ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಲಡಾಖ್‌ನ ಉಳಿದ ಪ್ರದೇಶಗಳಲ್ಲಿ ಸೇನೆ ಹಿಂತೆಗೆತ

ಚೀನಾದಿಂದಲೂ ಸಹಕಾರ: ಭಾರತ ಆಶಯ
Last Updated 2 ಏಪ್ರಿಲ್ 2021, 14:08 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ ನ ಉಳಿದ ಪ್ರದೇಶಗಳಲ್ಲಿ ತಮ್ಮ ಜತೆಗೆ ಚೀನಾ ಕೂಡ ಸೇನಾಪಡೆಗಳನ್ನು ಶೀಘ್ರವಾಗಿ ಹಿಂತೆಗೆದುಕೊಂಡು ಶಾಂತಿ ಸ್ಥಾಪನೆಗೆ ಕೈಜೋಡಿಸಲಿದೆ ಎಂದು ಭಾರತವು ಶುಕ್ರವಾರ ಆಶಯ ವ್ಯಕ್ತಪಡಿಸಿದೆ.

ಗಡಿ ಉದ್ದಕ್ಕೂ ಉದ್ವಿಗ್ನತೆ ಶಮನಗೊಳಿಸುವುದು ಸೇನಾ ಪಡೆಗಳ ಸಂಪೂರ್ಣ ಹಿಂತೆಗೆತದಿಂದ ಮಾತ್ರ ಸಾಧ್ಯ. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಮರುಸ್ಥಾಪಿಸಲು ಇದು ಅಗತ್ಯ. ಇದರಿಂದ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ನೆರವಾಗಲಿದೆ ಎಂದು ಭಾರತ ಹೇಳಿದೆ.

ಗಡಿ ಸಮಸ್ಯೆಯನ್ನು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಲು ಎರಡೂ ಕಡೆಯವರೂ ಸಂಪರ್ಕದಲ್ಲಿರುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗ್ಚಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ದೀರ್ಘವಾಗಿ ಎಳೆದೊಯ್ಯಲು ಎರಡೂ ದೇಶಗಳಿಗೂ ಆಸಕ್ತಿ ಇಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನೀಡಿರುವ ಅಭಿಪ್ರಾಯವನ್ನು ಬಗ್ಚಿ ಉಲ್ಲೇಖಿಸಿದ್ದಾರೆ.

‘ಪೂರ್ವ ಲಡಾಖ್‌ನ ಉಳಿದ ಗಡಿ ಪ್ರದೇಶಗಳಲ್ಲಿ ಸೇನಾ ಪಡೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವುದನ್ನು ಖಾತ್ರಿಪಡಿಸಲು ಚೀನಾ ನಮ್ಮೊಂದಿಗೆ ಕೈಜೋಡಿಸುವುದಾಗಿ ಭಾವಿಸಿದ್ದೇವೆ. ಈ ಪ್ರದೇಶದಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಈಗ ಎರಡೂ ಕಡೆಯವರು ಶೀಘ್ರ ಪರಿಹರಿಸಿಕೊಳ್ಳಬೇಕೆಂಬ ನಿಲುವಿಗೆ ಇಬ್ಬರಲ್ಲೂ ಒಮ್ಮತವಿದೆ’ ಎಂದು ಅವರು ಹೇಳಿದ್ದಾರೆ.

‘ಪ್ಯಾಂಗಾಂಗ್‌ ಸರೋವರ ಪ್ರದೇಶದಲ್ಲಿ ಸೇನೆ ಹಿಂತೆಗೆತ ಮಹತ್ವದ ಹೆಜ್ಜೆಯಾಗಿದೆ. ಪಶ್ಚಿಮ ವಲಯದಲ್ಲಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಳಿದಿರುವ ಇತರ ಸಮಸ್ಯೆಗಳನ್ನು ಪರಿಹರಿಸಲು ಇದು ಉತ್ತಮ ಆಧಾರವೊಂದನ್ನು ಒದಗಿಸಿದೆ’ ಎಂದು ಅವರು ಹೇಳಿದ್ದಾರೆ.

ಹಿರಿಯ ಕಮಾಂಡರ್‌ಗಳ ಸಭೆಯಲ್ಲಿ ಮತ್ತು ಗಡಿ ವ್ಯವಹಾರಗಳ ಕುರಿತ ಡಬ್ಲ್ಯುಎಂಸಿಸಿ (ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಷನ್) ಚೌಕಟ್ಟಿನಡಿ ನಡೆದ ಚರ್ಚೆಗಳಲ್ಲಿ ಎರಡೂ ಕಡೆಯವರು ಬಾಕಿ ಸಮಸ್ಯೆಗಳ ಕುರಿತೂ ಸಮಗ್ರ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ ಎಂದು ಬಗ್ಚಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT