ಬುಧವಾರ, ಮೇ 25, 2022
29 °C
ಪಾಕ್‌ ಕಡೆಯ ಶೆಲ್‌, ಗುಂಡಿನ ದಾಳಿಯಿಂದ ಗಡಿ ಜನರ ರಕ್ಷಣೆಗೆ ಕ್ರಮ

ಜಮ್ಮು–ಕಾಶ್ಮೀರ ಗಡಿಯಲ್ಲಿ 8,500 ಬಂಕರ್‌ಗಳ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದ ನಿವಾಸಿಗಳಿಗೆ ಪಾಕಿಸ್ತಾನದ ಶೆಲ್‌ ಹಾಗೂ ಗುಂಡಿನ ದಾಳಿಯಿಂದ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಜಮ್ಮು ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರವು 8,500 ಬಂಕರ್‌ಗಳನ್ನು ನಿರ್ಮಿಸಿದೆ.

ಜಮ್ಮು, ಕತುವಾ, ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ (ಐಬಿ) ವ್ಯಾಪ್ತಿಯ ಗ್ರಾಮಗಳು ಹಾಗೂ ಪೂಂಚ್‌ ಹಾಗೂ ರಾಜೋರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ವ್ಯಾಪ್ತಿಯ ಗ್ರಾಮಗಳಲ್ಲಿ ಕೇಂದ್ರ ಗೃಹ ಸಚಿವಾಲಯದ ಅನುದಾನದಲ್ಲಿ ಬಂಕರ್‌ಗಳನ್ನು ನಿರ್ಮಾಣ ಮಾಡಲಾಗಿದೆ.

ಮೊದಲ ಹಂತದಲ್ಲಿ 8,444 ವೈಯಕ್ತಿಕ ಹಾಗೂ 1,461 ಸಮುದಾಯ ಬಂಕರ್‌ ಸೇರಿ ಒಟ್ಟು 9,905 ಬಂಕರ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಈ ಪೈಕಿ ಸುಮಾರು 8,500 ಬಂಕರ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಪೂರ್ಣಗೊಂಡ ಬಂಕರ್‌ಗಳ ಕೀಗಳನ್ನು ಅಲ್ಲಿನ ಜನರಿಗೆ ಹಸ್ತಾಂತರಿಸಲಾಗಿದೆ.

ವೈಯಕ್ತಿಕ ಬಂಕರ್‌ಗಳಲ್ಲಿ 8ರಿಂದ 10 ಮಂದಿ, ಸಮುದಾಯ ಬಂಕರ್‌ಗಳಲ್ಲಿ 20ರಿಂದ 30 ಮಂದಿ ವಾಸ್ತವ್ಯ ಹೂಡಬಹುದಾಗಿದ್ದು, ಕದನ ವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ ಗಡಿ ಪ್ರದೇಶದತ್ತ ತೂರಿಬರುವ ಗುಂಡುಗಳಿಂದ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಬಂಕರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

‘ಈ ಎಲ್ಲಾ ಬಂಕರ್‌ಗಳನ್ನು ಅಂತರರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿ ನಿಯಂತ್ರಣ ರೇಖೆಯಿಂದ ಮೂರು ಕಿ.ಮೀ ವ್ಯಾಪ್ತಿಯ ಒಳಗೆ ನಿರ್ಮಾಣ ಮಾಡಲಾಗಿದೆ. ಪಾಕ್‌ನ ಶೆಲ್‌ ಹಾಗೂ ಗುಂಡಿನ ದಾಳಿಯಂತಹ ಸಂದರ್ಭಗಳಲ್ಲಿ ಗಡಿ ಭಾಗದ ಜನರು ಈ ಬಂಕರ್‌ಗಳನ್ನು ಉಪಯೋಗಿಸಿಕೊಳ್ಳಬಹುದು. ಸ್ಥಳೀಯ ಆಡಳಿತವು ಈ ಬಂಕರ್‌ಗಳ ಕೀ ಅನ್ನು ಆಯಾ ಗ್ರಾಮಗಳ ಮುಖ್ಯಸ್ಥರಿಗೆ ಹಸ್ತಾಂತರಿಸಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಾರು 8,500 ಬಂಕರ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಬಂಕರ್‌ಗಳ ಕಾಮಗಾರಿಗಳ ಪ್ರಗತಿಯಲ್ಲಿವೆ. ಅಲ್ಲದೇ 15 ಸಾವಿರ ವೈಯಕ್ತಿಕ ಹಾಗೂ ಸಮುದಾಯ ಬಂಕರ್‌ಗಳನ್ನು ಮಂಜೂರು ಮಾಡುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಮನವಿ ಸಲ್ಲಿಸಲಿದೆ’ ಎಂದು ಅವರು ಹೇಳಿದರು.

ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದು, ಇದರಲ್ಲಿ 221 ಕಿ.ಮೀ ಅಂತರರಾಷ್ಟ್ರೀಯ ಗಡಿ ಹಾಗೂ 740 ಕಿ.ಮೀ ಗಡಿ ನಿಯಂತ್ರಣ ರೇಖೆಯು ಜಮ್ಮು ಮತ್ತು ಕಾಶ್ಮೀರದ ಭಾಗದಲ್ಲಿದೆ.

ಪಾಕ್‌ ಜತೆ ಗಡಿ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ (ಎಲ್‌ಒಸಿ) ಹಾಗೂ ಅಂತರರಾಷ್ಟ್ರೀಯ ಗಡಿ (ಐಬಿ) ಪ್ರದೇಶಗಳಲ್ಲಿ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕದನವಿರಾಮ ಉಲ್ಲಂಘನೆ ಪ್ರಕರಣ ಇಳಿಮುಖ ಕಂಡಿದ್ದು, ಕಳೆದ ವರ್ಷ 36 ಜನರು ಸಾವನ್ನಪ್ಪಿದ್ದು, 130 ಮಂದಿ ಗಾಯಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು