ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಯುದ್ಧ : ವಿಶ್ವಸಂಸ್ಥೆಯ ಸಾಮರ್ಥ್ಯ ಪ್ರಶ್ನಿಸಿದ ಭಾರತ

ರಷ್ಯಾ ಸೇನೆ ಹಿಂಪಡೆಯುವಂತೆ ಮಂಡಿಸಿದ ನಿರ್ಣಯ ಅಂಗೀಕಾರ
Last Updated 24 ಫೆಬ್ರುವರಿ 2023, 14:32 IST
ಅಕ್ಷರ ಗಾತ್ರ

ನವದೆಹಲಿ: ವರ್ಷ ಪೂರೈಸಿದ ಉಕ್ರೇನ್‌ ಯುದ್ಧ ಕೊನೆಗೊಳಿಸುವ ಸಲುವಾಗಿ ಸೇನೆ ಹಿಂಪಡೆಯಲು ರಷ್ಯಾದ ಮೇಲೆ ಒತ್ತಡ ಹೇರುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಹೊರಗುಳಿಯಿತು. ಉಭಯ ರಾಷ್ಟ್ರಗಳ ಸಂಘರ್ಷದಲ್ಲಿ ಭಾರತ ಮತ್ತೊಮ್ಮೆ ತಟಸ್ಥ ನಿಲುವು ತೆಗೆದುಕೊಂಡಿತು. ಜಾಗತಿಕ ಶಾಂತಿ ಕಾಪಾಡುವಲ್ಲಿ ವಿಶ್ವಸಂಸ್ಥೆಯ ಸಾಮರ್ಥ್ಯವನ್ನೂ ಭಾರತ ಪ್ರಶ್ನಿಸಿತು.

ಆದಾಗ್ಯೂ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ‘ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ’ ಆದಷ್ಟು ಶೀಘ್ರ ಸ್ಥಾಪಿಸಬೇಕೆಂದು ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಣಯ ಮಂಡಿಸಿದವು. 193 ಸದಸ್ಯ ಬಲದ ವಿಶ್ವಸಂಸ್ಥೆಯಲ್ಲಿ 141 ರಾಷ್ಟ್ರಗಳ ಬೆಂಬಲದೊಂದಿಗೆ ನಿರ್ಣಯ ಅಂಗೀಕಾರವಾಯಿತು. ನಿರ್ಣಯದ ವಿರುದ್ಧ ಏಳು ರಾಷ್ಟ್ರಗಳು ಮಾತ್ರ ಮತ ಚಲಾಯಿಸಿದವು.

ಮತದಾನದಿಂದ ಹೊರಗುಳಿದ ಭಾರತದ ನಿಲುವನ್ನೇ ಪಾಕಿಸ್ತಾನ, ಚೀನಾ ಮತ್ತು ಇತರ 29 ರಾಷ್ಟ್ರಗಳು ಅನುಸರಿಸಿದವು. ಉಕ್ರೇನ್‌ ಅಷ್ಟೇ ಅಲ್ಲ, ಫ್ರಾನ್ಸ್‌, ಜರ್ಮನಿ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ಐರೋಪ್ಯ ಒಕ್ಕೂಟವು ನಿರ್ಣಯ ಬೆಂಬಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದವು.

ಭಾರತದ ನಿರ್ಧಾರಕ್ಕೆ ವಿವರಣೆ ನೀಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ರುಚಿರಾ ಕಾಂಬೊಜ್ ಅವರು, ‘ವಿಶ್ವಸಂಸ್ಥೆಯ ವ್ಯವಸ್ಥೆ ಮತ್ತು ಅದರ ಪ್ರಮುಖ ಅಂಗ ಭದ್ರತಾ ಮಂಡಳಿಯು 1945ರ ವಿಶ್ವ ನಿರ್ಮಾಣದ ಆಧಾರದ ಮೇಲೆ ರಚಿತವಾಗಿದೆ. ಸಮಕಾಲೀನ ಸವಾಲುಗಳನ್ನು ಎದುರಿಸಲು, ಜಾಗತಿಕ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಇದು ನಿಷ್ಪರಿಣಾಮಕಾರಿಯಾಗಿಲ್ಲವೇ? ರಷ್ಯಾ– ಉಕ್ರೇನ್‌ ಸಂಘರ್ಷ ಕೊನೆಗಾಣಿಸಲು ಉಭಯತ್ರರು ಒಪ್ಪುವ ಪರಿಹಾರ ಮಾರ್ಗದ ಹತ್ತಿರ ನಾವು ತಲುಪಿದ್ದೀವಾ’ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರು ಪುಟಿನ್‌ ಜತೆಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ‘ಇದು ಯುದ್ಧದ ಯುಗವಲ್ಲ’ವೆಂದು ನೀಡಿದ್ದ ಸಂದೇಶವನ್ನು ರುಚಿರಾ ಪುನರುಚ್ಚರಿಸಿದರು.

‘ಸಂಘರ್ಷ ಶಮನಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಏಕೈಕ ಕಾರ್ಯಸಾಧ್ಯ ಮಾರ್ಗವೆಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಈಗಿನ ನಿರ್ಣಯದ ಉದ್ದಿಶ್ಯ, ಅದರಲ್ಲಿರುವ ಅಂತರ್ಗತ ಮಿತಿ ಗಮನಿಸಿದರೆ, ಶಾಶ್ವತ ಶಾಂತಿ ಸ್ಥಾಪನೆಯ ನಮ್ಮ ಅಪೇಕ್ಷಿತ ಗುರಿ ತಲುವುದಕ್ಕೆ ನಿರ್ಬಂಧ ಹಾಕಿಕೊಂಡಂತಿಲ್ಲವೇ?’ ಎಂದು ರುಚಿರಾ ಹೇಳಿದರು.

ಆಕ್ರಮಣದಿಂದ ಉಕ್ರೇನ್‌ಗೆ ಆಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ಮತ್ತು ಯುದ್ಧಕ್ಕೆ ರಷ್ಯಾವನ್ನು ಹೊಣೆಯಾಗಿಸಿ 2022ರ ನವೆಂಬರ್‌ನಲ್ಲಿ ಮಂಡಿಸಿದ ಕರಡು ನಿರ್ಣಯದ ಮತದಾನದಿಂದಲೂ ಭಾರತ ಅಂತರ ಕಾಯ್ದುಕೊಂಡು, ತಟಸ್ಥವಾಗಿ ಉಳಿದಿತ್ತು.

‘ಭದ್ರತಾ ಮಂಡಳಿಗೆ ಬೇಕು ಭಾರತದ ಪ್ರಾತಿನಿಧ್ಯ’

ಮುಂಬೈ : ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದ್ಯದ ವ್ಯವಸ್ಥೆ ನಿಷ್ಕ್ರಿಯವಾಗಿದೆ. ಭದ್ರತಾ ಮಂಡಳಿಯ ಪುನರ್‌ ರಚನೆ ಅತ್ಯಗತ್ಯ. ಇದರಲ್ಲಿ ಭಾರತಕ್ಕೆ ಹೆಚ್ಚಿನ ಪಾತ್ರವಿರಬೇಕು’ ಎಂದು ಬ್ರಿಟನ್‌ ಮಾಜಿ ಪ್ರಧಾನಿ ಲಿಜ್‌ ಟ್ರಸ್‌ ಶುಕ್ರವಾರ ಅಭಿಪ್ರಾಯಪಟ್ಟರು.

ಎಬಿಪಿ ನೆಟ್‌ವರ್ಕ್‌ನ ಐಡಿಯಾಸ್ ಆಫ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವ ಸ್ಥಾನ ಮುಂದುವರಿಸಬೇಕೆ ಎನ್ನುವ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಭದ್ರತಾ ಮಂಡಳಿಯನ್ನು ಪುನರ್‌ ರಚಿಸುವುದು ಅಗತ್ಯವಾಗಿದೆ. ಭದ್ರತಾ ಮಂಡಳಿಯ ಐದು ಸದಸ್ಯ ರಾಷ್ಟ್ರಗಳಲ್ಲಿ ಈಗ ಒಂದು ರಾಷ್ಟ್ರ ಉಕ್ರೇನ್‌ನಲ್ಲಿ ಅಕ್ರಮ ಯುದ್ಧದಲ್ಲಿ ತೊಡಗಿದೆ. ಹೀಗಿರುವಾಗ ನಾವು ಏನನ್ನು ಅನುಸರಿಸುತ್ತಿದ್ದೇವೆ, ಈ ಮಂಡಳಿ ಹೇಗೆ ಕಾರ್ಯನಿರ್ವಹಿಸುತ್ತಿದೆ? ಎಂದು ಪ್ರಶ್ನಿಸುವುದು ಸಹಜ. ಜಾಗತಿಕ ಮಟ್ಟದಲ್ಲಿ ಭಾರತ ಪ್ರಮುಖ ಪಾಲುದಾರ, ವಿಶ್ವಸಂಸ್ಥೆಯಲ್ಲಿ ಭಾರತ ಹೆಚ್ಚಿನ ಪಾತ್ರ ವಹಿಸಬೇಕೆನ್ನುವುದನ್ನು ನಾನು ಖಂಡಿತವಾಗಿಯೂ ಬೆಂಬಲಿಸುತ್ತೇನೆ’ ಎಂದು ಅವರು ಹೇಳಿದರು.

ಉಕ್ರೇನ್ ಯುದ್ಧದ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಾವುದೇ ನಿರ್ಣಾಯಕ ಪರಿಣಾಮ ಬೀರುವುದಿಲ್ಲ. ಹಾಗಾಗಿ, ನಾವು ತ್ವರಿತಗತಿಯಲ್ಲಿ ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವ ನೀಡಬೇಕಾಗಿತ್ತು ಎಂದು ಟ್ರಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT