ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಬಾಂಗ್ಲಾ: ಏಳು ಒಪ್ಪಂದಗಳಿಗೆ ಸಹಿ

ಭಯೋತ್ಪಾದನೆ, ಮೂಲಭೂತವಾದ ವಿರುದ್ಧ ಜತೆಯಾಗಿ ಹೋರಾಡಲು ಪ್ರಧಾನಿ ಕರೆ
Last Updated 6 ಸೆಪ್ಟೆಂಬರ್ 2022, 18:58 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಣ ಪರಸ್ಪರ ವಿಶ್ವಾಸವನ್ನು ಮುರಿಯಲು ಯತ್ನಿಸುವ ಭಯೋತ್ಪಾದನೆ ಮತ್ತು ಮೂಲಭೂತವಾದಿ ಶಕ್ತಿಗಳನ್ನು ಎರಡೂ ದೇಶಗಳು ಜತೆಯಾಗಿ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಮೋದಿ ಅವರು ಮಂಗಳವಾರ ಹೀಗೆ ಹೇಳಿದ್ದಾರೆ.

‘ಭಯೋತ್ಪಾದನೆ ಮತ್ತು ಮೂಲಭೂತವಾದವನ್ನು ತಡೆಯುವ ವಿಚಾರದಲ್ಲಿ ನಾವಿಂದು ಸಹಕಾರಕ್ಕೆ ಒತ್ತು ಕೊಡಬೇಕಿದೆ. 1971ರ ಸ್ಫೂರ್ತಿಯನ್ನು ಸಜೀವವಾಗಿ ಇರಿಸಿಕೊಳ್ಳಬೇಕಿದೆ. ನಮ್ಮಲ್ಲಿನ ಪ‍ರಸ್ಪರ ವಿಶ್ವಾಸದ ಮೇಲೆ ದಾಳಿ ನಡೆಸುವವರನ್ನು ಜತೆಯಾಗಿ ಎದುರಿಸಬೇಕಿದೆ’ ಎಂದು ಮೋದಿ ಹೇಳಿದರು.

ರೈಲ್ವೆ, ಬಾಹ್ಯಾಕಾಶ ತಂತ್ರಜ್ಞಾನ, ನೀರು ಹಂಚಿಕೆ, ಸಂವಹನದಂತಹ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಏಳು ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.

ವಿವಿಧ ವಿಷಯಗಳ ಬಗೆಗಿನ ಸಹಕಾರ ಹೆಚ್ಚಿಸಲು ಇಬ್ಬರೂ ನಾಯಕರು ಸಮಗ್ರವಾದ ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರ ಹೇಳಿದ್ದಾರೆ.

ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಪಿಪಿಎ) ಬಗ್ಗೆ ಎರಡೂ ದೇಶಗಳ ನಡುವೆ ಸದ್ಯವೇ ಮಾತುಕತೆ ಆರಂಭವಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಕನಿಷ್ಠ ಅಭಿವೃದ್ಧಿ ಹೊಂದಿದ ದೇಶ ಎಂಬ ವರ್ಗದಿಂದ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ವರ್ಗಕ್ಕೆಬಾಂಗ್ಲಾದೇಶವು 2026ರಲ್ಲಿ ಪರಿವರ್ತನೆ ಹೊಂದಲಿದೆ. ಅದಕ್ಕೂ ಮೊದಲು ಸಿಇಪಿಎ ‍ಒಪ್ಪಂದ ಆಗುವ ಸಾಧ್ಯತೆ ಇದೆ ಎಂದು ಕ್ವಾತ್ರ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಚೀನಾದ ಪ್ರಭಾವ ಹೆಚ್ಚಳದ ಕುರಿತ ಪ್ರಶ್ನೆಗೆ, ‘ಇಬ್ಬರೂ ನಾಯಕರು ಈ ವಿಚಾರದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ. ಎರಡೂ ದೇಶಗಳಿಗೆ ಸಂಬಂಧಿಸಿದ ರಕ್ಷಣಾ ಹಿತಾಸಕ್ತಿಗಳು, ಭಾರತದ ಕಳವಳಗಳು, ಬಾಂಗ್ಲಾದೇಶದ ಆದ್ಯತೆಗಳು ಎಲ್ಲವೂ ಮಾತುಕತೆಯಲ್ಲಿ ಉಲ್ಲೇಖ ಆಗಿವೆ. ನಮ್ಮ ಸಂಬಂಧಕ್ಕೆ ಅದರದ್ದೇ ಆದ ಮಹತ್ವ ಇದೆ. ತಮ್ಮದೇ ಆದ ಆದ್ಯತೆಗಳಿಗೆ ಎರಡೂ ದೇಶಗಳು ಗಮನ ಹರಿಸಿವೆ’ ಎಂದು ಕ್ವಾತ್ರ ವಿವರಿಸಿದ್ದಾರೆ.

ಮಾತುಕತೆಗೂ ಮುನ್ನ, ಹಸೀನಾ ಅವರಿಗೆ ರಾಷ್ಟ್ರಪತಿ ಭವನದ ಎದುರಿನಲ್ಲಿ ವಿಧಿಯುಕ್ತ ಸ್ವಾಗತ ಕೋರಲಾಯಿತು.

ಹಸೀನಾ ಅವರು ರಾಜಘಾಟ್‌ಗೆ ತೆರಳಿ ಗಾಂಧೀಜಿ ಸ್ಮಾರಕಕ್ಕೆ ಗೌರವ ಅರ್ಪಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರನ್ನೂ ಭೇಟಿಯಾದರು.

ನೀರು ಹಂಚಿಕೆಗೆ ಒಪ್ಪಿಗೆ

ಕುಶಿಯಾರಾ ನದಿಯ ನೀರು ಹಂಚಿಕೆಗಾಗಿ ಮಧ್ಯಂತರ ಒಪ್ಪಂದಕ್ಕೆ ಭಾರತ ಮತ್ತು ಬಾಂಗ್ಲಾದೇಶ ಸಹಿ ಹಾಕಿವೆ. ಎರಡೂ ದೇಶಗಳ ನಡುವೆ 1996ರಲ್ಲಿ ಗಂಗಾ ನೀರು ಹಂಚಿಕೆ ಒಪ್ಪಂದ ಏರ್ಪಟ್ಟಿತ್ತು. ಆಗ, ಎಚ್‌.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದರು. ಅದಾಗಿ 25 ವರ್ಷಗಳ ಬಳಿಕ ಎರಡೂ ದೇಶಗಳ ನಡುವೆ ಅಂತಹುದೊಂದು ಒಪ್ಪಂದ ಆಗಿದೆ.

ಭಾರತ ಮತ್ತು ಬಾಂಗ್ಲಾವನ್ನು ಹಾದು ಹರಿಯುವ 54 ನದಿಗಳಿವೆ. ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದವನ್ನು ಆದಷ್ಟು ಬೇಗನೆ ಅಂತಿಮಗೊಳಿಸಬೇಕು ಎಂದು ಹಸೀನಾ ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರೋಧದಿಂದಾಗಿ ಈ ಒಪ್ಪಂದವು ಒಂದು ದಶಕದಿಂದ ತೂಗುಯ್ಯಾಲೆಯಲ್ಲಿದೆ.

ಕುಶಿಯಾರಾ ನದಿ ನೀರು ಹಂಚಿಕೆ ಒಪ್ಪಂದದಿಂದ ದಕ್ಷಿಣ ಅಸ್ಸಾಂ ಮತ್ತು ಬಾಂಗ್ಲಾದ ಸಿಲ್‌ಹೆಟ್‌ ಪ್ರದೇಶದ ಜನರಿಗೆ ಪ‍್ರಯೋಜನ ಆಗಲಿದೆ.

ಮುಜೀಬ್‌ ವಿದ್ಯಾರ್ಥಿವೇತನ

ಬಾಂಗ್ಲಾದೇಶ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಮೃತಪಟ್ಟ ಅಥವಾ ಗಂಭೀರವಾಗಿ ಗಾಯಗೊಂಡ ಭಾರತದ ಸೈನಿಕರು ಮತ್ತು ಅಧಿಕಾರಿಗಳ ವಂಶಸ್ಥರಿಗೆ ಮುಜೀಬ್‌ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ಶೇಖ್‌ ಹಸೀನಾ ಘೋಷಿಸಿದ್ದಾರೆ. ವಿದ್ಯಾರ್ಥಿವೇತನವನ್ನು ಬುಧವಾರ ಪ್ರದಾನ ಮಾಡಲಾಗುವುದು. ಹಸೀನಾ ಅವರ ತಂದೆ ಬಂಗಬಂಧು ಶೇಖ್‌ ಮುಜೀಬುರ್‌ ರಹಮಾನ್ ಅವರ ಹೆಸರಿನಲ್ಲಿ ಈ ವಿದ್ಯಾರ್ಥಿವೇತನ ಸ್ಥಾಪಿಸಲಾಗಿದೆ.

ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ 200 ಸಿಬ್ಬಂದಿಯ ಕುಟುಂಬಗಳು ಈ ವಿದ್ಯಾರ್ಥಿವೇತನ ಪಡೆಯಲಿವೆ.ಬಾಂಗ್ಲಾದೇಶ ಸರ್ಕಾರದ ಮಾಹಿತಿ ಪ್ರಕಾರ, 1971ರ ಯುದ್ಧದಲ್ಲಿ ಭಾರತೀಯ ಸೇನೆಯ 1,984 ಯೋಧರು ಹುತಾತ್ಮರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT