ಶನಿವಾರ, ಸೆಪ್ಟೆಂಬರ್ 26, 2020
22 °C
ಮಹಾರಾಷ್ಟ್ರದ ಗಡಿವತ್‌ ಗ್ರಾಮದ ವಿದ್ಯಾರ್ಥಿಗಳ ಉತ್ಸಾಹ

ಜಪಾನಿ ಭಾಷೆ ಕಲಿಯುತ್ತಿರುವ ಕುಗ್ರಾಮದ ಮಕ್ಕಳು

ಪಿಟಿಐ Updated:

ಅಕ್ಷರ ಗಾತ್ರ : | |

ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್‌ನಿಂದ 25 ಕಿ.ಮೀ ದೂರದಲ್ಲಿರುವ ಗಡಿವತ್ ಗ್ರಾಮಕ್ಕೆ ಇಂದಿಗೂ ಉತ್ತಮ ರಸ್ತೆ ಸಂಪರ್ಕವಿಲ್ಲ. ಅಗತ್ಯ ಮೂಲಸೌಕರ್ಯಗಳು ತಲುಪಿಲ್ಲ. ಆದರೆ, ಇಂಟರ್‌ನೆಟ್‌ ಸಂಪರ್ಕ ಜಗತ್ತಿನೊಂದಿಗೆ ಬೆಸೆದಿದೆ. ಹೊಸ ಅವಕಾಶಗಳನ್ನು ತೆರೆದಿದೆ.

ತಂತ್ರಜ್ಞಾನ ಮತ್ತು ರೊಬೊಟಿಕ್ ಕುರಿತ ಒಲವು ಮಹಾರಾಷ್ಟ್ರದ ಈ ಕುಗ್ರಾಮದ ಮಕ್ಕಳಲ್ಲಿದೆ. ಇಲ್ಲಿ ಜಿಲ್ಲಾ ಪರಿಷತ್ ನಡೆಸುತ್ತಿರುವ ಶಾಲೆಯ ವಿದ್ಯಾರ್ಥಿಗಳಲ್ಲಿ ಜಪಾನಿ ಭಾಷೆ ಕಲಿಯುವ ಉತ್ಸಾಹವೂ ಇದೆ. ಇಂಟರ್‌ನೆಟ್‌ ಈ ಮಕ್ಕಳಿಗೆ ವರವಾಗಿದೆ.

ಈ ಸರ್ಕಾರಿ ಶಾಲೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ವಿದೇಶಿ ಭಾಷೆ ಕಾರ್ಯಕ್ರಮವನ್ನು ಆರಂಭಿಸಿತು. ಇದರ ಪ್ರಕಾರ, 4 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಾವು ಕಲಿಯಲು ಬಯಸುವ ಭಾಷೆ ಆಯ್ಕೆಗೆ ಅವಕಾಶ ನೀಡಲಾಯಿತು.

ಆಶ್ಚರ್ಯವೆಂದರೆ, ಬಹುತೇಕ ಮಕ್ಕಳು ತಮಗೆ ರೊಬೊಟಿಕ್ ಮತ್ತು ತಂತ್ರಜ್ಞಾನದತ್ತ ಆಸಕ್ತಿ, ಜಪಾನಿ ಭಾಷೆ ಕಲಿಯುವ ಒಲವು ಇರುವುದನ್ನು ತಿಳಿಸಿದರು ಎನ್ನುತ್ತಾರೆ ಶಾಲೆಯ ಶಿಕ್ಷಕ ದಾದಾಸಾಹೇಬ್ ನವಪುಟೆ.

ಆದರೆ, ಕಲಿಕೆಗೆ ಪೂರಕವಾದ ಪಠ್ಯ ಅಥವಾ ಪರಿಣತರ ಮಾರ್ಗದರ್ಶನ ಇರಲಿಲ್ಲ. ಈ ಕೊರತೆ ನೀಗಲು ಶಾಲೆಯ ಆಡಳಿತವು ತರ್ಜುಮೆಗೆ ನೆರವಾಗುವ ಅಪ್ಲಿಕೇಷನ್, ವಿಡಿಯೊಗಳ ಮೊರೆ ಹೋಯಿತು ಎಂದು ತಿಳಿಸಿದರು.

ಆದರೆ, ಈಗ ಔರಂಗಾಬಾದ್ ಮೂಲದ ಭಾಷಾ ಪರಿಣತ ಸುನಿಲ್ ಜೊಗ್ಡಿಯೊ ಅವರನ್ನು ನೇಮಿಸಿಕೊಂಡಿದೆ. ಅವರು ಉಚಿತವಾಗಿ ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ.

‘ನಾನು ಜುಲೈನಿಂದ ಇಲ್ಲಿಯವರೆಗೂ ಸುಮಾರು 20 ರಿಂದ 22 ತರಗತಿಗಳನ್ನು ತೆಗೆದುಕೊಂಡಿದ್ದೇನೆ. ಮಕ್ಕಳು ಕಲಿಕೆಗೆ ಆಸಕ್ತಿ ತೋರಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಕಲಿತು ಅದನ್ನು ನಿರೂಪಿಸಿದ್ದಾರೆ’ ಎಂದು ಜೊಗ್ಡಿಯೊ ಹೇಳಿದರು.

ಕೆಲವು ಮಕ್ಕಳು ಈಗ ಜಪಾನಿ ಭಾಷೆಯಲ್ಲಿ ವಾಕ್ಯ ರಚನೆ ಮಾಡುತ್ತಾರೆ. ‘ನಾವು ಮೊದಲು ಕೆಲ ಪ್ರಾಥಮಿಕ ಪದಗಳನ್ನು ಕಲಿತುಕೊಂಡಿದ್ದು, ಅದನ್ನು ವಾಕ್ಯವಾಗಿ ಹೊಂದಿಸಿ ಮಾತನಾಡುತ್ತಿದ್ದೇವೆ’ ಎನ್ನುತ್ತಾಳೆ 8ನೇ ತರಗತಿ ವಿದ್ಯಾರ್ಥಿನಿ.

ಜಿಲ್ಲಾ ಪರಿಷತ್ತಿನ ಶೈಕ್ಷಣಿಕ ವಿಸ್ತರಣಾಧಿಕಾರಿ ರಮೇಶ್ ಠಾಕೂರ್ ಅವರು, ಶಾಲೆಯಲ್ಲಿ ಸುಮಾರು 350 ಮಕ್ಕಳಿದ್ದು, ಇವರಲ್ಲಿ 70 ಮಕ್ಕಳು ಜಪಾನಿ ಭಾಷೆಯನ್ನು ಕಲಿಯುತ್ತಿದ್ದಾರೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು