧ್ಯಾಪಕ ಗೋವರ್ಧನ್‌ ದಾಸ್‌, ‘ನಮ್ಮನ್ನು ನಂಬಿಸುವ ಸಲುವಾಗಿ ಖಾಲಿ ನಿವೇಶನಗಳನ್ನು ತೋರಲು ಗಾಯಕ್‌ವಾಡ್‌ ಅವರು ಕರೆದುಕೊಂಡು ಹೋಗಿದ್ದರು. ಎನ್‌ಎಸ್‌ಎಸ್‌ಡಬ್ಲ್ಯುಒ ಈ ನಿವೇಶನಗಳ ಮಾಲೀಕನಲ್ಲ ಎಂಬುದು ತಡವಾಗಿ ನಮಗೆ ತಿಳಿದುಬಂದಿತು. ನಮ್ಮಿಂದ ದೊಡ್ಡ ಮಟ್ಟದ ಹಣ ಸಂಗ್ರಹಿಸಿದ ಬಳಿಕ ಅವರು ನಮ್ಮ ಜೊತೆ ಮಾತನಾಡುವುದನ್ನು ನಿಲ್ಲಿಸಿದರು. ಬಳಿಕ ನಮ್ಮ ದೂರವಾಣಿ ಸಂಖ್ಯೆಗಳನ್ನು ಬ್ಲಾಕ್‌ ಮಾಡಿದರು’ ಎಂದು ಹೇಳಿದರು.

‘2019ರಲ್ಲಿ ನಮ್ಮನ್ನು ಪುನಃ ವಂಚಿಸಲು ಪ್ರಯತ್ನಿಸಿದ ಅವರು, ನಿವೇಶನವನ್ನು ಮತ್ತೊಂದು ಸಂಸ್ಥೆಗೆ ವರ್ಗಾಯಿಸಿರುವುದಾಗಿ ಹೇಳಿದರು. ಆದರೆ ಆ ಕುರಿತು ಯಾವುದೇ ದಾಖಲೆಗಳನ್ನು ನೀಡಲಿಲ್ಲ’ ಎಂದರು.

ಎಲ್‌–ವಲಯದ ನಿವೇಶನಗಳ ಮೇಲೆ ಹೂಡಿಕೆ ಮಾಡುವವರು ಜಾಗೃತಿಯಿಂದ ಹೂಡಿಕೆ ಮಾಡಬೇಕು ಎಂದು ಡಿಡಿಎ ಹಲವಾರು ಬಾರಿ ಜಾಹೀರಾತುಗಳ ಮೂಲಕ ಎಚ್ಚರಿಕೆ ನೀಡಿದ್ದರೂ ಜನರು ಮೋಸ ಹೋಗುತ್ತಲೇ ಇದ್ದಾರೆ ಎಂದು ರಿಯಲ್‌ ಎಸ್ಟೇಟ್‌ ಕ್ಷೇತ್ರದ ತಜ್ಞರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT