ಸೋಮವಾರ, ಅಕ್ಟೋಬರ್ 26, 2020
26 °C
ಚೀನಾ ಉಪಟಳ | ಗಡಿಗೆ ಹೆಚ್ಚುವರಿಯಾಗಿ 12 ಸಾವಿರ ಯೋಧರ ನಿಯೋಜನೆ ಸಾಧ್ಯತೆ

ನಡೆ-ಪ್ರತಿನಡೆ: ಹಿಮಾಲಯದ ಗಿರಿಶಿಖರಗಳಲ್ಲಿ ಚೀನಾ-ಭಾರತ ಸೇನೆಗಳ ಚದುರಂಗ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೂರ್ವ ಲಡಾಖ್ ವಲಯದಲ್ಲಿ ಚೀನಾ ಸೇನೆಯು ಸೈನಿಕರು ಮತ್ತು ಯುದ್ಧೋಪಕರಣಗಳ ನಿಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಹೆಚ್ಚಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಹೆಚ್ಚುವರಿಯಾಗಿ ಒಂದು ಡಿವಿಷನ್‌ನಷ್ಟು ಸೇನಾ ಸಿಬ್ಬಂದಿಯನ್ನು ಚೀನಾ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ಬಗ್ಗೆ ಆಲೋಚಿಸುತ್ತಿದ್ದಾರೆ ಎಂದು ರಕ್ಷಣಾ ವಿದ್ಯಮಾನವನ್ನು ವರದಿ ಮಾಡುವ ಜಾಲತಾಣಗಳು ವಿಶ್ವಸನೀಯ ಮೂಲಗಳನ್ನು ಉಲ್ಲೇಖಿಸಿ ಸೋಮವಾರ ಸಂಜೆ ವರದಿ ಮಾಡಿವೆ.

ಎತ್ತರದ ಪ್ರದೇಶ ಮತ್ತು ಮೈಕೊರೆಯುವ ಚಳಿಯ ವಾತಾವರಣವಿರುವ ಲಡಾಖ್‌ಗೆ ಯೋಧರನ್ನು ಏಕಾಏಕಿ ನಿಯೋಜಿಸಲು ಸಾಧ್ಯವಿಲ್ಲ. ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲು ಗುರುತಿಸಿದ ಯೋಧರನ್ನು ವಿವಿಧ ಹಂತದ ಎತ್ತರಗಳಲ್ಲಿ ಕೆಲಸಮಯ ನೆಲೆಗೊಳಿಸಿ, ಸೂಕ್ತ ರೀತಿಯಲ್ಲಿ ಅವರ ದೇಹಸ್ಥಿತಿಯನ್ನು ಅಲ್ಲಿನ ವಾತಾವರಣಕ್ಕೆ ಒಗ್ಗಿಸಬೇಕಾಗುತ್ತದೆ. ಅಕ್ಲಮಟೈಸೇಶನ್ ಎಂದು ಕರೆಯುವ ಈ ಪ್ರಕ್ರಿಯೆಗೆ ಹೆಚ್ಚುವರಿಯಾಗಿ 12 ಸಾವಿರ ಯೋಧರನ್ನು ಒಳಪಡಿಸಲು ಸೇನೆ ನಿರ್ಧರಿಸಿದೆ ಎನ್ನಲಾಗಿದೆ.

'ಭಾರತದ ಗಡಿಯಲ್ಲಿ ಸೇನಾ ನಿಯೋಜನೆಯನ್ನು ಚೀನಾ ಒಂದೇ ಸಮನೆ ಹೆಚ್ಚಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಸೇನಾ ನಿಯೋಜನೆ ಹೆಚ್ಚಿಸಬೇಕಾದ್ದು ಅನಿವಾರ್ಯವಾಗಿದೆ. ಕನಿಷ್ಠ ಒಂದು ಡಿವಿಷನ್‌ನಷ್ಟು ಸಂಖ್ಯೆಯ ಯೋಧರ ನಿಯೋಜನೆ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ' ಎಂದು ಬೆಳವಣಿಗೆಯ ಬಗ್ಗೆ ಅರಿವಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ಗಡಿ ಸಂಘರ್ಷ, ಹುತಾತ್ಮರಾದರು ಕರ್ನಲ್ ಸಂತೋಷ್ ಬಾಬು


ಹುತಾತ್ಮ ಕರ್ನಲ್ ಸಂತೋಷ್ ಬಾಬು

ತಿಳಿಯಾಗಲಿಲ್ಲ ಪರಿಸ್ಥಿತಿ

ಭಾರತೀಯ ಸೇನೆಯ ಕಮಾಂಡಿಂಗ್ ಆಫೀಸರ್ ಒಬ್ಬರನ್ನು ಚೀನಾ ಯೋಧರು ಕೊಂದ ನಂತರ ಬಿಸಿಯೇರಿದ ಗಡಿ ಪರಿಸ್ಥಿತಿ ತಿಳಿಯಾಗಲೇ ಇಲ್ಲ. ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಬಿಹಾರ್ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್‌ ಕುಮಾರ್ ಸೇರಿ 20 ಯೋಧರು ಹುತಾತ್ಮರಾಗಿದ್ದರು. ಈ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರ ಸಂಖ್ಯೆಯನ್ನು ಚೀನಾ ಸೇನೆ ಬಹಿರಂಗಪಡಿಸಲಿಲ್ಲ.

ನಂತರದ ದಿನಗಳಲ್ಲಿ ಗಡಿಯಲ್ಲಿ ಸೇನಾ ನಿಯೋಜನೆಯನ್ನು ಭಾರತ ಹೆಚ್ಚಿಸಿತು. ಈಗಾಗಲೇ ಪೂರ್ವ ಲಡಾಖ್‌ನಲ್ಲಿ ಮೂರು ಡಿವಿಷನ್‌ಗೂ ಹೆಚ್ಚಿನ ಯೋಧರನ್ನು ನೆಲೆಗೊಳಿಸಲಾಗಿದೆ. ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯ ಗಿರಿಶಿಖರಗಳನ್ನು ಭಾರತೀಯ ಯೋಧರು ಕಳೆದ ತಿಂಗಳ ಕೊನೆಯಲ್ಲಿ ತಮ್ಮ ಸುಪರ್ದಿಗೆ ತೆಗೆದುಕೊಂಡರು. ಇದನ್ನು ಹಿಂಸಾತ್ಮಕವಾಗಿ ತೆರವುಗೊಳಿಸಲು ಸನ್ನದ್ಧರಾಗಿ ಬಂದ ಚೀನಾ ಸೈನಿಕರ ಯತ್ನವನ್ನೂ ಭಾರತೀಯ ಸೇನೆಯ ಚಾಕಚಕ್ಯತೆ ಹಿಮ್ಮೆಟ್ಟಿಸಿತು.

ಈ ಬೆಳವಣಿಗೆಯ ನಂತರ ಚೀನಾ ಪಾಳಯದಲ್ಲಿ ಸೇನಾ ನಿಯೋಜನೆ ಒಂದೇ ಸಮನೆ ಹೆಚ್ಚಾಗುತ್ತಿದೆ. ಟಿಬೆಟ್ ಪ್ರಸ್ಥಭೂಮಿಯ ಯುದ್ಧಾಭ್ಯಾಸದ ವಿಡಿಯೊ ಮತ್ತು ಇತರ ಮಾಹಿತಿಯನ್ನೂ ಚೀನಾ ಸೇನೆ ಮತ್ತು ಚೀನಾ ಸರ್ಕಾರದ ಸುಪರ್ದಿಯಲ್ಲಿರುವ ಮಾಧ್ಯಮಗಳು ನಿಯಮಿತವಾಗಿ ಬಿಡುಗಡೆ ಮಾಡುತ್ತಿವೆ. ಈಶಾನ್ಯ ಭಾರತ ಸೇರಿದಂತೆ ವಾಸ್ತವ ನಿಯಂತ್ರಣ ರೇಖೆಯ ಹಲವೆಡೆ ಚೀನಾ ಸೇನೆಯು ಟ್ಯಾಂಕ್‌ ಪಡೆಗಳನ್ನು ನಿಯೋಜಿಸಿದೆ. ಮಾತ್ರವಲ್ಲದೆ ದೂರಗಾಮಿ ಬೃಹತ್ ಯುದ್ಧೋಪಕರಣಗಳನ್ನು ಅಳವಡಿಸಿದೆ. ತನ್ನ ದೇಶದ ಗಡಿಯೊಳಗಿನಿಂದಲೇ ಭಾರತೀಯ ಸೇನೆಯ ನೆಲೆಗಳು ಮತ್ತು ಭಾರತದ ಗಡಿಯೊಳಗಿರುವ ಪ್ರಮುಖ ರಸ್ತೆ, ಸೇತುವೆಗಳನ್ನು ಗುರಿಯಾಗಿಸಿ ಚೀನಾ ದಾಳಿ ನಡೆಸಬಹುದು ಎಂಬ ಆತಂಕಕ್ಕೆ ಇದು ಕಾರಣವಾಗಿದೆ.

ಚೀನಾ ಪಾಳಯದಲ್ಲಿರುವ ನಡೆಯುತ್ತಿವ ಎಲ್ಲ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತೀಯ ಸೇನೆಯ ಫೀಲ್ಡ್‌ ಕಮಾಂಡರ್‌ಗಳು ತಮ್ಮ ನೆಲೆಗಳನ್ನೂ ಸುಭದ್ರಗೊಳಿಸಲು ಮತ್ತು ಅನಿವಾರ್ಯ ಸಂದರ್ಭದಲ್ಲಿ ಚೀನಾ ಸೇನೆಯ ಉಪಟಳ ನಿಯಂತ್ರಿಸಲು ತಕ್ಕ ಪ್ರತಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತ–ಚೀನಾ ಸೇನಾ ಪಡೆಗಳಿಂದ ಗುಂಡಿನ ಚಕಮಕಿ

ಚೀನಾ ನಡೆಗೆ ಭಾರತದ ಪ್ರತಿನಡೆ

ಕಳೆದ ತಿಂಗಳು ಸ್ಪಂಗ್ಗೂರ್ ಗ್ಯಾಪ್‌ಗೆ ಚೀನಾ ಸೇನೆಯು ಟ್ಯಾಂಕ್ ಮತ್ತು ಆರ್ಟಿಲರಿ ಗನ್‌ಗಳನ್ನು ತಂದಿತ್ತು. ನಂತರ ಭಾರತವೂ ಅದೇ ಮಟ್ಟದ ಉಪಕರಣಗಳನ್ನು ನಿಯೋಜಿಸಿತ್ತು.

ಭಾರತ-ಚೀನಾ-ನೇಪಾಳದ ಗಡಿಯಿರುವ ಲಿಪುಲೇಖ್ ಪಾಸ್‌ ಸಮೀಪದ ಮಾನಸಸರೋವರದ ದಂಡೆಯಲ್ಲಿ ಚೀನಾ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ನೆಲೆ ಸ್ಥಾಪಿಸುತ್ತಿದೆ. ಭಾರತ ಗಡಿಯ ಇತರ ಆಯಕಟ್ಟಿನ ಗಿರಿಶಿಖರಗಳಲ್ಲಿ ಈಗಾಗಲೇ ಸೂಕ್ತ ಪೂರಕ ಸೌಕರ್ಯ ಸ್ಥಾಪಿಸಿಕೊಂಡು, ಕ್ಷಿಪಣಿಗಳನ್ನು ನಿಯೋಜಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ 'ದಿ ಪ್ರಿಂಟ್' ಜಾಲತಾಣ ವರದಿ ಮಾಡಿದೆ.

ಚೀನಾದ ಈ ನಡೆಗಳಿಗೆ ಪ್ರತಿಯಾಗಿ ಭಾರತೀಯ ಸೇನೆಯೂ ಇಂಥದ್ದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಚೀನಾದಂತೆ ಭಾರತೀಯ ಸೇನೆಯು ತನ್ನ ನಿರ್ಧಾರಗಳನ್ನು ಪ್ರಚಾರ ಮಾಡುತ್ತಿಲ್ಲ.

ಇದನ್ನೂ ಓದಿ: ಚೀನಾ ಗಡಿಯಲ್ಲಿ ಚಳಿ ಎದುರಿಸಲು ಸಿದ್ಧವಾಗ್ತಿದೆ ಭಾರತೀಯ ಸೇನೆ

ಯೋಧರನ್ನು ಕಾಪಾಡಿಕೊಳ್ಳುವುದೇ ಸವಾಲು

ಲಡಾಖ್‌ನಲ್ಲಿ ಈಗಾಗಲೇ ತಾಪಮಾನ ಕುಸಿಯುತ್ತದೆ. ಯೋಧರ ನಿಯೋಜನೆ ಹೆಚ್ಚಾದರೆ ಅದಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಬಟ್ಟೆ, ಆಹಾರ ಮತ್ತು ವಸತಿ ಸೌಲಭ್ಯ ಒದಗಿಸುವ ಸವಾಲನ್ನು ಸರ್ಕಾರ ಎದುರಿಸಬೇಕಾಗುತ್ತದೆ. ಚಳಿಗಾಳಿ ಹೆಚ್ಚಾಗುವ ದಿನಗಳಲ್ಲಿ ಲಡಾಖ್‌ನಲ್ಲಿ ತಾಪಮಾನ ಮೈನಸ್ 30 ಡಿಗ್ರಿಗಳಷ್ಟು ಕುಸಿಯುತ್ತದೆ.

ಕಳೆದ ಜುಲೈನಿಂದಲೇ ಸೇನೆಯು ತನ್ನ ಸಿಬ್ಬಂದಿಗೆ ಚಳಿಗಾಲ ಎದುರಿಸಲು ಅತ್ಯಗತ್ಯವಾಗಿ ಬೇಕಿರುವ ವಸ್ತುಗಳ ದಾಸ್ತಾನು ಪ್ರಕ್ರಿಯೆ ಆರಂಭಿಸಿತ್ತು. ಸಾವಿರಾರು ಟನ್‌ಗಳಷ್ಟು ಪಡಿತರ ಮತ್ತು ಇಂಧನವನ್ನು ಸೇನೆ ಈಗಾಗಲೇ ರವಾನಿಸಿದೆ. ಆದರೆ ಸಿಬ್ಬಂದಿ ನಿಯೋಜನೆ ಹೆಚ್ಚಾದರೆ ಅದರ ಅನುಪಾತದಲ್ಲಿಯೇ ಅಗತ್ಯ ವಸ್ತುಗಳ ದಾಸ್ತಾನನ್ನೂ ಹೆಚ್ಚಿಸಬೇಕಾಗುತ್ತದೆ.

ಇದನ್ನೂ ಓದಿ: Explainer | ಭಾರತ–ಚೀನಾ ಗಡಿ ಸಮಸ್ಯೆಯತ್ತ ಒಂದು ನೋಟ 

ಸೇನೆಯ ಲೆಕ್ಕಾಚಾರ: ಒಬ್ಬರಿಗೆ 2.5 ಕೆಜಿ ಆಹಾರ

ಪ್ರತಿ ಯೋಧನಿಗೂ ಪ್ರತಿದಿನ 2.5 ಕೆ.ಜಿ. ಆಹಾರ ಧಾನ್ಯ ಬೇಕಾಗುತ್ತದೆ ಎಂಬುದು ಸೇನೆಯ ಲೆಕ್ಕಾಚಾರ. ಇದೇ ಅನುಪಾತದಲ್ಲಿ ಹೆಚ್ಚುವರಿಯಾಗಿ ನಿಯೋಜಿಸಿರುವ ಸಿಬ್ಬಂದಿಗೂ ಆಹಾರ ದಾಸ್ತಾನು ಮಾಡಬೇಕಾಗುತ್ತದೆ. ಹೆಚ್ಚಿನ ಎತ್ತರ ಪ್ರದೇಶದಲ್ಲಿ ಕೆಲಸ ಮಾಡುವ ಯೋಧರಿಗಾಗಿ ಹೆಚ್ಚುವರಿಯಾಗಿ 6,500 ಟನ್ ಆಹಾರ ಬೇಕಿದೆ. ಅಡುಗೆ ಇಂಧನದ ಅಗತ್ಯ ಪೂರೈಸಲು 1.50 ಕೋಟಿ ಲೀಟರ್‌ಗಳಷ್ಟು ಸೀಮೆಎಣ್ಣೆಯನ್ನೂ ದಾಸ್ತಾನು ಮಾಡಲಾಗುವುದು ಎಂದು ಸೇನೆಯ ಉನ್ನತ ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

ಲಂಡಾಖ್ ಸಂಪರ್ಕಿಸುವ ಝೊಜಿಲಾ ಮತ್ತು ರೊಹ್‌ಟಂಗ್‌ ಮಾರ್ಗಗಳಲ್ಲಿ ಸೇನಾ ಟ್ರಕ್‌ಗಳ ಓಡಾಟ ಭರದಿಂದ ಸಾಗಿದೆ. ತಾವು ಪ್ರಸ್ತುತ ಇರುವ ನೆಲೆಗಳಿಂದ ಲಡಾಖ್‌ಗೆ ಹೊಸದಾಗಿ ನಿಯೋಜಿತರಾಗಿರುವ ತುಕಡಿಗಳಿಗೆ, ಅವರೊಂದಿಗೆ ಮೀಸಲು ಆಹಾರ ಧಾನ್ಯಗಳನ್ನೂ ತರುವಂತೆ ಸೂಚಿಸಲಾಗಿದೆ.

ಇನ್ನಷ್ಟು... 

ಚೀನಿ ಸೈನಿಕ ನೆಲೆಗಳಿಂದ ಪಂಜಾಬಿ ಹಾಡು: ಇದೆಂಥಾ ಯುದ್ಧತಂತ್ರ

ಚೀನಾ ಹೆಣೆದ 'ಮುತ್ತಿನಮಾಲೆ': ಭಾರತದ ಪಾಲಿಗೆ ಮಗ್ಗುಲಿನ ಕೆಂಡ

ಲಡಾಖ್‌‌ನಲ್ಲಿ ಕ್ಷಿಪಣಿ ವ್ಯವಸ್ಥೆ ನಿಯೋಜಿಸಿದ ಭಾರತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು