ಸ್ಟ್ಯಾನ್ ಸ್ವಾಮಿ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ: ಭಾರತ

ನವದೆಹಲಿ: ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರ ಸಾವು ಪ್ರಕರಣದ ಸಂಬಂಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಎದುರಾಗಿರುವ ಟೀಕೆಗಳನ್ನು ಭಾರತ ನಿರಾಕರಿಸಿದ್ದು, ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸ್ಟ್ಯಾನ್ ಸ್ವಾಮಿ ಪ್ರಕರಣದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಾನೂನುಬದ್ಧ ಹಕ್ಕುಗಳನ್ನು ತಡೆಹಿಡಿಯಲಾಗಿಲ್ಲ, ಅಧಿಕಾರಿಗಳು ಕಾನೂನು ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಸಾವು 'ಮಹಾ ದುರಂತ': ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಕಳವಳ
ಭಾರತವು ತನ್ನ ಎಲ್ಲ ಪ್ರಜೆಗಳ ಮಾನವ ಹಕ್ಕುಗಳ ಸಂರಕ್ಷಣೆಗೆ ಬದ್ಧವಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನ್ಯಾಯಾಂಗ ವ್ಯವಸ್ಥೆ ಮತ್ತು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಮಾನವ ಹಕ್ಕುಗಳ ಆಯೋಗಗಳಿಂದ ಪೂರಕವಾಗಿವೆ ಎಂದು ಹೇಳಿದೆ.
ಕಳೆದ ವರ್ಷ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಎಲ್ಗಾರ್ ಪರಿಷತ್–ಮಾವೊ ಪ್ರಕರಣಕ್ಕೆ ಸಂಬಂಧಿಸಿದಂತೆ 84 ವರ್ಷದ ಸ್ಟ್ಯಾನ್ ಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಅವರು ಮುಂಬೈ ಆಸ್ಪತ್ರೆಯಲ್ಲಿ ಸೋಮವಾರದಂದು ನಿಧರರಾದರು.
ಸ್ಟ್ಯಾ ನ್ ಸ್ವಾಮಿ ಅವರ ಸಾವು 'ಮಹಾ ದುರಂತ' ಎಂದು ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಸಂಘಟನೆ ಕಳವಳ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಭಾರತ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಸಂಪಾದಕೀಯ: ಸ್ಟ್ಯಾನ್ ಸ್ವಾಮಿ ಸಾವು ಒಂದು ಅಮಾನವೀಯ ಅಧ್ಯಾಯ
ಕಾನೂನಿನ ಸರಿಯಾದ ಪ್ರಕ್ರಿಯೆಯ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಸ್ಟ್ಯಾನ್ ಸ್ವಾಮಿ ಅವರನ್ನು ಬಂಧಿಸಿತ್ತು. ಅವರ ವಿರುದ್ಧದ ಆರೋಪಗಳು ನಿರ್ದಿಷ್ಟವಾಗಿದ್ದ ಕಾರಣ ಜಾಮೀನು ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದೆ ಎಂದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.