ಗುರುವಾರ , ಆಗಸ್ಟ್ 11, 2022
23 °C
ಬೆಂಬಲ ಬೆಲೆ ರದ್ದಾಗುವುದಿಲ್ಲ, ಅಪಪ್ರಚಾರಗಳಿಗೆ ಬಲಿಯಾಗಬೇಡಿ: ರೈತರಿಗೆ ಕೇಂದ್ರ ಸರ್ಕಾರದ ಮನವಿ

ಕೃಷಿ ಕಾಯ್ದೆಗಳ ಪರ ಅಭಿಯಾನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರವು ಒಂದೆಡೆ, ಪ್ರತಿಭಟನನಿರತ ರೈತರ ಪ್ರತಿನಿಧಿಗಳ ಜತೆ ಮಾತುಕತೆ ನಡೆಸುತ್ತಿದ್ದರೆ ಇನ್ನೊಂದೆಡೆ, ಹೊಸ ಕೃಷಿ ಕಾಯ್ದೆಗಳಿಂದ ರೈತರಿಗೆ ಏನೇನು ಲಾಭಗಳಾಗಲಿವೆ ಎಂಬುದನ್ನು ತಿಳಿಸುವ ಮತ್ತು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವ ಅಭಿಯಾನವನ್ನು ಆರಂಭಿಸಿದೆ.

‘ಹೆಚ್ಚಿನ ದರ ಕೊಡುವವರಿಗೆ ತಮ್ಮ ಉತ್ಪನ್ನವನ್ನು ಮಾರಾಟಮಾಡುವ ಅವಕಾಶವನ್ನು ರೈತರಿಗೆ ನೀಡಿದರೆ ಅದು ಅನ್ಯಾಯ ಹೇಗಾಗುತ್ತದೆ’ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನರೇಂದ್ರಸಿಂಗ್‌ ತೋಮರ್‌, ಪೀಯೂಶ್‌ ಗೋಯಲ್‌ ಹಾಗೂ ರವಿಶಂಕರ್‌ ಪ್ರಸಾದ್‌ ಅವರು ಶನಿವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ ರೈತರ ಪ್ರತಿಭಟನೆಯ ಬಗ್ಗೆ ಚರ್ಚಿಸಿದ್ದಾರೆ. ಇದಾದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಮೂರೂ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ರೈತರ ಒತ್ತಾಯಕ್ಕೆ ಮಣಿಯಲು ಸರ್ಕಾರ ಸಿದ್ಧವಿಲ್ಲ ಎಂಬ ಸೂಚನೆ, ರವಿಶಂಕರ್‌ ಅವರ ಹೇಳಿಕೆಯಿಂದ ವ್ಯಕ್ತವಾಗಿದೆ.

‘ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಬದಲು, ರೈತರಿಗೆ ಹಾನಿಯಾಗಬಹುದು ಎಂದು ಭಾವಿಸಲಾದ ವಿಚಾರಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ’ ಎಂಬ ಅಭಿಪ್ರಾಯವನ್ನು ಕೃಷಿ ಸಚಿವರು ವ್ಯಕ್ತಪಡಿಸಿದ್ದಾರೆ. ‘ಎಪಿಎಂಸಿಗಳನ್ನಾಗಲಿ, ಕನಿಷ್ಠ ಬೆಂಬಲ ಬೆಲೆಯನ್ನಾಗಲಿ ರದ್ದುಪಡಿಸುವ ಪ್ರಸ್ತಾವ ಯಾವ ಕಾಯ್ದೆಯಲ್ಲೂ ಇಲ್ಲ. ಈ ಬಗೆಗಿನ ಆತಂಕವು ನಿರಾಧಾರವಾದುದು’ ಎಂದು ಕೃಷಿ ಸಚಿವ ತೋಮರ್‌ ಹೇಳಿದ್ದಾರೆ. ಇದರ ಜತೆಯಲ್ಲೇ, ಹೊಸ ಕಾಯ್ದೆಗಳ ಲಾಭ ಪಡೆದು ಅಭಿವೃದ್ಧಿ ಸಾಧಿಸಿದ ರೈತರ ಯಶೋಗಾಥೆಗಳಿಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ ಎಂದಿದ್ದಾರೆ.

ಹೊಸ ಕಾನೂನುಗಳ ವಿವಿಧ ಆಯಾಮಗಳನ್ನು ತಿಳಿಸುವ ಹಾಗೂ ಈ ‘ಐತಿಹಾಸಿಕ ಕೃಷಿ ಕಾನೂನು’ಗಳ ಬಗ್ಗೆ ಅಪಪ್ರಚಾರ ನಡೆಸುತ್ತಿರುವವರ ಮಾತಿಗೆ ಮರುಳಾಗಬೇಡಿ ಎಂದು ರೈತರಲ್ಲಿ ಮನವಿ ಮಾಡುವಂಥ ಕಿರು ಚಿತ್ರವನ್ನೂ ಸರ್ಕಾರ ಸಿದ್ಧಪಡಿಸಿದೆ.

ಟಿಎಂಸಿ, ಡಿಎಂಕೆ, ಆರ್‌ಜೆಡಿ ಬೆಂಬಲ

‘ಪ್ರತಿಭಟನಾನಿರತರ ಜೊತೆ ನಾವಿದ್ದೇವೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಯ ನೀಡಿದ್ದಾರೆ. ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ರೈತರ ಜೊತೆ ಮಾತುಕತೆ ನಡೆಸಿ, ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ಡಿಎಂಕೆ ಒತ್ತಾಯಿಸಿದೆ. ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ಮುಖಂಡರು ರೈತರ ಪ್ರತಿಭಟನೆ ಬೆಂಬಲಿಸಿ ತಮಿಳಿನಾಡಿನ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಬಿಹಾರದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕ್ರೀಡಾಪಟುಗಳಿಂದ ಪ್ರಶಸ್ತಿ ವಾಪಸ್

ರೈತರ ಪ್ರತಿಭಟನೆಯನ್ನು ಬೆಂಬಲಿಸಿರುವ ಪಂಜಾಬ್‌ನ ನಿವೃತ್ತ ಕ್ರೀಡಾಪಟುಗಳು ಪ್ರಶಸ್ತಿಗಳನ್ನು ಹಿಂದಿರುಗಿಸುವ ಸಲುವಾಗಿ ಶನಿವಾರ ದೆಹಲಿ ತಲುಪಿದ್ದಾರೆ. ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ಕ್ರೀಡಾಪಟುಗಳು ಭಾನುವಾರ ಪ್ರಶಸ್ತಿಗಳನ್ನು ಹಿಂದಿರುಗಿಸಲಿದ್ದಾರೆ. 

ಭೇಟಿಗೆ ರಾಷ್ಟ್ರಪತಿ ಅವರು ಅವಕಾಶ ನೀಡದಿದ್ದಲ್ಲಿ, ರಾಷ್ಟ್ರಪತಿ ಭವನದ ಹೊರಗಡೆ ಪ್ರಶಸ್ತಿಗಳನ್ನು ಇರಿಸಲಿದ್ದೇವೆ ಎಂದು ಮಾಜಿ ಹಾಕಿ ಆಟಗಾರ ರಾಜ್‌ಬೀರ್ ಕೌರ್ ಹೇಳಿದ್ದಾರೆ.

ಮಧ್ಯಪ್ರವೇಶಕ್ಕೆ ಬ್ರಿಟನ್ ಆಗ್ರಹ

ವಿದೇಶಾಂಗ ಸಚಿವ ಡಾಮಿನಿಕ್ ರಾಬ್ ಅವರಿಗೆ ಪತ್ರ ಬರೆದಿರುವ ಬ್ರಿಟನ್‌ನ 36 ಸಂಸದರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಮೂಲಕ ರೈತರ ಪ್ರತಿಭಟನೆ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಭಾರತದಲ್ಲಿ ಭೂಮಿ ಮತ್ತು ಕೃಷಿಗೆ ಜೊತೆಗೆ ದೀರ್ಘಕಾಲದ ಬಾಂಧವ್ಯ ಹೊಂದಿರುವ ಬ್ರಿಟಿಷ್ ಸಿಖ್ಖರು ಮತ್ತು ಪಂಜಾಬಿಗಳ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ನಿಮ್ಮ ಭಾರತದ ಸಹವರ್ತಿ ಸಚಿವರ ಜೊತೆ  ಮಾತನಾಡಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಬ್ರಿಟಿಷ್ ಸಿಖ್‌ ಲೇಬರ್ ಸಂಸದ ತನ್‌ಮನ್‌ಜೀತ್ ಸಿಂಗ್ ಧೇಸಿ, ಭಾರತ ಸಂಜಾತ ಸಂಸದರಾದ ಲೇಬರ್ ಪಕ್ಷದ ವಿರೇಂದ್ರ ಶರ್ಮಾ, ಸೀಮಾ ಮಲ್ಹೋತ್ರಾ ಮತ್ತು ವಲೇರಿ ವಜ್ ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ. ಲೇಬರ್ ಪಕ್ಷದ ಮುಖಂಡ ಜರೆಮಿ ಕಾರ್ಬೈನ್ ಅವರೂ ದನಿಗೂಡಿಸಿದ್ದಾರೆ.

ಪಂಜಾಬ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಕುರಿತು ಚರ್ಚಿಸಲು ತುರ್ತು ಸಭೆ ನಡೆಸುವಂತೆ ಸಚಿವರನ್ನು ಪತ್ರದಲ್ಲಿ ಒತ್ತಾಯಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು