ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವಾಯುಪಡೆಗೆ 405 ಪೈಲಟ್‌ಗಳ ಕೊರತೆ: ಕೇಂದ್ರ ಸರ್ಕಾರ

Last Updated 24 ಮಾರ್ಚ್ 2021, 13:04 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಗೆ (ಐಎಎಫ್‌) ಪ್ರಸ್ತುತ 405 ಪೈಲಟ್‌ಗಳ ಕೊರತೆ ಇದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.

ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್‌ ನಾಯಕ್‌ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ, 'ಮಾರ್ಚ್‌ 1ರವರೆಗೂ ಅನ್ವಯಿಸುವಂತೆ ಭಾರತೀಯ ವಾಯುಪಡೆಗೆ 405 ಪೈಲಟ್‌ಗಳ ಕೊರತೆ ಇದೆ' ಎಂದರು.

'ಪ್ರಸ್ತುತ ಐಎಎಫ್‌ನಲ್ಲಿ 3,834 ಪೈಲಟ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವಾಯು ಪಡೆಗೆ ಒಟ್ಟು 4,239 ಪೈಲಟ್‌ಗಳನ್ನು ನಿಯೋಜಿಸಿಕೊಳ್ಳಲು ಅನುಮೋದನೆ ಇದೆ. ಪೈಲಟ್‌ಗಳ ತರಬೇತಿಗಾಗಿ 260 ವಿಮಾನಗಳನ್ನು ಬಳಸಲಾಗುತ್ತಿದೆ' ಎಂದು ಹೇಳಿದರು.

ಭಾರತೀಯ ವಾಯುಪಡೆಯಲ್ಲಿ ಪಿಲಾಟಸ್‌ ಪಿಸಿ–7 ಎಂಕೆ–2, ಕಿರಣ್‌ ಎಂಕೆಐ/ಐಎ ಹಾಗೂ ಹಾಕ್‌ ಎಂಕೆ–132 ಸೇರಿದಂತೆ ಅತ್ಯಾಧುನಿಕ ಜೆಟ್‌ಗಳನ್ನು ತರಬೇತಿಗಾಗಿ ಬಳಸಲಾಗುತ್ತಿದೆ.

ಹೈಪರ್‌ಸಾನಿಕ್‌ ವಾಹನಗಳ ಮೂಲಕ ಭಾರತವು ಚೀನಾವನ್ನು ಸಮರ್ಥವಾಗಿ ಎದುರಿಸಬಲ್ಲದೇ ಎಂದು ಕೇಳಲಾದ ಪ್ರಶ್ನೆಗೆ ಸಚಿವ ಶ್ರೀಪಾದ್ ಉತ್ತರ ನೀಡಲು ನಿರಾಕರಿಸಿದರು. 'ಕೇಳಲಾಗಿರುವ ಮಾಹಿತಿಯು ಅತ್ಯಂತ ಸೂಕ್ಷ್ಮ ಹಾಗೂ ರಹಸ್ಯವಾದುದು, ಸದನದಲ್ಲಿ ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ' ಎಂದು ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.

ದೇಶದ ರಕ್ಷಣಾ ಪಡೆಗಳ ಸಿಬ್ಬಂದಿಗಾಗಿ 1,98,881 ವಾಸ ಸ್ಥಳಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ 57,875 ಮನೆಗಳನ್ನು ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ 69,904 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 58,062 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT