ಹೌರಾ, ಪಶ್ಚಿಮ ಬಂಗಾಳ: ‘ರಾಮನವಮಿ ನಿಮಿತ್ತ ಇಲ್ಲಿನ ಕಾಜಿಪಾಡಾ ಪ್ರದೇಶದಲ್ಲಿ ಗುರುವಾರ ಶುರುವಾಗಿದ್ದ ಹಿಂಸಾಚಾರ ಶುಕ್ರವಾರವೂ ಭುಗಿಲೆದ್ದಿದ್ದು, ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
‘ಸ್ಥಳದಲ್ಲಿ ಗುಂಪು ಸೇರಿದ್ದವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಸಿಆರ್‌ಪಿಸಿಯ ಕಲಂ 144ರ ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.
‘ಗಲಭೆ ಸಂಬಂಧ ಈವರೆಗೆ ಒಟ್ಟು 45 ಮಂದಿಯನ್ನು ಬಂಧಿಸಲಾಗಿದೆ. ಶುಕ್ರವಾರ ಮಧ್ಯಾಹ್ನದವರೆಗೂ ಪರಿಸ್ಥಿತಿ ಶಾಂತವಾಗಿತ್ತು. ಅನಂತರ ದುಷ್ಕರ್ಮಿಗಳು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಗಲಭೆಕೋರರ ಪೈಕಿ ಕೆಲವರನ್ನು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಸ್ಥಳೀಯರು ಮನೆ ಬಿಟ್ಟು ಹೊರ ಬಂದಿಲ್ಲ. ಕಲ್ಲು ತೂರಾಟದಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ರಸ್ತೆಗಿಳಿಯದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ. ಒಂದೊಮ್ಮೆ ಮನೆಯಿಂದ ಹೊರಗೆ ಬಂದರೆ ಅಂತಹವರನ್ನು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ’ ಎಂದು ವಿವರಿಸಿದ್ದಾರೆ.
‘ಗಲಭೆ ಪೀಡಿತ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್) ತುಕಡಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆರ್‌ಎಎಫ್ ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದ್ದಾರೆ’ ಎಂದಿದ್ದಾರೆ.
‘ರಾಮನವಮಿ ಅಂಗವಾಗಿ ಬಿ.ಇ.ಕಾಲೇಜಿನಿಂದ ರಾಮಕೃಷ್ಣಾಪುರ ಘಾಟ್‌ವರೆಗೂ ಶೋಭಾ ಯಾತ್ರೆ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅನುಮತಿ ಪಡೆದಿತ್ತು. ಅನುಮತಿ ದೊರೆತ ಮಾರ್ಗದಲ್ಲಿಯೇ ಕಾರ್ಯಕರ್ತರು ಯಾತ್ರೆ ಕೈಗೊಂಡಿದ್ದರು. ವಿಎಚ್‌ಪಿಯವರು ಯಾತ್ರೆಯ ಮಾರ್ಗ ಬದಲಿಸಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಹ ಉಸ್ತುವಾರಿ ಅಮಿತ್ ಮಾಳವೀಯ ಆರೋಪಿಸಿದ್ದಾರೆ.
ಗಲಭೆ ಹಿಂದೆ ಬಿಜೆಪಿ ಕೈವಾಡ: ಮಮತಾ
‘ಹಿಂಸಾಚಾರದ ಹಿಂದೆ ಬಿಜೆಪಿ ಹಾಗೂ ಇತರೆ ಹಿಂದೂಪರ ಸಂಘಟನೆಗಳ ಕೈವಾಡವಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಶಾಂತಿ ಮತ್ತು ಸಂಯಮದಿಂದ ವರ್ತಿಸುವಂತೆ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
‘ಹೌರಾದಲ್ಲಿ ನಡೆದಿರುವ ಘಟನೆಯು ದುರದೃಷ್ಟಕರ. ಗಲಭೆಯ ಹಿಂದೆ ಹಿಂದೂಗಳು ಅಥವಾ ಮುಸ್ಲಿಂ ಸಮುದಾಯದವರ ಕೈವಾಡವಿಲ್ಲ. ಬಿಜೆಪಿ, ಬಜರಂಗ ದಳ ಹಾಗೂ ಇತರ ಹಿಂದೂಪರ ಸಂಘಟನೆಗಳು ಇದಕ್ಕೆ ಹೊಣೆಯಾಗಿವೆ’ ಎಂದು ದೂರಿದ್ದಾರೆ.
‘ಇದು ಪೂರ್ವಯೋಜಿತ ಕೃತ್ಯ. ಪಿಸ್ತೂಲ್ ಹಾಗೂ ಪೆಟ್ರೋಲ್ ಬಾಂಬ್‌ಗಳನ್ನು ಹಿಡಿದಿದ್ದ ಗಲಭೆಕೋರರು ಉದ್ದೇಶಪೂರ್ವಕವಾಗಿಯೇ ಮತ್ತೊಂದು ಗುಂಪಿನ ಮೇಲೆ ದಾಳಿ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಾನಿಗೊಳಗಾದವರಿಗೆ ಅಗತ್ಯ ನೆರವು ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.
ರಾಜ್ಯಪಾಲರ ಜೊತೆ ಶಾ ಮಾತುಕತೆ
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಜೊತೆ ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಗಲಭೆ ಪೀಡಿತ ಪ್ರದೇಶದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
**
ರಾಮಭಕ್ತರ ಮೇಲೆ ದಾಳಿ ನಡೆಯುತ್ತಿದ್ದಾಗ ಪಶ್ಚಿಮ ಬಂಗಾಳ ಸರ್ಕಾರವು ಮೂಕ ಪ್ರೇಕ್ಷಕನಂತೆ ನೋಡುತ್ತಿತ್ತು. ಘಟನೆ ಕುರಿತು ಸರ್ಕಾರ ನೀಡಿರುವ ಹೇಳಿಕೆ ನಾಚಿಕೆಗೇಡಿನದ್ದು.
–ಅನುರಾಗ್ ಠಾಕೂರ್, ಕೇಂದ್ರ ಸಚಿವ
**
ಔರಂಗಬಾದ್ ಗಲಭೆ: ಗಾಯಗೊಂಡಿದ್ದ ವ್ಯಕ್ತಿ ಸಾವು
ಮಹಾರಾಷ್ಟ್ರ ವರದಿ: ‘ಔರಂಗಬಾದ್‌ನ ಕಿರಾದ್‌ಪುರ ಪ್ರದೇಶದಲ್ಲಿರುವ ರಾಮ ಮಂದಿರದ ಬಳಿ ಬುಧವಾರ ತಡರಾತ್ರಿ ನಡೆದಿದ್ದ ಗಲಭೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಶುಕ್ರವಾರ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಪೊಲೀಸ್ ಠಾಣೆ ಮೇಲೆ ನಡೆದಿದ್ದ ದಾಳಿ ಸಂಬಂಧ ಈವರೆಗೆ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಘಟನಾ ಸ್ಥಳದಲ್ಲಿ ಮೀಸಲು ಪೊಲೀಸ್ ಪಡೆಯ (ಎಸ್‌ಆರ್‌ಪಿಎಫ್) ಐದು ತುಕಡಿಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಘಟನೆಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 12 ಜನ ಗಾಯಗೊಂಡಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ’ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.