ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಒಕ್ಕೂಟದ ರೀತಿ ಭಾರತವೂ ವಿಭಜನೆ: ಶಿವಸೇನಾ ಎಚ್ಚರಿಕೆ

ಕೇಂದ್ರದಿಂದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಯತ್ನ: ಟೀಕೆ
Last Updated 27 ಡಿಸೆಂಬರ್ 2020, 19:42 IST
ಅಕ್ಷರ ಗಾತ್ರ

ಮುಂಬೈ: ‘ಕೇಂದ್ರವು ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವುದನ್ನು ಮುಂದುವರಿಸಿದ್ದೇ ಆದರೆ ಈ ಹಿಂದೆ ಸಂಯುಕ್ತ ಸೋವಿಯತ್‌ ರಷ್ಯಾ ಒಕ್ಕೂಟದ ರೀತಿ ಭಾರತವೂ ವಿಭಜನೆಯಾಗುತ್ತದೆ’ ಎಂಬ ಶಿವಸೇನಾ ವಕ್ತಾರ ಸಂಜಯ್‌ ರಾವುತ್‌ ಅವರ ಹೇಳಿಕೆ ಈಗ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ವಾರದ ಅಂಕಣ ‘ರೋಖ್‌ಠೋಕ್‌’ನಲ್ಲಿ ಬರೆದ ಲೇಖನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ರಾಜ್ಯಸಭಾ ಸದಸ್ಯರೂ ಆಗಿರುವ ರಾವುತ್‌, ‍‘ಸಾಮ್ನಾ’ದ ಕಾರ್ಯ ನಿರ್ವಾಹಕ ಸಂಪಾದಕರೂ ಆಗಿದ್ದಾರೆ.

ರಾವುತ್‌ ಅವರು ತಮ್ಮ ಅಂಕಣದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಖಂಡಿಸಿರುವ ಬಿಜೆಪಿ, ರಾವುತ್‌ ಹಾಗೂ ಶಿವಸೇನಾ ವಿರುದ್ಧ ವಾಗ್ದಾಳಿ ನಡೆಸಿದೆ.

‘ಕೇಂದ್ರ ಹಾಗೂ ಬಿಜೆ‍ಪಿಯೇತರ ಸರ್ಕಾರಗಳು ಇರುವ ರಾಜ್ಯಗಳ ನಡುವಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಇಲ್ಲ. ಆದರೂ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳು ಸಹ ಈ ದೇಶದ ಅವಿಭಾಜ್ಯ ಅಂಗಗಳು ಎಂಬುದನ್ನು ಮರೆಯಲಾಗಿದೆ’ ಎಂದು ರಾವುತ್ ತಮ್ಮ ಅಂಕಣದಲ್ಲಿ ಹೇಳಿದ್ದಾರೆ.

ಬಿಜೆಪಿಯನ್ನು ಟೀಕಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಟೀಕಾ ಪ್ರಹಾರ ಮಾಡಿದ್ದಾರೆ. ‘ಮೋದಿ ಅವರು ಇಡೀ ದೇಶಕ್ಕೆ ಪ್ರಧಾನಿ. ಆದರೆ, ಅವರಿಗೆ ರಾಜ್ಯ ಸರ್ಕಾರಗಳನ್ನು ಅಧಿಕಾರದಿಂದ ಕೆಳಗಿಳಿಸುವುದರಲ್ಲಿಯೇ ಹೆಚ್ಚು ಆಸಕ್ತಿ’ ಎಂದು ಟೀಕಿಸಿದ್ದಾರೆ.

‘ಬಿಜೆಪಿಯ ಪ್ರತಿಷ್ಠೆಯಿಂದಾಗಿಯೇ ಮುಂಬೈ ಮೆಟ್ರೊ ಕಾಮಗಾರಿ ಸ್ಥಗಿತಗೊಂಡಿತ್ತು. ಇನ್ನೊಂದೆಡೆ ಬಾಲಿವುಡ್‌ ನಟಿ ಕಂಗನಾ ರನೌತ್‌, ರಿಪಬ್ಲಿಕ್‌ ಚಾನೆಲ್‌ನ ಮುಖ್ಯ ಸಂಪಾದಕ ಅರ್ನಬ್‌ ಗೋಸ್ವಾಮಿ ರಕ್ಷಣೆಗೆ ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡಿತು‘ ಎಂದೂ ಅವರು ಅಂಕಣದಲ್ಲಿ ಆರೋಪಿಸಿದ್ದಾರೆ.

ಬಿಜೆಪಿ ಪ್ರಶ್ನೆ: ‘ಆಡಳಿತಾರೂಢ ಮಹಾವಿಕಾಸ್‌ ಅಘಾಡಿಯ ಮಿತ್ರ ಪಕ್ಷಗಳಾದ ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡ ರಾಹುಲ್‌ ಗಾಂಧಿ, ಎನ್‌ಸಿಪಿಯ ವರಿಷ್ಠ ಶರದ್‌ ಪವಾರ್‌ ಅವರು ಸಂಜಯ್‌ ರಾವುತ್‌ ನಿಲುವನ್ನು ಸಮರ್ಥಿಸುತ್ತಾರೆಯೇ’ ಎಂದು ಬಿಜೆಪಿ ವಕ್ತಾರ ರಾಮ್‌ ಕದಂ ಪ್ರಶ್ನಿಸಿದ್ದಾರೆ.

‘ರಾಜ್ಯಗಳ ವಿಭಜನೆಯ ಬಗ್ಗೆ ರಾವುತ್‌ ಮಾತನಾಡಿದ್ದಾರೆ. ಇದು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರಿಗೆ ಮಾಡುವ ಅವಮಾನ’ ಎಂದೂ ಟೀಕಿಸಿದ್ದಾರೆ.

‘ತುಕ್ಡೆ–ತುಕ್ಡೆ ಗುಂಪನ್ನು ಬೆಂಬಲಿಸುವ ಕಾಂಗ್ರೆಸ್‌ನೊಂದಿಗೆ ಶಿವಸೇನಾ ಮೈತ್ರಿ ಮಾಡಿಕೊಂಡಿದೆ’ ಎಂದು ಬಿಜೆಪಿಯ ಮತ್ತೊಬ್ಬ ಹಿರಿಯ ಮುಖಂಡ ಅತುಲ್‌ ಭಟ್ಕಳ್ಕರ್‌ ಹೇಳಿದ್ದಾರೆ.

‘ಪ್ರಧಾನಿ ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಒಗ್ಗಟ್ಟಾಗಿ ನಿಂತಿದೆ. ಹೀಗಿರುವಾಗ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿರುವ ರಾವುತ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಅತುಲ್‌ ಆಗ್ರಹಿಸಿದ್ದಾರೆ.

‘ಶಿವಸೇನಾ ಜತೆಗಿನ ಮೈತ್ರಿ ಮಹಾರಾಷ್ಟ್ರಕ್ಕೆ ಸೀಮಿತ’
ಮುಂಬೈ:
‘ಶಿವಸೇನಾ ಯುಪಿಎ ಭಾಗವಲ್ಲ. ಉಭಯ ಪಕ್ಷಗಳ ನಡುವಿನ ಮೈತ್ರಿ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅಶೋಕ್ ಚವಾಣ್ ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುಪಿಎ ನಾಯಕತ್ವದ ಕುರಿತು ಶಿವಸೇನಾ ಮಾತನಾಡುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT