ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕದ ವೇಳೆ ತೊಂದರೆಗಳನ್ನು ಎದುರಿಸಿದರೂ ಭಾರತ ಬಲಿಷ್ಠವಾಗಿದೆ: ಪ್ರಧಾನಿ

Last Updated 23 ಮಾರ್ಚ್ 2021, 10:51 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಸಮಯದಲ್ಲಿ ಗಡಿಗಳಲ್ಲಿ ಉದ್ವಿಗ್ನತೆ, ಚಂಡಮಾರುತಗಳು ಮತ್ತು ಭೂಕಂಪಗಳಂತಹ ವಿಕೋಪಗಳನ್ನುಎದುರಿಸಿದರೂ ಕೂಡ, ಭಾರತವು ಬಲಶಾಲಿಯಾಗಿ ಹೊರಹೊಮ್ಮಿತು. ಇಡೀ ಜಗತ್ತು ಭಾರತದ ಸಾಮರ್ಥ್ಯವನ್ನು ಅರಿತುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಿಜೆಪಿ ಸಂಸದರಿಗೆ ತಿಳಿಸಿದ್ದಾಗಿ ಅರ್ಜುನ್ ರಾಮ್ ಮೇಘವಾಲ್ ಹೇಳಿದರು.

ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ಎಲ್ಲ ಸವಾಲುಗಳು ಎದುರಾದವು ಮತ್ತು ದೇಶ ಕೂಡ ಅವುಗಳನ್ನು ಸಮರ್ಪಕವಾಗಿ ನಿಭಾಯಿಸಿದೆ ಎಂದು ನೆನಪಿಸಿಕೊಂಡರು.

ಸಾಂಕ್ರಾಮಿಕ ರೋಗದ ಅನುಭವಗಳನ್ನು ಹಂಚಿಕೊಂಡ ಮೋದಿ, 'ಈ ಅವಧಿಯಲ್ಲಿ, ದೇಶವು ಕೇವಲ ವೈರಸ್ ಸವಾಲನ್ನು ಮಾತ್ರ ಎದುರಿಸಲಿಲ್ಲ. ಆದರೆ ಇತರ ಕ್ಷೇತ್ರಗಳ ಸಮಸ್ಯೆಗಳನ್ನು ಕೂಡ ನಿಭಾಯಿಸಿದೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ, ಚಂಡಮಾರುತಗಳು, ಭೂಕಂಪಗಳು ಸಂಭವಿಸಿದವು ಮತ್ತು ನಂತರ ಮಿಡತೆ ಸಮೂಹ ದಾಳಿ ನಡೆದಿತ್ತು. ಆದರೆ ಈ ಎಲ್ಲ ಸಮಸ್ಯೆಗಳ ಹೊರತಾಗಿಯೂ, ಭಾರತವು ಬಲಿಷ್ಟವಾಗಿ ಹೊರಹೊಮ್ಮಿತು ಮತ್ತು ಇಡೀ ಜಗತ್ತು ಈಗ ಭಾರತದ ಸಾಮರ್ಥ್ಯವನ್ನು ಅರಿತುಕೊಂಡಿದೆ' ಎಂದು ತಿಳಿಸಿದ್ದಾಗಿ ಮೇಘವಾಲ್ ಪ್ರಸ್ತಾಪಿಸಿದರು.

ಮೊದಲು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಈಗ ಪ್ರಧಾನ ಮಂತ್ರಿಯಾಗಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸಿರುವುದಾಗಿ ಉಲ್ಲೇಖಿಸಿದ ಪ್ರಧಾನಿ, ತಾನು ಎಂದಿಗೂ ಒಂದು ದಿನ ಕೂಡ ರಜೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾಗಿ ಮೇಘವಾಲ್ ಹೇಳಿದರು.

ಮೋದಿಯವರಲ್ಲದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದರು.

ಸಾಂಕ್ರಾಮಿಕ ಸಮಯದಲ್ಲಿ ಇತರ ರಾಷ್ಟ್ರಗಳಿಗೆ ಪ್ರತಿಜೀವಕ ಔಷಧಗಳನ್ನು ಮತ್ತು ಪರೀಕ್ಷಾ ಕಿಟ್‌ಗಳನ್ನು ಒದಗಿಸುವ ವೈದ್ಯಕೀಯ ರಾಜತಾಂತ್ರಿಕತೆ ಮತ್ತು ನಂತರದ ಲಸಿಕೆ ರಾಜತಾಂತ್ರಿಕತೆಗಾಗಿ ಭಾರತದ ಸ್ಥಾನಮಾನವು ಜಗತ್ತಿನಲ್ಲಿ ಏರಿತು ಎಂದು ಸಚಿವ ಜೈಶಂಕರ್ ತಿಳಿಸಿದರು.

ಅಲ್ಲದೆ ಸಾಂಕ್ರಾಮಿಕದ ಸಮಯದಲ್ಲಿ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಮರಳಿ ಕರೆತರುವ ಕೇಂದ್ರದ ವಂದೇ ಭಾರತ್ ಕಾರ್ಯಾಚರಣೆಯ ವಿವರಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವರು ಹಂಚಿಕೊಂಡಿದ್ದಾರೆ ಎಂದು ಮೇಘವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT