ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಭಾರತ–ಚೀನಾ ಘರ್ಷಣೆ ಸಾಧ್ಯತೆ: ಲಡಾಖ್‌ ಪೊಲೀಸ್‌ ವರದಿ

Last Updated 27 ಜನವರಿ 2023, 9:24 IST
ಅಕ್ಷರ ಗಾತ್ರ

ನವದೆಹಲಿ: ಲಡಾಖ್‌ನ ಹಿಮಾಲಯ ಭಾಗದಲ್ಲಿ ಚೀನಾ ತನ್ನ ಸೇನಾ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದ್ದು, ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂಬುದು ಲಡಾಖ್‌ ಪೊಲೀಸರು ನಡೆಸಿರುವ ಭದ್ರತಾ ಮೌಲ್ಯಮಾಪನದ ವೇಳೆ ತಿಳಿದುಬಂದಿದೆ.

2020 ರಲ್ಲಿ ಪಶ್ಚಿಮ ಹಿಮಾಲಯದ ಲಡಾಖ್‌ನಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 24 ಸೈನಿಕರು ಹುತಾತ್ಮರಾಗಿದ್ದರು. ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ನಂತರ ಉದ್ವಿಗ್ನತೆ ಕಡಿಮೆಯಾಗಿತ್ತು. 2022ರ ಡಿಸೆಂಬರ್‌ನಲ್ಲಿ ಪೂರ್ವ ಹಿಮಾಲಯದಲ್ಲಿ ಉಭಯ ಸೇನೆಗಳ ನಡುವೆ ಮತ್ತೆ ಘರ್ಷಣೆಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ಲಡಾಖ್‌ ಪೊಲೀಸರು ನಡೆಸಿದ ಈ ಹೊಸ ಮೌಲ್ಯಮಾಪನದ ವರದಿಯನ್ನು ಜನವರಿ 20 ರಿಂದ 22 ರವರೆಗೆ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಸಲ್ಲಿಸಲಾಗಿದ್ದು, ತಾನು ಇದನ್ನು ಪರಿಶೀಲಿಸಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗಡಿ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರು ಸಂಗ್ರಹಿಸಿದ ಗುಪ್ತಚರ ಮಾಹಿತಿ ಮತ್ತು ಈ ಹಿಂದಿನ ಭಾರತ-ಚೀನಾ ಮಿಲಿಟರಿ ಉದ್ವಿಗ್ನತೆಯ ಮಾದರಿಯನ್ನು ಆಧರಿಸಿ ಮೌಲ್ಯಮಾಪನ ಪ್ರತಿಯನ್ನು ಸಿದ್ಧಪಡಿಸಲಾಗಿದೆ ಎಂದು ವರದಿ ಹೇಳಿದೆ.

ಈ ಬಗ್ಗೆ ಭಾರತೀಯ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ಸಮಾವೇಶದಲ್ಲಿ ಸಲ್ಲಿಸಿದ ಮೌಲ್ಯಮಾಪನವು ಮಹತ್ವದ್ದಾಗಿದೆ. ಭಾರತದ ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯಗಳು ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೀನಾದ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಲಿಲ್ಲ.

‘ಚೀನಾದೊಳಗಿನ ಒತ್ತಡ, ಈ ಪ್ರದೇಶದ ಕುರಿತಾಗಿನ ಆರ್ಥಿಕ ಹಿತಾಸಕ್ತಿಗಳನ್ನು ಗಮನಿಸಿದರೆ, ಚೀನಾ ಸೇನೆ ಶಿಷ್ಟಾಚಾರವಾಗಿ ಅಲ್ಲದಿದ್ದರು, ಇಚ್ಛೆಗೆ ಅನುಗುಣವಾಗಿ ಈ ಭಾಗದಲ್ಲಿ ತನ್ನ ಮಿಲಿಟರಿ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳಬಹುದು ಅಥವಾ ಹೆಚ್ಚಿಸಿಕೊಳ್ಳದೇ ಇರಬಹುದು’ ಎಂದು ಚೀನಾ ಸೇನೆಯನ್ನು ಉಲ್ಲೇಖಿಸಿ ಪೊಲೀಸ್‌ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT