ಭಾನುವಾರ, ಫೆಬ್ರವರಿ 28, 2021
21 °C
ಉಭಯ ದೇಶಗಳ ನಡುವೆ ಸುದೀರ್ಘ ಚರ್ಚೆ

ಪೂರ್ವ ಲಡಾಖ್‌ನಿಂದ ತ್ವರಿತಗತಿಯಲ್ಲಿ ಸೇನೆ ವಾಪಸ್: ಭಾರತ–ಚೀನಾ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಖ್‌ ಭಾಗದಿಂದ ಸೇನಾ ತುಕಡಿಗಳನ್ನು ಸಾಧ್ಯವಾದಷ್ಟು ಶೀಘ್ರ ವಾಪಸ್‌ ಕರೆಯಿಸಿಕೊಳ್ಳುವ ಕುರಿತಂತೆ ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ.

ಗಡಿ ವಿವಾದ ಕುರಿತಂತೆ ನಡೆದ ಒಂಬತ್ತನೇ ಸುತ್ತಿನ ಸೇನಾ ಕಮಾಂಡರ್‌ಗಳ ಮಾತುಕತೆ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ.

‘ಮಾತುಕತೆಯು ಸಕಾರಾತ್ಮಕ ಮತ್ತು ರಚನಾತ್ಮಕವಾಗಿತ್ತು. ಮಾತುಕತೆಯಿಂದ ಪರಸ್ಪರ ವಿಶ್ವಾಸ ಮತ್ತು ತಿಳಿವಳಿಕೆ ವೃದ್ಧಿಸಲು ಈ ಸಭೆ ಪೂರಕವಾಗಿತ್ತು ಎನ್ನುವುದನ್ನು ಉಭಯ ದೇಶಗಳು ಒಪ್ಪಿಕೊಂಡಿವೆ’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

’ಮುಂಚೂಣಿಯಲ್ಲಿರುವ ಪಡೆಗಳು ಸಂಯಮ ಕಾಪಾಡುವಂತೆ ಪರಿಣಾಮಕಾರಿ ಪ್ರಯತ್ನಗಳನ್ನು ಕೈಗೊಳ್ಳಲು ಉಭಯ ದೇಶಗಳು ಒಪ್ಪಿವೆ. ಭಾರತ–ಚೀನಾ ಗಡಿಯ ಪಶ್ಚಿಮ ವಲಯದ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪರಿಸ್ಥಿತಿ ನಿಯಂತ್ರಣದಲ್ಲಿರುವಂತೆ ಕ್ರಮಗಳನ್ನು ಕೈಗೊಳ್ಳಲು ಮತ್ತು ಶಾಂತಿ ಕಾಪಾಡಲು ಒಪ್ಪಲಾಗಿದೆ’ ಎಂದು ತಿಳಿಸಲಾಗಿದೆ.

ವಾಸ್ತವ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಪೂರ್ವ ಲಡಾಖ್‌ನಲ್ಲಿ ಚೀನಾ ಸರಹದ್ದಿನಲ್ಲಿರುವ ಮೊಲ್ಡೊ ಗಡಿಯಲ್ಲಿ ಸುಮಾರು 16 ಗಂಟೆಗಳ ಕಾಲ ಸೇನಾ ಕಮಾಂಡರ್‌ಗಳ ಚರ್ಚೆ ನಡೆಯಿತು. ಭಾನುವಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಿದ್ದ ಮಾತುಕತೆ, ಸೋಮವಾರ ಬೆಳಗಿನ ಜಾವ 2.30 ಗಂಟೆಗೆ ಮುಗಿದಿದೆ.

‘10ನೇ ಸುತ್ತಿನ ಕಮಾಂಡರ್‌ಗಳ ಮಟ್ಟದ ಮಾತುಕತೆಯನ್ನು ಶೀಘ್ರದಲ್ಲಿ ನಡೆಸಲು ಸಹ ಒಪ್ಪಲಾಗಿದೆ.

ಪೂರ್ವ ಲಡಾಖ್‌ನ ಸಂಘರ್ಷ ನಡೆಯುವ ಸ್ಥಳಗಳಿಂದ ಸೇನಾ ತುಕಡಿಗಳನ್ನು ಯಾವ ರೀತಿ ವಾಪಸ್‌ ಕರೆಯಿಸಿಕೊಳ್ಳಬೇಕು ಎನ್ನುವ ಯೋಜನೆ ಕುರಿತು ಉಭಯ ದೇಶಗಳ ಕಮಾಂಡರ್‌ಗಳು ವಿಸ್ತೃತ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಭಾರತದ ಪರವಾಗಿ ಲೆಫ್ಟಿನೆಂಟ್‌ ಜನರಲ್‌ ಪಿಜೆಕೆ ಮೆನನ್‌ ಮತ್ತು ಚೀನಾದ ಪರವಾಗಿ ಮೇಜರ್‌ ಜನರಲ್‌ ಲಿಯು ಲಿನ್‌ ಮಾತುಕತೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು