ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ| ಜಿ–20: ಒಮ್ಮತ ಮೂಡಿಸಲು ಭಾರತ ಕಸರತ್ತು

ಜಿ–20: ಇಂದು ವಿದೇಶಾಂಗ ಸಚಿವರ ಮಹತ್ವದ ಸಭೆ; ರಷ್ಯಾ–ಉಕ್ರೇನ್‌ ಕುರಿತ ಚರ್ಚೆಗೆ ಒತ್ತು
Last Updated 2 ಮಾರ್ಚ್ 2023, 4:03 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿ ವಿವಿಧ ರಾಷ್ಟ್ರಗಳ ವಿದೇಶಾಂಗ ಸಚಿವರ ಹಂತದಲ್ಲಿ ಮಹತ್ವದ ಸಭೆ ನಡೆಯಲಿದೆ. ರಷ್ಯಾ–ಉಕ್ರೇನ್‌ ನಡುವಣ ಸಂಘರ್ಷವು ಈ ಸಭೆಯ ಪ್ರಮುಖ ಚರ್ಚೆಯ ವಿಷಯವಾಗಿದೆ.

ಜಗತ್ತಿನ ದೊಡ್ಡ ಆರ್ಥಿಕತೆಯ ರಾಷ್ಟ್ರಗಳ ನಡುವೆ ಏಕತೆ ಮೂಡಿಸುವ ಪ್ರಯತ್ನಕ್ಕೆ ಭಾರತ ಕೈಹಾಕಿದೆ. ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ವಾಗ್ದಾಳಿ ನಡೆಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಈ ಸಭೆಯನ್ನು ವೇದಿಕೆಯಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

‘ಸಭೆಯಲ್ಲಿ ಯಾವೆಲ್ಲಾ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಪಾಲ್ಗೊಳ್ಳಲಿರುವ ಬಹುತೇಕ ಸಚಿವರು ರಷ್ಯಾ ಮತ್ತು ಉಕ್ರೇನ್‌ ನಡುವಣ ಸಂಘರ್ಷದ ಕುರಿತ ಚರ್ಚೆಗೆ ಬಿಗಿಪಟ್ಟು ಹಿಡಿಯುವುದು ಸಹಜ. ಈ ಬಿಕ್ಕಟ್ಟಿನಿಂದಾಗಿ ಆಹಾರ, ಇಂಧನ, ರಸಗೊಬ್ಬರದ ಭದ್ರತೆಯ ಮೇಲೆ ಉಂಟಾಗಿರುವ ಪ್ರತಿಕೂಲ ಪರಿಣಾಮದ ಕುರಿತೂ ಚರ್ಚೆ ನಡೆಯುವ ನಿರೀಕ್ಷೆ ಇದೆ’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾದ ನಡೆಯನ್ನು ಖಂಡಿಸದೆ ಜಂಟಿ ಹೇಳಿಕೆ ಬಿಡುಗಡೆ ಮಾಡಬಾರದು. ಒಂದೊಮ್ಮೆ ಬಿಡುಗಡೆ ಮಾಡಿದರೆ ಅಂತಹ ಹೇಳಿಕೆಗೆ ನಮ್ಮ ಸಹಮತ ಇರುವುದಿಲ್ಲ ಎಂದು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ಈಗಾಗಲೇ ಭಾರತಕ್ಕೆ ಎಚ್ಚರಿಸಿವೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್‌ ಮೇಲಿನ ಯುದ್ಧ ಖಂಡಿಸುವ ನಿರ್ಣಯವನ್ನು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸುವುದಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸುವ ನಿರೀಕ್ಷೆ ಇದೆ. ಈ ವಿಚಾರದಲ್ಲಿ ಚೀನಾವು ರಷ್ಯಾಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ.

ಜೈಶಂಕರ್‌ ದ್ವಿಪಕ್ಷೀಯ ಮಾತುಕತೆ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಜಿ–20 ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ವಿದೇಶಾಂಗ ಸಚಿವರ ಜೊತೆ ಬುಧವಾರ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಗುರುವಾರ ಚೀನಾದ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಜೊತೆ ಚರ್ಚಿಸುವ ನಿರೀಕ್ಷೆ ಇದೆ.

ಬಿಲ್‌ ಗೇಟ್ಸ್‌ ಪ್ರಶಂಸೆ: ಮೈಕ್ರೊಸಾಫ್ಟ್‌ ಸಹ ಸಂಸ್ಥಾಪಕ ಬಿಲ್ ಗೇಟ್ಸ್‌ ಅವರು ಭಾರತದಲ್ಲಿನ ಡಿಜಿಟಲ್‌ ಮೂಲಸೌಕರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ–20 ಗುಂಪಿನ ಸಭೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಆಧಾರ್‌, 5ಜಿ ಬಗ್ಗೆ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT