ಶನಿವಾರ, ಡಿಸೆಂಬರ್ 5, 2020
25 °C
ದೇಶೀಯ ಕೋವಿಡ್‌–19 ಲಸಿಕೆ

ಫೆಬ್ರುವರಿಗೆ 'ಕೋವಾಕ್ಸಿನ್' ಲಸಿಕೆ ಬಿಡುಗಡೆ ಸಾಧ್ಯತೆ: ಐಸಿಎಂಆರ್ ವಿಜ್ಞಾನಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಕೋವಾಕ್ಸಿನ್‌ ಲಸಿಕೆ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿ ಪಡಿಸುತ್ತಿರುವ ಕೋವಿಡ್–19 ಲಸಿಕೆಯು ಮುಂದಿನ ವರ್ಷ ಫೆಬ್ರುವರಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಮನುಷ್ಯರ ಮೇಲೆ ಈವರೆಗೂ ನಡೆಸಲಾಗಿರುವ ಪ್ರಯೋಗದಲ್ಲಿ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತವೆಂದು ತಿಳಿದು ಬಂದಿದೆ, ಇದೇ ತಿಂಗಳು ಲಸಿಕೆಯ ಕೊನೆಯ ಹಂತದ ಪ್ರಯೋಗ ಆರಂಭವಾಗಲಿದೆ ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಐಸಿಎಂಆರ್‌ ಮತ್ತು ಭಾರತ್‌ ಬಯೋಟೆಕ್‌ ಕಂಪನಿ 'ಕೋವಾಕ್ಸಿನ್‌' ಕೋವಿಡ್‌–19 ಲಸಿಕೆ ಅಭಿವೃದ್ಧಿ ಪಡಿಸುತ್ತಿವೆ. ಲಸಿಕೆಯನ್ನು ಮುಂದಿನ ವರ್ಷ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುವ ಭರವಸೆ ವ್ಯಕ್ತವಾಗಿತ್ತು. ಆದರೆ, ಮುಂಚಿತವಾಗಿಯೇ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

'ಲಸಿಕೆ ಪರಿಣಾಮಕಾರಿಯಾಗಿರುವುದು ತಿಳಿದು ಬಂದಿದೆ' ಎಂದು ಐಸಿಎಂಆರ್‌ನ ವಿಜ್ಞಾನಿ ರಜನಿ ಕಾಂತ್‌ ಗುರುವಾರ ಹೇಳಿದ್ದಾರೆ. ಅವರು ಕೋವಿಡ್‌–19 ಕಾರ್ಯಪಡೆಯ ಸದಸ್ಯರೂ ಆಗಿದ್ದಾರೆ. ಮೂರನೇ ಹಂತದ ಪ್ರಯೋಗ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಕೋವಾಕ್ಸಿನ್‌ ಲಸಿಕೆಯನ್ನು ಜನರಿಗೆ ನೀಡುವ ಕುರಿತು ಆರೋಗ್ಯ ಸಚಿವಾಲಯವೇ ನಿರ್ಧರಿಸಬೇಕಿದೆ ಎಂದಿದ್ದಾರೆ.

ಫೆಬ್ರುವರಿಯಲ್ಲಿ ಕೋವಾಕ್ಸಿನ್‌ ಬಿಡುಗಡೆಯಾದರೆ, ಮೊದಲ ಭಾರತೀಯ ಕೋವಿಡ್‌–19 ಲಸಿಕೆ ಹೊರಬಂದಂತಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ಭಾರತ್‌ ಬಯೋಟೆಕ್‌ ಲಭ್ಯವಾಗಿಲ್ಲ.

'ಲಸಿಕೆಯು ಪ್ರಾಣಿಗಳ ಮೇಲೆ ನಡೆಸಿರುವ ಅಧ್ಯಯನದಲ್ಲಿ ಹಾಗೂ ಮನುಷ್ಯರ ಮೇಲೆ ನಡೆಸಲಾಗಿರುವ ಒಂದು ಮತ್ತು 2ನೇ ಹಂತದ ಪ್ರಯೋಗಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದು ಬಂದಿದೆ. ಆದರೆ, 3ನೇ ಹಂತದ ಪ್ರಯೋಗ ಪೂರ್ಣಗೊಳ್ಳುವವರೆಗೂ ಶೇ 100ರಷ್ಟು ಖಚಿತತೆ ನೀಡಲು ಸಾಧ್ಯವಾಗದು' ಎಂದು ವಿಜ್ಞಾನಿ ರಜನಿ ಕಾಂತ್ ಹೇಳಿದ್ದಾರೆ.

'ತುರ್ತು ಪರಿಸ್ಥಿತಿಗಳಲ್ಲಿ ಲಸಿಕೆಯನ್ನು ಬಳಸುವ ಬಗ್ಗೆ ಸರ್ಕಾರ ಯೋಚಿಸಬಹುದಾಗಿದೆ. ಆದರೆ, ಅಪಾಯಗಳಂತೂ ಇರಬಹುದು' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಿರಿಯ ವ್ಯಕ್ತಿಗಳು ಹಾಗೂ ಸೋಂಕಿಗೆ ಒಳಪಡುವ ಅಪಾಯಕಾರಿ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವವರಿಗೆ ತುರ್ತು ಚಿಕಿತ್ಸೆಗಾಗಿ ಕೋವಿಡ್‌–19 ಲಸಿಕೆ ಬಳಕೆಗೆ ಅನುಮತಿ ನೀಡುವ ವಿಚಾರವನ್ನು ಸರ್ಕಾರ ಪರಿಗಣಿಸಿದೆ ಎಂದು ಸೆಪ್ಟೆಂಬರ್‌ನಲ್ಲಿ ಆರೋಗ್ಯ ಸಚಿವ ಹರ್ಷ್ ವರ್ಧನ್‌ ಹೇಳಿದ್ದರು.

ಈ ನಡುವೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೋವಿಡ್-19 ಲಸಿಕೆ ದಾಸ್ತಾನು ಇರಿಸಲು ಕೊಠಡಿಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಜಗತ್ತಿನಾದ್ಯಂತ ಹಲವು ಕೋವಿಡ್‌–19 ಲಸಿಕೆಗಳು ಅಂತಿಮ ಹಂತದ ಪ್ರಯೋಗ ನಡೆಸುತ್ತಿವೆ. ಬ್ರಿಟನ್‌ನ ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಅಭಿವೃದ್ಧಿ ಪಡಿಸಿರುವ ಲಸಿಕೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದು, ಡಿಸೆಂಬರ್‌ ಅಂತ್ಯಕ್ಕೆ ಅಥವಾ 2021ರ ಆರಂಭದಲ್ಲಿಯೇ ಲಸಿಕೆ ಬಿಡುಗಡೆಯಾಗುವ ನಿರೀಕ್ಷೆಯನ್ನು ಬ್ರಿಟನ್‌ ಸರ್ಕಾರ ವ್ಯಕ್ತಪಡಿಸಿದೆ.

ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸೇರಿದಂತೆ ಜಗತ್ತಿನ ಹಲವು ಕಂಪನಿಗಳು ಹಾಗೂ ಸರ್ಕಾರಗಳೊಂದಿಗೆ ಆಸ್ಟ್ರಾಜೆನೆಕಾ ಲಸಿಕೆಯ ಪೂರೈಕೆ ಮತ್ತು ಉತ್ಪಾದನೆಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದೆ. ಮಾಡರ್ನಾ ಇಂಕ್‌, ಫೈಜರ್‌ ಇಂಕ್‌ ಹಾಗೂ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಗಳ ಲಸಿಕೆಗಳ ಅಂತಿಮ ಹಂತದ ಪರೀಕ್ಷೆ ನಡೆಸಲಾಗುತ್ತಿದೆ.

ದೇಶದಲ್ಲಿ ಗುರುವಾರ ಕೋವಿಡ್‌–19 ದೃಢ‍‍‍ಪಟ್ಟ 50,201 ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 83.6 ಲಕ್ಷ ದಾಟಿದೆ. ಇದೇ ಅವಧಿಯಲ್ಲಿ ಸೋಂಕಿನಿಂದ 704 ಮಂದಿ ಸಾವಿಗೀಡಾಗಿದ್ದು, ಈವರೆಗೂ 124,315 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು