ಮಂಗಳವಾರ, ಜೂನ್ 22, 2021
22 °C

ಹಾವು ಕಡಿತದಿಂದ ಪ್ರತಿ ವರ್ಷ 50,000ಕ್ಕೂ ಅಧಿಕ ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ 50,000ಕ್ಕೂ ಅಧಿಕ ಜನರು ಸಾವನ್ನಪ್ಪುತ್ತಾರೆ ಎಂದು ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್‌) ಹಿರಿಯ ವಿಜ್ಞಾನಿ ಡಾ.ವರದ್ ಗಿರಿ ಹೇಳಿದ್ದಾರೆ.

ಬಹುತೇಕ ಘಟನೆಗಳಲ್ಲಿ , ಸಾವು ಸಂಭವಿಸಲು ಮಾನವ ಎಸಗುವ ಪ್ರಮಾದಗಳೇ ಕಾರಣವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

ಡಾ. ಗಿರಿ ಅವರು ಹಾವುಗಳಿಗೆ ಸಂಬಂಧಿಸಿ ಪಶ್ಷಿಮ ಘಟ್ಟದಲ್ಲಿ ಆಳವಾದ ಅಧ್ಯಯನ ಮಾಡಿದ್ದು, ಉರಗಗಳ ಮೇಲೆ ಅಧಿಕಾರಯುತವಾಗಿ ಮಾತನಾಡುವ ತಜ್ಞ ಎಂದೇ ಖ್ಯಾತರಾಗಿದ್ದಾರೆ. ‘ಡೆಂಡ್ರೇಪ್ಯಾಫಿಸ್‌ ಗಿರಿ’ ಅಥವಾ  ‘ಗಿರಿಸ್‌ ಬ್ರಾಂಜ್‌ಬ್ಯಾಕ್‌ ಟ್ರಿ ಸ್ನೇಕ್‌’ ಎಂದು ಅವರ ಗೌರವಾರ್ಥ ಒಂದು ಪ್ರಭೇದದ ಹಾವಿಗೆ ನಾಮಕರಣ ಮಾಡಲಾಗಿದೆ.

‘ಹಾವು ಕಡಿತದ ಪ್ರಕರಣಗಳ ಪೈಕಿ ಶೇ 20–30ರಷ್ಟು ಜನರು ಮಾತ್ರ ಆಸ್ಪತ್ರೆಗೆ ತೆರಳುತ್ತಾರೆ’ ಎಂದೂ ಅವರು ಹೇಳಿದ್ದಾರೆ.

‘ಭಾರತದಲ್ಲಿ 330 ಪ್ರಭೇದದ ಹಾವುಗಳಿದ್ದು, ಅವುಗಳಲ್ಲಿ 65 ಪ್ರಭೇದದ ಹಾವುಗಳ ಮಾತ್ರ ವಿಷಕಾರಿಯಾಗಿವೆ. ಈ ಶೇ 65ರಷ್ಟು ವಿಷಪೂರಿತ ಉರಗಗಳ ಪೈಕಿ ಇಂಡಿಯನ್‌ ಕೋಬ್ರಾ, ಕಟ್ಟು ಹಾವು (ಕಾಮನ್‌ ಕ್ರೇಟ್‌), ಕೊಳಕ ಮಂಡಲ (ರಸೆಲ್ಸ್‌ ವೈಪರ್‌) ಹಾಗೂ ಗರಗಸಮಂಡಲ (ಸಾ ಸ್ಕೇಲ್ಡ್‌ ವೈಪರ್‌) ಎಂಬ ಹಾವುಗಳು ಮಾನವನ ವಾಸಸ್ಥಾನಕ್ಕೆ ಸಮೀಪದಲ್ಲಿ ಕಂಡುಬರುತ್ತವೆ. ಹೆಚ್ಚಿನ ಪ್ರಾಣಹಾನಿಗೆ ಈ ಹಾವುಗಳ ಕಡಿತವೇ ಕಾರಣವಾಗಿದೆ’ ಎಂದು ಡಾ.ಗಿರಿ ವಿವರಿಸಿದರು.

‘ಈ ನಾಲ್ಕು ಹಾವುಗಳನ್ನು ‘ಬಿಗ್‌ ಫೋರ್‌’ ಎಂದು ಕರೆಯಲಾಗುತ್ತಿದ್ದು, ಇವುಗಳು ಈಗಲೂ ವೈದ್ಯಕೀಯ ವಿಜ್ಞಾನಕ್ಕೆ ಸವಾಲಾಗಿವೆ’ ಎಂದರು.

‘ಹಾವುಗಳ ಕುರಿತಂತೆ ಜನರಿಗೆ ತಿಳಿವಳಿಕೆ ನೀಡಬೇಕಿದೆ. ಅರಿವಿನ ಕೊರತೆಯಿಂದಾಗಿಯೇ ಅವುಗಳನ್ನು ಕಂಡರೆ ನಮಗೆ ಭಯ ಜಾಸ್ತಿ’ ಎಂದು ಪ್ರತಿಪಾದಿಸಿದರು.

ಜನರಲ್ಲಿ ಉರಗಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಅವರು ಬಿಎಚ್‌ಎಚ್‌ಎಸ್‌ ನೆರವಿನೊಂದಿಗೆ ಅವರು ‘ಅಂಡರ್‌ಸ್ಟ್ಯಾಂಡಿಂಗ್‌ ಸ್ನೇಕ್ಸ್‌’ ಹಾಗೂ ‘ಸ್ನೇಕ್‌ ಟಾಕ್ಸಾನಾಮಿ’ ಎಂಬ ಕೋರ್ಸ್‌ಗಳನ್ನು ನಡೆಸುತ್ತಿದ್ದಾರೆ.

‘ಹಾವು ಕಡಿತ ವ್ಯಕ್ತಿಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಒಯ್ದು ಹಾವಿನ ವಿಷ ಪ್ರತಿರೋಧಕ ಔಷಧ’ (ಎಎಸ್‌ವಿಎಸ್‌) ಕೊಡಿಸಬೇಕು. ಮಾಟ–ಮಂತ್ರ ಅಥವಾ ಇತರ ಯಾವುದೇ ಸ್ಥಳೀಯವಾಗಿ ಸಿಗುವ ಚಿಕಿತ್ಸೆಯನ್ನು ಕೊಡಿಸಬಾರದು’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು