ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಹೆಲಿ ಟೂರಿಸಂ ಕೇಂದ್ರವಾಗುವ ಸಾಮರ್ಥ್ಯ ಭಾರತಕ್ಕಿದೆ: ಮಾಂಡವೀಯಾ

Last Updated 28 ಅಕ್ಟೋಬರ್ 2021, 11:27 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತದಲ್ಲಿ ಆರೋಗ್ಯ ಕ್ಷೇತ್ರವು ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿದ್ದು, ಅಪಾರ ಹೂಡಿಕೆಯ ಅವಕಾಶಗಳನ್ನು ಹೊಂದಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಗುರುವಾರ ಹೇಳಿದ್ದಾರೆ.

ಸಿಐಐ ಏಷ್ಯಾ ಆರೋಗ್ಯ– 2021 ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಅಂತರರಾಷ್ಟ್ರೀಯ ಆರೋಗ್ಯ ಪ್ರವಾಸೋದ್ಯಮ ಕೇಂದ್ರವಾಗುವ (ಹೆಲಿ ಟೂರಿಸಂ) ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಖಾಸಗಿ ವಲಯವು ಹೂಡಿಕೆ ಮಾಡಲು ಅಪಾರ ಅವಕಾಶಗಳಿವೆ ಎಂದರು.

‘ಹಿಂದೆ ಆರೋಗ್ಯವೆಂದರೆ ಬರೀ ಚಿಕಿತ್ಸೆ ಎನ್ನುವ ಅರ್ಥವಿತ್ತು. ಆದರೆ, ಈಗ ಈ ಕ್ಷೇತ್ರವು ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿದೆ. ಆರೋಗ್ಯವಂತ ಸಮಾಜ ಮಾತ್ರ ಸಮೃದ್ಧ ದೇಶವಾಗಲು ಸಾಧ್ಯ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಥಮಿಕ ಚಿಂತನೆಯಾಗಿದೆ’ ಎಂದರು.

‘ಆರೋಗ್ಯ ಕ್ಷೇತ್ರದ ಉತ್ತಮ ಭವಿಷ್ಯ, ಕೈಗೆಟುಕುವ ದರ, ಹೊಣೆಗಾರಿಕೆ, ಜಾಗೃತಿಗೆ ಸರ್ಕಾರ ಬದ್ಧವಾಗಿದೆ ಮತ್ತು ಈ ಉದ್ದೇಶಗಳನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ’ ಎಂದೂ ಮಾಂಡವೀಯಾ ಹೇಳಿದರು.

ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮಹತ್ವದ ಕುರಿತು ಮಾತನಾಡಿದ ಸಚಿವರು, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಪ್ರಧಾನಿ ಅವರು ಕೈಗೊಂಡ ಯಶಸ್ವಿ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕೇಂದ್ರ ಸರ್ಕಾರವು ಕೈಗೊಂಡಿರುವ ವಿವಿಧ ಆರೋಗ್ಯ ಯೋಜನೆಗಳನ್ನೂ ಮಾಂಡವೀಯಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT