ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಇರುವುದು ಸಿದ್ಧಾಂತಗಳ ಹೋರಾಟ: ಹಿಮಂತ ಬಿಶ್ವ ಶರ್ಮಾ

Last Updated 29 ಮಾರ್ಚ್ 2021, 19:09 IST
ಅಕ್ಷರ ಗಾತ್ರ

ಗುವಾಹಟಿ: ‘ಅಸ್ಸಾಂನಲ್ಲಿ ನಿಜವಾದ ಸ್ಪರ್ಧೆ ಇರುವುದು ನರೇಂದ್ರ ಮೋದಿ ಹಾಗೂ ಬದ್ರುದ್ದೀನ್‌ ಅಜ್ಮಲ್‌ ಅವರು ಪ್ರತಿಪಾದಿಸುವ ಸಿದ್ಧಾಂತಗಳ ಮಧ್ಯೆ’ ಎಂದು ಅಸ್ಸಾಂನ ಸಚಿವ ಹಾಗೂ ಬಿಜೆಪಿಯ ಚುನಾವಣಾ ನೀತಿ ನಿರೂಪಕ ಹಿಮಂತ ಬಿಶ್ವ ಶರ್ಮಾ ಅವರು ಸೋಮವಾರ ಎರಡು ಚುನಾವಣಾ ರ್‍ಯಾಲಿಗಳಲ್ಲಿ ಹೇಳಿದ್ದಾರೆ.

ಚುನಾವಣೆಗೆ ಎರಡು ದಿನಗಳು ಉಳಿದಿರುವ ಸಂದರ್ಭದಲ್ಲಿ ಅಜ್ಮಲ್‌ ಅವರ ಮೇಲೆ ನಡೆಸಿರುವ ಈ ವಾಗ್ದಾಳಿ
ಯನ್ನು, ‘ಮತಗಳನ್ನು ಧ್ರುವೀಕರಿಸಲು ನಡೆಸಿದ ಪ್ರಯತ್ನ’ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿ ಏ. 1ರಂದು ಎರಡನೇ ಹಾಗೂ ಏ. 6ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಈ ಪ್ರದೇಶದ ಕೆಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ.

‘ಇದು ಬಿಜೆಪಿ– ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಗಳ ನಡುವಿನ ಹೋರಾಟವಲ್ಲ. ಮೋದಿ ಮತ್ತು ಅಜ್ಮಲ್‌ ಅವರ ಸಿದ್ಧಾಂತಗಳ ನಡುವಣ ಹೋರಾಟ. ನಾವು ಅಧಿಕಾರಕ್ಕೆ ಬಂದರೆ ಮದರಸಾಗಳನ್ನು ತೆರೆಯುತ್ತೇವೆ ಎಂದು ಅಜ್ಮಲ್‌ ಹೇಳುತ್ತಾರೆ. ಆದರೆ, ನಮಗೆ ಹೆಚ್ಚು ಎಂಜಿನಿಯರಿಂಗ್‌ ಕಾಲೇಜುಗಳು ಬೇಕು ಎಂದು ಮೋದಿ ಹೇಳುತ್ತಾರೆ. ಅವರು ಮುಲ್ಲಾಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆಯೇ ವಿನಾ ವೈದ್ಯರು, ಎಂಜಿನಿಯರ್‌ಗಳನ್ನಲ್ಲ.ನಮ್ಮ ಸರ್ಕಾರದ ಬಂದರೆ ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ ಮಹಿಳೆಯರನ್ನು ಪ್ರೋತ್ಸಾಹಿಸಲಾಗುವುದು ಎಂದು ಅಜ್ಮಲ್‌ ಹೇಳುತ್ತಾರೆ. ಅವರು ಅಧಿಕಾರಕ್ಕೆ ಬಂದರೆ ನಮ್ಮ ಸಮಾಜ, ಯುವಕರು ಯಾವ ದಿಕ್ಕಿನಲ್ಲಿ ಸಾಗಬಹುದು ಎಂಬುದನ್ನು ನೀವೇ ಊಹಿಸಿ’ ಎಂದು ಶರ್ಮಾ ಹೇಳಿದ್ದಾರೆ.

‘ಸರ್ಕಾರದ ಹಣದಿಂದ ಧಾರ್ಮಿಕ ಶಿಕ್ಷಣ ನೀಡುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಎಲ್ಲಾ ಮದರಸಾಗಳನ್ನು ಮುಚ್ಚಲು ನಿರ್ಧರಿಸಿತ್ತು. ‘ಬಿಜೆಪಿಗೆ ಮತ ನೀಡುವ ಮೂಲಕ ನಮ್ಮ ಸಿದ್ಧಾಂತವನ್ನು ಅಜ್ಮಲ್‌ ಅವರಿಂದ ರಕ್ಷಿಸಿಕೊಳ್ಳಬೇಕು’ ಎಂದು ಶರ್ಮಾ ಮತದಾರರಲ್ಲಿ ಮನವಿ ಮಾಡಿದರು.

ಜಾಹೀರಾತು: ಬಿಜೆಪಿ ವಿರುದ್ಧ ದೂರು

ಗುವಾಹಟಿ (ಪಿಟಿಐ): ‘ಮೊದಲ ಹಂತದ ಚುನಾವಣೆ ನಡೆದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ’ ಎಂಬ ಪಕ್ಷದ ಜಾಹೀರಾತನ್ನು ಸುದ್ದಿಯ ರೂಪದಲ್ಲಿ ಪ್ರಕಟಿಸಿದ ಆರೋಪ ಹೊರಿಸಿ ಕಾಂಗ್ರೆಸ್‌ ಸೋಮವಾರ ಅಸ್ಸಾಂನ ಮುಖ್ಯ ಚುನಾವಣಾ ಅಧಿಕಾರಿ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ರಣಜಿತ್‌ಕುಮಾರ್‌ ದಾಸ್‌ ಹಾಗೂ ಎಂಟು ಪ್ರಮುಖ ಪತ್ರಿಕೆಗಳ ವಿರುದ್ಧ ದೂರು ನೀಡಲಾಗಿದ್ದು, ‘ಸುದ್ದಿ ರೂಪದ ಜಾಹೀರಾತಿನ ಮೂಲಕ ಪಕ್ಷವು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಲಾಗಿದೆ.

‘ಮೊದಲ ಹಂತದ ಚುನಾವಣೆಯು ಬಿಜೆಪಿಗೆ ಸೋಲಿನ ಮುನ್ಸೂಚನೆ ನೀಡಿದೆ. ಅದನ್ನು ಎಲ್ಲಾ ನಾಯಕರು ಒಪ್ಪಿಕೊಂಡಿದ್ದಾರೆ. ಈ ರೀತಿ ಜಾಹೀರಾತು ನೀಡುವ ಮೂಲಕ ತಮ್ಮ ವೈಫಲ್ಯವನ್ನು ಅವರು ಮುಚ್ಚಿಕೊಂಡಿದ್ದಾರೆ. ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗೆ ಇರುವುದಾದರೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಜಾಹೀರಾತು ನೀಡುವ ಅಗತ್ಯವೇನಿತ್ತು’ ಎಂದು ಕಾಂಗ್ರೆಸ್‌ ಮುಖಂಡ ರಿಪುನ್‌ ಬೋರಾ ಪ್ರಶ್ನಿಸಿದ್ದಾರೆ.

‘46 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಆರಂಭದಲ್ಲಿ ಬಿಜೆಪಿ ಹೇಳಿತ್ತು. ಆದರೆ, ಜಾಹೀರಾತಿನಲ್ಲಿ ಎಲ್ಲಾ 47 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳಿಕೊಂಡಿದೆ. ಅದಾದನಂತರ, ನಾವು 42 ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳಿದರು. ಅಮಿತ್‌ ಶಾ ಅವರು ‘ನಾವು 37 ಕಡೆ ಗೆಲ್ಲುತ್ತೇವೆ’ ಎಂದಿದ್ದಾರೆ. ಗೆಲುವಿನ ವಿಚಾರದಲ್ಲಿ ಬಿಜೆಪಿ ನಾಯಕರಲ್ಲೇ ಏಕಾಭಿಪ್ರಾಯವಿಲ್ಲ ಎಂದು ಬೋರಾ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT