ಗುರುವಾರ , ಫೆಬ್ರವರಿ 25, 2021
28 °C
ಕೋವಿಡ್‌ ವಿರುದ್ಧದ ಹೋರಾಟ

ಕೋವಿಡ್‌ ಲಸಿಕೆಗೆ ಇಂದು ಚಾಲನೆ: ಜಗತ್ತಿನ ಅತ್ಯಂತ ದೊಡ್ಡ ಅಭಿಯಾನ

ಪಿಟಿಐ Updated:

ಅಕ್ಷರ ಗಾತ್ರ : | |

PM Narendra Modi

ನವದೆಹಲಿ: ಕೋವಿಡ್‌–19 ಪಿಡುಗಿನ ವಿರುದ್ಧ ಜಗತ್ತಿನ ಅತಿ ದೊಡ್ಡ, ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ. 

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ದೆಹಲಿಯ ನಿರ್ಮಾಣ್‌ ಭವನದಲ್ಲಿರುವ ಕೋವಿಡ್‌ ನಿಯಂತ್ರಣ ಕೊಠಡಿಗೆ ಶುಕ್ರವಾರ ಭೇಟಿ ನೀಡಿ, ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. 

ದೇಶದ ಎಲ್ಲ ಭಾಗಗಳಲ್ಲಿಯೂ ಲಸಿಕೆ ನೀಡಿಕೆ ಕಾರ್ಯಕ್ರಮ ಶನಿವಾರವೇ ಆರಂಭ ಆಗಲಿದೆ. ಲಸಿಕೆ ನೀಡಿಕೆಗೆ ಒಟ್ಟು 3,006 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಎಲ್ಲ ಕೇಂದ್ರಗಳ ನಡುವೆ ಆನ್‌ಲೈನ್‌ ಮೂಲಕ ಸಂಪರ್ಕ ಏರ್ಪಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿಯೂ ನೂರು ಫಲಾನುಭವಿಗಳಿಗೆ ಮೊದಲ ದಿನ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.   

ಆಸ್ಟ್ರಾ ಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ ಜಂಟಿಯಾಗಿ ಅಭಿವೃದ್ಧಿಪಡಿಸಿದ, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್‌ ಮತ್ತು ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ತಯಾರಿಸಿರುವ ಕೋವ್ಯಾಕ್ಸಿನ್‌ ಲಸಿಕೆಗಳೆರಡೂ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಇವು ಕೋವಿಡ್‌ ವಿರುದ್ಧದ ಹೋರಾಟದ ಅತ್ಯಂತ ಮಹತ್ವದ ಅಸ್ತ್ರಗಳು ಎಂದು ಸಚಿವಾಲಯವು ಹೇಳಿದೆ. 

ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳ 1.65 ಕೋಟಿ ಡೋಸ್‌ಗಳನ್ನು ಸರ್ಕಾರವು ಖರೀದಿಸಿದೆ. ಅವುಗಳನ್ನುರಾಜ್ಯಗಳಲ್ಲಿರುವ ಆರೋಗ್ಯ ಕಾರ್ಯಕರ್ತರ ಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ.

ಆರೋಗ್ಯ ಕಾರ್ಯಕರ್ತರಿಗೆ ಉಚಿತ

ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆಯ ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಮೊದಲ ಹಂತದಲ್ಲಿ, ಒಂದು ಕೋಟಿ ಆರೋಗ್ಯ ಕಾರ್ಯಕರ್ತರು, ಎರಡು ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುವುದು. ನಂತರದಲ್ಲಿ, 50 ವರ್ಷ ದಾಟಿದವರಿಗೆ ಮತ್ತು ಆ ಬಳಿಕ, 50 ವರ್ಷದೊಳಗಿನ ಇತರ ಕಾಯಿಲೆಗಳಿರುವ ಜನರಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ರಾಜ್ಯಗಳಿಗೆ ಸೂಚನೆ

* ಗರಿಷ್ಠ 10 ದಿನಗಳ ಒಳಗೆ ಮೊದಲ ಹಂತದ ಅಭಿಯಾನವನ್ನು ಪೂರ್ಣಗೊಳಿಸಬೇಕು  

* ಪ್ರತಿ ದಿನ ಸರಾಸರಿ 100 ಮಂದಿಗೆ ಲಸಿಕೆ ಹಾಕಬೇಕು ಮತ್ತು ಶೇ 10ರಷ್ಟು ಲಸಿಕೆಗಳನ್ನು ಮೀಸಲು ಡೋಸ್‌ಗಳೆಂದು ತೆಗೆದಿರಿಸಬೇಕು

* ಅನಗತ್ಯ ಆತುರ ತೋರಬಾರದು ಮತ್ತು ಪ್ರತಿ ದಿನದ ನಿಗದಿಗಿಂತ ಹೆಚ್ಚು ಜನರಿಗೆ ಲಸಿಕೆ ಹಾಕಲು ಮುಂದಾಗಬಾರದು

* ಲಸಿಕೆ ನೀಡಿಕೆ ಪ್ರಕ್ರಿಯೆ ಸ್ಥಿರಗೊಂಡ ಬಳಿಕ, ಲಸಿಕೆ ನೀಡಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು