ಸೋಮವಾರ, ನವೆಂಬರ್ 30, 2020
27 °C

ಭಾರತ ಭೂತಾನ್‌ನೊಂದಿಗೆ ನಿಂತಿದೆ, ಅಗತ್ಯತೆಗಳ ಪೂರೈಕೆಗೆ ಆದ್ಯತೆ: ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭೂತಾನ್ ಕಾರ್ಡ್‌ಗಳನ್ನು ಹೊಂದಿರುವವರು ಭಾರತದಲ್ಲಿ ರುಪೇ ನೆಟ್‌ವರ್ಕ್ ಪ್ರವೇಶಿಸಲು ಅನುವು ಮಾಡಿಕೊಡುವ ರುಪೇ ಕಾರ್ಡ್ ಹಂತ-2ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭೂತಾನ್ ಪ್ರಧಾನಿ ಲೋತಾಯ್ ತ್ಸೆರಿಂಗ್ ಅವರು ಶುಕ್ರವಾರ ವಿಡಿಯೊ ಕಾನ್ಪರೆನ್ಸ್ ಮೂಲಕ ಉದ್ಘಾಟನೆ ಮಾಡಿದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಭೂತಾನ್‌ಗೆ ಭೇಟಿ ನೀಡಿದ್ದ ವೇಳೆ ಉಭಯ ದೇಶಗಳ ಪ್ರಧಾನ ಮಂತ್ರಿಗಳು ಜಂಟಿಯಾಗಿ ರುಪೇ ಕಾರ್ಡ್‌ ಯೋಜನೆಯ ಮೊದಲ ಹಂತವನ್ನು ಉದ್ಘಾಟನೆ ಮಾಡಿದ್ದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, 'ಭೂತಾನ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಇಸ್ರೋ ಸಿದ್ಧತೆ ಮತ್ತು ಮೂರನೇ ಅಂತರರಾಷ್ಟ್ರೀಯ ಅಂತರ್ಜಾಲ ಗೇಟ್‌ವೇಗೆ ಸಂಬಂಧಿಸಿದಂತೆ ಭೂತಾನ್‌ನೊಂದಿಗೆ ಬಿಎಸ್‌ಎನ್‌ಎಲ್ ಮಾಡಿಕೊಂಡ ಒಪ್ಪಂದ' ಸೇರಿದಂತೆ ಭಾರತ-ಭೂತಾನ್ ನಡುವಿನ ಸಾವಿರಾರು ವರ್ಷಗಳ ರಾಜತಾಂತ್ರಿಕ ಹಾಗೂ ಸಾಂಸ್ಕೃತಿಕ ಸಂಬಂಧದ ಕುರಿತು ಮಾತನಾಡಿದರು.

ಇದನ್ನೂ ಓದಿ: 

ಕೋವಿಡ್-19 ಸಾಂಕ್ರಾಮಿಕ ರೋಗದ ಈ ಕಷ್ಟದ ಸಮಯದಲ್ಲಿ ಭಾರತವು ಭೂತಾನ್‌ನೊಂದಿಗೆ ದೃಢವಾಗಿ ನಿಂತಿದೆ ಎಂದು ಅವರು ಪ್ರತಿಪಾದಿಸಿದರು ಮತ್ತು ನೆರೆಯ ದೇಶದ ಅವಶ್ಯಕತೆಗಳನ್ನು ಪೂರೈಸುವುದು ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿರುತ್ತದೆ ಎಂದು ಹೇಳಿದರು.

ಭೂತಾನ್‌ನಲ್ಲಿ ರುಪೇ ಕಾರ್ಡ್‌ಗಳ ಹಂತ -1ರ ಅನುಷ್ಠಾನದಿಂದಾಗಿ ಭಾರತದಿಂದ ಹೋಗುವ ಪ್ರವಾಸಿಗರಿಗೆ ಭೂತಾನ್‌ನಾದ್ಯಂತ ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ (ಪಿಒಎಸ್) (ಕೊಳ್ಳುವ ಅಥವಾ ಮಾರುವ ಸ್ಥಳ) ಟರ್ಮಿನಲ್‌ಗಳನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಎರಡನೇ ಹಂತದಲ್ಲಿ ಭೂತಾನ್ ಕಾರ್ಡ್ ಹೊಂದಿರುವವರಿಗೆ ಭಾರತದಲ್ಲಿ ರುಪೇ ನೆಟ್‌ವರ್ಕ್ ಪ್ರವೇಶಿಸಲು ಅವಕಾಶ ನೀಡುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ಮತ್ತು ಭೂತಾನ್ ವಿಶೇಷ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ, ಪರಸ್ಪರ ತಿಳಿವಳಿಕೆ ಮತ್ತು ಗೌರವ, ಸಾಂಸ್ಕೃತಿಕ ಪರಂಪರೆಯ ಹಂಚಿಕೆ ಮತ್ತು ಜನರ ನಡುವೆ ಬಲಿಷ್ಠ ಸಂಪರ್ಕವನ್ನು ಹೊಂದಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ರುಪೇ ಕಾರ್ಡ್ ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ನ ಪಾವತಿ ಜಾಲವಾಗಿದ್ದು, ಎಟಿಎಂಗಳು, ಪಿಒಎಸ್ ಸಾಧನಗಳು ಮತ್ತು ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಬಳಕೆ ಮಾಡಲು ಅವಕಾಶ ಒದಗಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು