ಶುಕ್ರವಾರ, ಅಕ್ಟೋಬರ್ 30, 2020
27 °C
ಗ್ಲೋಬಲ್ ಹಂಗರ್‌ ಇಂಡೆಕ್ಸ್‌ನ ವೆಬ್‌ಸೈಟ್‌ ಮಾಹಿತಿ

ಜಾಗತಿಕ ಹಸಿವು ಸೂಚ್ಯಂಕ: 94ನೇ ಸ್ಥಾನದಲ್ಲಿ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಈ ವರ್ಷದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ಈ ಬಾರಿ 107 ದೇಶಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು.

ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ ದೇಶಗಳಲ್ಲಿ  ನಡೆಸಿದ ಸಮೀಕ್ಷೆಯನ್ನು ಆಧರಿಸಿ ಸಿದ್ಧಪಡಿಸಲಾಗಿರುವ ವರದಿಯನ್ನು ಗ್ಲೋಬಲ್ ಹಂಗರ್‌ ಇಂಡೆಕ್ಸ್‌ (ಜಿಎಚ್‌ಐ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕಳೆದ ವರ್ಷ 117 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಆಗ ಭಾರತ 102ನೇ ಸ್ಥಾನದಲ್ಲಿತ್ತು.

ಹಸಿವಿಗೆ ಸಂಬಂಧಿಸಿದಂತೆ ಭಾರತ ‘ಗಂಭೀರ’ ವರ್ಗದಲ್ಲಿದೆ. ನೆರೆಯ ದೇಶಗಳಾದ ಬಾಂಗ್ಲಾದೇಶ, ಮ್ಯಾನ್ಮಾರ್‌ ಹಾಗೂ ‍ಪಾಕಿಸ್ತಾನ ಸಹ ಇದೇ ವರ್ಗದಲ್ಲಿದ್ದು, ಕ್ರಮವಾಗಿ 75, 78 ಹಾಗೂ 88ನೇ ಸ್ಥಾನದಲ್ಲಿವೆ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.

ನೇಪಾಳ 73 ಹಾಗೂ ಶ್ರೀಲಂಕಾ 64ನೇ ಸ್ಥಾನದಲ್ಲಿದ್ದು, ಇವುಗಳನ್ನು ಸೂಚ್ಯಂಕಕ್ಕೆ ಸಂಬಂಧಿಸಿ ‘ಮಧ್ಯಮ’ ವರ್ಗದಲ್ಲಿರಿಸಲಾಗಿದೆ ಎಂದು ವರದಿ ವಿವರಿಸಿದೆ.

ಚೀನಾ, ಬೆಲಾರಸ್‌, ಉಕ್ರೇನ್‌, ಟರ್ಕಿ, ಕ್ಯೂಬಾ, ಕುವೈತ್‌ ಅಪೌಷ್ಟಿಕತೆ ನಿವಾರಣೆಯಲ್ಲಿ ಉತ್ತಮ ಸಾಧನೆ ದಾಖಲಿಸಿದ್ದು, ಐದರೊಳಗೆ ಸ್ಥಾನ ಪಡೆದಿವೆ ಎಂದೂ ಜಿಎಚ್‌ಐ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ವರದಿ ವಿವರಿಸುತ್ತದೆ.

‘ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವಲ್ಲಿ ಭಾರತದ ಸ್ಥಾನ ಬದಲಾಗಬೇಕು ಎಂದರೆ, ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶದಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ರಾಜ್ಯಗಳ ಸಾಧನೆ ಸುಧಾರಿಸಬೇಕು’ ಎಂದು ನವದೆಹಲಿ ಮೂಲದ ಇಂಟರ್‌ನ್ಯಾಷನಲ್‌ ಫುಡ್‌ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಂಶೋಧಕಿ ಪೂರ್ಣಿಮಾ ಮೆನನ್‌ ಹೇಳುತ್ತಾರೆ.

‘ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶಗಳಂತಹ ರಾಜ್ಯಗಳ ಸಾಧನೆಯೇ ದೇಶಕ್ಕೆ ಸಿಗುವ ಸ್ಥಾನದ ಮೇಲೂ ಪರಿಣಾಮ ಬೀರುತ್ತದೆ. ಈ ರಾಜ್ಯಗಳಲ್ಲಿ ಜನಸಂಖ್ಯೆಯೂ ದೊಡ್ಡದು. ಅದೇ ರೀತಿ ಅಪೌಷ್ಟಿಕತೆ ಪ್ರಮಾಣವೂ ಈ ರಾಜ್ಯಗಳಲ್ಲಿಯೇ ಅಧಿಕ’ ಎಂದೂ ಪ್ರತಿಪಾದಿಸಿದರು.

‘ಪೌಷ್ಟಿಕತೆಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಜಾರಿಗೊಳಿಸುವ ಯೋಜನೆಗಳು ಅದ್ಭುತವಾಗಿವೆ. ಆದರೆ, ವಾಸ್ತವ ಸ್ಥಿತಿಯೇ ಬೇರೆ. ಈ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡದೇ ಇರುವುದು ನಿರಾಶೆ ಮೂಡಿಸುತ್ತದೆ’ ಎಂದು ಪಬ್ಲಿಕ್‌ ಹೆಲ್ತ್‌ ಫೌಂಡೇಷನ್‌ ಆಫ್‌ ಇಂಡಿಯಾದ ಪೌಷ್ಟಿಕತೆ ಸಂಶೋಧನಾ ವಿಭಾಗದ ಮುಖ್ಯಸ್ಥೆ ಶ್ವೇತಾ ಖಂಡೇಲವಾಲ್‌ ಅಭಿಪ್ರಾಯಪಡುತ್ತಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು