ಬುಧವಾರ, ಡಿಸೆಂಬರ್ 8, 2021
25 °C

ಮುಂದೊಂದು ದಿನ ಇಡೀ ಕಾಶ್ಮೀರ ನಮ್ಮದಾಗಲಿದೆ: ವಾಯುಪಡೆಯ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳುವ ಯಾವುದೇ ಯೋಜನೆ ಸದ್ಯಕ್ಕೆ ಇಲ್ಲ. ಆದರೆ, ಮುಂದೊಂದು ದಿನ ಭಾರತವು ಇಡೀ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುವ ವಿಶ್ವಾಸವಿದೆ ಎಂದು ವಾಯುಪಡೆಯ ಉನ್ನತ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ಭಾರತೀಯ ಪಡೆಗಳ ಬದ್ಗಾಮ್‌ ಲ್ಯಾಂಡಿಂಗ್‌ನ 75ನೇ ವಾರ್ಷಿಕೋತ್ಸವದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೆಸ್ಟರ್ನ್ ಏರ್ ಕಮಾಂಡ್‌ನ ಏರ್ ಆಫಿರ್ಸ್‌ ಕಮಾಂಡಿಂಗ್ ಇನ್ ಚೀಫ್ (ಎಒಸಿ-ಇನ್-ಸಿ) ಏರ್ ಮಾರ್ಷಲ್ ಅಮಿತ್ ದೇವ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಿಒಕೆಯಲ್ಲಿರುವ ನೆಲೆಸಿರುವ ಜನರನ್ನು ಪಾಕಿಸ್ತಾನಿಗಳು ನ್ಯಾಯಯುತವಾಗಿಯೇನು ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

‘ಭಾರತೀಯ ವಾಯುಪಡೆ ಮತ್ತು ಸೇನೆಯು ನಡೆಸಿದ ಎಲ್ಲಾ ಚಟುವಟಿಕೆಗಳು (1947ರ ಅಕ್ಟೋಬರ್ 27ರಂದು) ಕಾಶ್ಮೀರದ ಈ ಭಾಗದ ಸ್ವಾತಂತ್ರ್ಯ ಖಾತ್ರಿಪಡಿಸುವಲ್ಲಿ ಕಾರಣವಾಯಿತು. ಮುಂದೊಂದು ದಿನ ಪಾಕ್ ಆಕ್ರಮಿತ ಕಾಶ್ಮೀರವೂ ಕಾಶ್ಮೀರದ ಈ ಭಾಗಕ್ಕೆ ಸೇರುತ್ತದೆ. ಮುಂಬರುವ ವರ್ಷಗಳಲ್ಲಿ ನಾವು ಇಡೀ ಕಾಶ್ಮೀರ ಹೊಂದುತ್ತೇವೆ ಎಂಬ ಖಾತ್ರಿ ನನಗಿದೆ’ ಎಂದು ಅವರು ಹೇಳಿದರು.

ಪಿಒಕೆ ವಶಪಡಿಸಿಕೊಳ್ಳುವ ಯೋಜನೆ ಇದೆಯೇ ಎಂದು ಸುದ್ದಿಗಾರರು ಕೇಳಿದಾಗ, ‘ಸದ್ಯಕ್ಕೆ ಯಾವುದೇ ಯೋಜನೆ ಇಲ್ಲ’ ಎಂದು ಏರ್ ಮಾರ್ಷಲ್ ದೇವ್ ಸ್ಪಷ್ಟಪಡಿಸಿದರು.

‘(ಇಡೀ) ಕಾಶ್ಮೀರ ಒಂದೇ, ರಾಷ್ಟ್ರವೂ ಒಂದೇ. ಎರಡೂ ಕಡೆಯ ಜನರು ಅದೇ ಭಾವನೆಯಲ್ಲಿದ್ದಾರೆ. ರಾಷ್ಟ್ರಗಳ ಒಂದುಗೂಡುವಿಕೆಗೆ ಇತಿಹಾಸವು ಸಾಕ್ಷಿಯಾಗಲಿದೆ. ರಾಷ್ಟ್ರ ಒಗ್ಗೂಡಿಸಲು ಸದ್ಯಕ್ಕೆ ನಮ್ಮ ಬಳಿ ಯಾವುದೇ ಯೋಜನೆ ಇಲ್ಲ. ಆದರೆ, ರಾಷ್ಟ್ರ ಬೆಸೆಯಲು ದೇವರ ಇಚ್ಛೆ ಯಾವಾಗಲೂ ಇದ್ದೇ ಇರುತ್ತದೆ. ಏಕೆಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನರನ್ನು ಪಾಕಿಸ್ತಾನಿಗಳು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ಅವರು ಹೇಳಿದರು.

ಪಾಕಿಸ್ತಾನಿ ಬುಡಕಟ್ಟು ಜನರ ದಾಳಿಯ ನಂತರ ಅಂದಿನ ಮಹಾರಾಜ ಹರಿ ಸಿಂಗ್ ಅವರು ಭಾರತದೊಂದಿಗೆ ಕಾಶ್ಮೀರ ಸೇರ್ಪಡೆಯ ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ನಂತರ, 1947ರ ಅಕ್ಟೋಬರ್ 27ರಂದು ಭಾರತೀಯ ಸೈನಿಕರು ಕಾಶ್ಮೀರಕ್ಕೆ ಬಂದಿಳಿದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು