ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಮಕ್ಕಳು ಪಡೆಯಲು ಬುಡಕಟ್ಟು ಮಹಿಳೆಯರಿಗೆ ಪ್ರೋತ್ಸಾಹಧನ: ಸಿಕ್ಕಿಂ ಸರ್ಕಾರ

Last Updated 16 ಜನವರಿ 2023, 15:38 IST
ಅಕ್ಷರ ಗಾತ್ರ

ಗ್ಯಾಂಗ್ಟಕ್‌: ಬುಡಕಟ್ಟು ಸಮುದಾಯದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರುವುದನ್ನು ಉತ್ತೇಜಿಸಲು ಸಿಕ್ಕಿಂ ಸರ್ಕಾರವು ಪ್ರೋತ್ಸಾಹಧನವನ್ನು ಘೋಷಿಸಿದೆ.

ದಕ್ಷಿಣ ಸಿಕ್ಕಿಂನ ಜೊರೆಥಂಗ್‌ ನಗರದಲ್ಲಿ ನಡೆದ ಮಘೆ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಅವರು ಈ ಘೋಷಣೆ ಮಾಡಿದರು. ‘ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಫಲವಂತಿಕೆ ದರವು ಕಡಿಮೆಯಾಗುತ್ತಿದೆ. ಒಬ್ಬ ಮಹಿಳೆಯು ಒಂದು ಮಗುವನ್ನು ಮಾತ್ರ ಹೆರುತ್ತಿದ್ದಾರೆ. ಆದ್ದರಿಂದ ಬುಡಕಟ್ಟು ಸಮುದಾಯದ ಜನಸಂಖ್ಯೆಯು ಕಡಿಮೆಯಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘365 ದಿನದ ಮಾತೃತ್ವ ರಜೆಯನ್ನು ಸರ್ಕಾರ ಘೋಷಣೆ ಮಾಡಿದೆ. ಪುರುಷರಿಗೆ 30 ದಿನಗಳ ಪಿತೃತ್ವ ರಜೆಯನ್ನು ನೀಡಲಾಗುತ್ತಿದೆ. ಎರಡನೇ ಮಗು ಹೆರುವ ಉದ್ಯೋಗಸ್ಥ ಮಹಿಳೆಗೆ ವೇತನ ಬಡ್ತಿ ನೀಡಲಾಗುವುದು. ಮೂರನೇ ಮಗುವನ್ನು ಪಡೆದರೆ, ಎರಡು ವೇತನ ಬಡ್ತಿ ನೀಡುವ ಪ್ರಸ್ತಾವವಿದೆ. ಆದರೆ, ಒಂದು ಮಗು ಹೆರುವ ಮಹಿಳೆಯರಿಗೆ ಈ ಹಣಕಾಸಿನ ನೆರವು ನೀಡಲಾಗುವುದಿಲ್ಲ’ ಎಂದರು.

‘ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಕೃತಕ ಗರ್ಭಧಾರಣೆ ಸೌಲಭ್ಯ ಒದಗಿಸಲಾಗಿದೆ. ಈ ಸೌಲಭ್ಯದ ಮೂಲಕ ಮಕ್ಕಳನ್ನು ಪಡೆಯುವ ಎಲ್ಲಾ ಮಹಿಳೆಯರಿಗೆ ₹ 3 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಇಲ್ಲಿಯವರೆಗು 38 ಮಹಿಳೆಯರು ಕೃತಕ ಗರ್ಭಧಾರಣೆ ಮೂಲಕ ಮಗು ಪಡೆಯುವ ಪ್ರಯತ್ನ ನಡೆಸಿದ್ದಾರೆ. ಇವರಲ್ಲಿ ಕೆಲವರು ತಾಯಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT