ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ಮಧ್ಯದಲ್ಲಿ ಕೋವಿಡ್‌ ಗರಿಷ್ಠ ಮಟ್ಟಕ್ಕೆ

ಸಕ್ರಿಯ ಪ್ರಕರಣಗಳ ಸಂಖ್ಯೆ 48 ಲಕ್ಷ: ದಿನದ ಏರಿಕೆ 4.4 ಲಕ್ಷಕ್ಕೆ: ಐಐಟಿ ವಿಜ್ಞಾನಿಗಳ ಅಂದಾಜು
Last Updated 26 ಏಪ್ರಿಲ್ 2021, 21:04 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪಿಡುಗಿನ ಎರಡನೇ ಅಲೆಯು ಮೇ 14–18ರ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ ತಲುಪಬಹುದು. ಈ ಹೊತ್ತಿಗೆ ದೇಶದಲ್ಲಿ 38 ಲಕ್ಷದಿಂದ 48 ಲಕ್ಷ ಸಕ್ರಿಯ ಪ್ರಕರಣಗಳು ಇರಬಹುದು. ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆಯು 4.4 ಲಕ್ಷದಷ್ಟಾಗಬಹುದು ಎಂದು ಗಣಿತಶಾಸ್ತ್ರೀಯ ಮಾದರಿಯೊಂದರ ಆಧಾರದಲ್ಲಿ ಐಐಟಿ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಈ ಲೆಕ್ಕಾಚಾರ ಹಾಕಿದ್ದಾರೆ.

ಮೇ 11-15ರ ನಡುವೆ 33 ಲಕ್ಷದಿಂದ 35 ಲಕ್ಷ ಸಕ್ರಿಯ ಪ್ರಕರಣಗಳೊಂದಿಗೆ ಸಾಂಕ್ರಾಮಿಕ ರೋಗವು ಗರಿಷ್ಠ ಹಂತ ತಲುಪಿ, ಮೇ ಅಂತ್ಯದ ವೇಳೆಗೆ ಇಳಿಕೆ ಕಾಣಲಿದೆ ಎಂದು ತಜ್ಞರು ಕಳೆದ ವಾರ ತಿಳಿಸಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತು ಗರಿಷ್ಠ ಮಟ್ಟ ತಲುಪುವ ದಿನಗಳನ್ನು ಅವರು ಇದೀಗ ಪರಿಷ್ಕರಿಸಿದ್ಧಾರೆ.

ಏಪ್ರಿಲ್ 15ರ ವೇಳೆಗೆ ದೇಶದಲ್ಲಿ ಸಕ್ರಿಯ ಸೋಂಕುಗಳು ಗರಿಷ್ಠ ಮಟ್ಟದಲ್ಲಿ ಇರಲಿವೆ ಎಂದು ಈ ತಿಂಗಳ ಆರಂಭದಲ್ಲಿ ಊಹಿಸಲಾಗಿತ್ತು. ಆದರೆ ಅದು ನಿಜವಾಗಲಿಲ್ಲ.

‘ಈ ಬಾರಿ ಕನಿಷ್ಠ ಮತ್ತು ಗರಿಷ್ಠ ಮೌಲ್ಯಗಳನ್ನು ನೀಡಿದ್ದೇನೆ. ನೈಜ ಸಂಖ್ಯೆಗಳು ನಾನು ಅಂದಾಜಿಸಿರುವ ಸಂಖ್ಯೆಗಳ ಒಳಗೇ ಬರುತ್ತವೆ ಎಂಬ ವಿಶ್ವಾಸವಿದೆ’ ಎಂದು ಖರಗಪುರ ಐಐಟಿ ಪ್ರಾಧ್ಯಾಪಕ ಮನಿಂದರ್ ಅಗರ್‌ವಾಲ್ ತಿಳಿಸಿದ್ದಾರೆ.

ಸೂತ್ರ ಎಂಬ ಮಾದರಿಯ ಆಧಾರದಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ.‘ಸೂತ್ರ’ ಮಾದರಿಯಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳಿವೆ ಎಂದುವಿಜ್ಞಾನಿಗಳುಅಪ್ರಕಟಿತ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ಮೂರು ಮುಖ್ಯ ಅಂಶಗಳನ್ನು ಇರಿಸಿಕೊಂಡು ಸೂತ್ರ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಸೋಂಕು ಸಂಪರ್ಕ ದರ ಅಂದರೆ, ಸೋಂಕಿತ ವ್ಯಕ್ತಿಯು ಪ್ರತಿ ದಿನ ಎಷ್ಟು ಜನರಿಗೆ ಸೋಂಕು ತಗಲಿಸುತ್ತಾನೆ ಎಂಬ ಸಂಖ್ಯೆ, ಜನ ಸಮುದಾಯವು ಪಿಡುಗಿಗೆ ತೆರೆದುಕೊಂಡಿರುವ ಮಟ್ಟ ಮತ್ತು ದೃಢಪಟ್ಟ ಮತ್ತು ದೃಢಪಡದ ಪ್ರಕರಣಗಳ ಅನುಪಾತಗಳ ಆಧಾರದಲ್ಲಿ ಪಿಡುಗು ಯಾವಾಗ ಗರಿಷ್ಠ ಮಟ್ಟಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

ಏಪ್ರಿಲ್‌ ಮಧ್ಯ ಭಾಗ ಮತ್ತು ಮೇ ಮಧ್ಯ ಭಾಗದ ನಡುವಲ್ಲಿ ಪಿಡುಗು ಗರಿಷ್ಠ ಮಟ್ಟಕ್ಕೆ ತಲುಪಬಹುದು ಎಂದು ಅಶೋಕ ವಿಶ್ವವಿದ್ಯಾಲಯದ ಗೌತಮ್‌ ಮೆನನ್‌ ಮತ್ತು ಅವರ ತಂಡವು ಇತ್ತೀಚೆಗೆ ಅಂದಾಜಿಸಿತ್ತು. ಇದು ಅಲ್ಪಾವಧಿಯ ಅಂದಾಜು. ಯಾವುದೇ ರೀತಿಯಲ್ಲಿ ಲೆಕ್ಕ ಹಾಕಿದರೂ ಪಿಡುಗಿನ ಅನಿಶ್ಚಿತತೆಯಿಂದಾಗಿ ನಿಖರವಾಗಿ ಅಂದಾಜಿಸುವುದು ಸಾಧ್ಯವಿಲ್ಲ ಎಂದೂ ಅವರುಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT