ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ನಡುವಿನ ಸಂಘರ್ಷ ಶಮನಕ್ಕೆ ಐದಂಶ

ಎಲ್‌ಎಸಿಯಲ್ಲಿ ಶಾಂತಿ ಸ್ಥಾಪನೆಗೆ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯಲ್ಲಿ ಒಮ್ಮತ
Last Updated 11 ಸೆಪ್ಟೆಂಬರ್ 2020, 17:56 IST
ಅಕ್ಷರ ಗಾತ್ರ

ನವದೆಹಲಿ: ಗಡಿಯಲ್ಲಿನ ಈಗಿನ ಪರಿಸ್ಥಿತಿಯು ಎರಡೂ ದೇಶಗಳ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬು ದನ್ನು ಭಾರತ ಮತ್ತು ಚೀನಾ ಗುರುತಿಸಿವೆ. ಹಾಗಾಗಿ, ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಬಿಕ್ಕಟ್ಟು ಶಮನಕ್ಕೆ ಐದು ಅಂಶಗಳ ಸೂತ್ರವನ್ನು ಅನುಷ್ಠಾನಕ್ಕೆ ತರಲು ಒಪ್ಪಿವೆ.

ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್‌ ಮತ್ತು ವಾಂಗ್‌ ಯಿ ನಡುವೆ ಗುರುವಾರ ರಾತ್ರಿ ಮಾಸ್ಕೊದಲ್ಲಿ ನಡೆದ ಮಾತುಕತೆಯಲ್ಲಿ ಐದು ಅಂಶಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ.

ಎಲ್‌ಎಸಿಯ ಸಮೀಪ ಭಾರಿ ಸಂಖ್ಯೆಯಲ್ಲಿ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಚೀನಾ ಜಮಾವಣೆ ಮಾಡಿದ್ದಕ್ಕೆ ಭಾರತದ ನಿಯೋಗವು ಮಾತುಕತೆ ಸಂದರ್ಭದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ನಿಯೋಜನೆಗೆ ಸಂಬಂಧಿಸಿ ವಿಶ್ವಾಸಾರ್ಹವಾದ ವಿವರಣೆ ಕೊಡಲು ಚೀನಾ ನಿಯೋಗಕ್ಕೆ ಸಾಧ್ಯವಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಎಲ್‌ಎಸಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಚೀನಾ ಸ್ಪಷ್ಟ ಭರವಸೆ ಕೊಟ್ಟಿಲ್ಲ ಎಂಬುದು ಗಮನಿಸಬೇಕಾದ ಅಂಶ. ಏಕೆಂದರೆ, ಎಲ್‌ಎಸಿಯಲ್ಲಿ ಯಥಾಸ್ಥಿತಿ ಸ್ಥಾಪನೆ ಆಗಬೇಕು ಎನ್ನುವುದು ಭಾರತದ ಮುಖ್ಯ ಬೇಡಿಕೆಯಾಗಿದೆ.

ಗಡಿ ಬಿಕ್ಕಟ್ಟಿನ ಬಗ್ಗೆ ಸೇನಾ ಕಮಾಂಡರ್‌ಗಳು ನಡೆಸುವ ಮಾತುಕತೆಯ ಫಲಿತಾಂಶದ ಮೇಲೆ ಸಚಿವ ಮಟ್ಟದ ಸಭೆಯಲ್ಲಿನ ಒಮ್ಮತದ ಯಶಸ್ಸು ಅಡಗಿದೆ.

ಭಾರತೀಯ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಹರಿಂದರ್‌ ಸಿಂಗ್‌ ಮತ್ತು ಚೀನಾ ಸೇನೆಯ ಮೇಜರ್‌ ಜನರಲ್‌ ಲಿಯು ಲಿನ್‌ ಅವರು ಮೇ ತಿಂಗಳಿಂದ ಐದು ಸುತ್ತುಗಳ ಮಾತುಕತೆ ನಡೆಸಿದ್ದಾರೆ. ಆದರೆ, ಸಂಘರ್ಷದ ಪ್ರದೇಶದಿಂದ ಸೈನಿಕರನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಸಮ್ಮತಿಸದ ಕಾರಣ ಸೇನಾ ಮಟ್ಟದ ಮಾತುಕತೆಯು ನಿಷ್ಫಲವಾಯಿತು.

ಸೇನೆಯ ಹಿರಿಯ ಕಮಾಂಡರ್‌ಗಳ ನಡುವೆ ಈ ಹಿಂದೆ ನಡೆದ ಮಾತುಕತೆಗಳು ವಿಫಲವಾದರೂ ಈಗ ಸಚಿವ ಮಟ್ಟದಲ್ಲಿ ಒಪ್ಪಿತವಾದ ಐದು ಅಂಶಗಳು ಚರ್ಚೆಗೆ ದಾರಿ ತೋರಲಿವೆ. ಸಚಿವ ಮಟ್ಟದ ಮಾತುಕತೆಯಿಂದಾಗಿ ಬಿಕ್ಕಟ್ಟು ಶಮನಕ್ಕೆ ರಾಜಕೀಯ ಮಾರ್ಗದರ್ಶನ ಸಿಕ್ಕಂತಾಗಿದೆ. ಹಾಗಾಗಿ, ಗಡಿಯಲ್ಲಿ ಸದ್ಯ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹಾರ ಆಗಬಹುದು ಎಂಬ ನಿರೀಕ್ಷೆ ಮೂಡಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಮಟ್ಟದ 2ನೇ ಮಾತುಕತೆ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಯ ಸಂದರ್ಭದಲ್ಲಿ ಜೈಶಂಕರ್‌ ಮತ್ತು ವಾಂಗ್ ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ಸುಮಾರು ಎರಡೂವರೆ ತಾಸು ಚರ್ಚೆ ನಡೆಸಿದ್ದಾರೆ. ಇದು ಭಾರತ–ಚೀನಾ ನಡುವೆ ನಡೆದ ಎರಡನೇ ಉನ್ನತ ಮಟ್ಟದ ಸಭೆ. ಎಸ್‌ಸಿಒ ಸಭೆಯಲ್ಲಿ ಭಾಗವಹಿಸಲು ಮಾಸ್ಕೊಗೆ ಹೋಗಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚೀನಾದ ರಕ್ಷಣಾ ಸಚಿವ ವೈ ಫೆಂಗ್‌ ಜತೆಗೆ ಮಾತುಕತೆ ನಡೆಸಿದ್ದರು.

ಐದು ಅಂಶಗಳು

1. ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬೆಳೆಯದಂತೆ ನೋಡಿಕೊಳ್ಳಬೇಕು. ಎರಡೂ ದೇಶಗಳ ನಾಯಕರ ನಡುವಣ ಸರಣಿ ಮಾತುಕತೆಯಲ್ಲಿನ ಒಮ್ಮತದ ಅಂಶಗಳನ್ನು ಎರಡೂ ಕಡೆಯವರು ಗಮನದಲ್ಲಿ ಇರಿಸಿಕೊಳ್ಳಬೇಕು

2. ಎರಡೂ ಕಡೆಯ ಸೇನೆಯ ನಡುವಣ ಮಾತುಕತೆ ಮುಂದುವರಿಯಬೇಕು. ಸೈನಿಕರನ್ನು ತ್ವರಿತವಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕು, ಸೈನಿಕರು ಮುಖಾಮುಖಿ ಆಗದಂತೆ ನೋಡಿಕೊಳ್ಳಬೇಕು ಮತ್ತು ಬಿಕ್ಕಟ್ಟು ಶಮನ ಮಾಡಬೇಕು

3. ಭಾರತ–ಚೀನಾ ಗಡಿಗೆ ಸಂಬಂಧಿಸಿದ ಎಲ್ಲ ಒಪ್ಪಂದಗಳು ಮತ್ತು ಶಿಷ್ಟಾಚಾರಗಳನ್ನು ಪಾಲಿಸಬೇಕು; ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದ ಸ್ಥಾಪಿಸಬೇಕು; ಬಿಕ್ಕಟ್ಟು ಸೃಷ್ಟಿಯಾಗಬಹುದಾದ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು

4. ಗಡಿ ವಿವಾದಕ್ಕೆ ಸಂಬಂಧಿಸಿ ವಿಶೇಷ ಪ್ರತಿನಿಧಿ ವ್ಯವಸ್ಥೆಯ ಮೂಲಕ ಸಂವಹನ, ಸಂವಾದ ಮುಂದುವರಿಯಬೇಕು. ಭಾರತ–ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯ ಕಾರ್ಯಪಡೆಯ ಮಾತುಕತೆ ಮುಂದುವರಿಯಬೇಕು

5. ಬಿಗುವಿನ ಪರಿಸ್ಥಿತಿ ತಿಳಿಯಾದ ಬಳಿಕ, ವಿಶ್ವಾಸವೃದ್ಧಿ ಕ್ರಮಗಳನ್ನು ಎರಡೂ ಕಡೆಯವರು ಕೈಗೊಳ್ಳಬೇಕು. ಗಡಿಯಲ್ಲಿ ಶಾಂತಿ–ಸೌಹಾರ್ದಕ್ಕೆ ಒತ್ತು ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT