ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ದೇಶಕ್ಕೆ ಬಂದಿಳಿದ ನೆರೆರಾಷ್ಟ್ರಗಳ ನೆರವು

ನೌಕಾಪಡೆ ಹಡಗುಗಳಲ್ಲಿ ರವಾನೆ: ಆಮ್ಲಜನಕ ಸಿಲಿಂಡರ್, ಟ್ಯಾಂಕ್‌ಗಳು, ಬೃಹತ್‌ ಪ್ರಮಾಣದ ಔಷಧಗಳು
Last Updated 10 ಮೇ 2021, 10:58 IST
ಅಕ್ಷರ ಗಾತ್ರ

ನವದೆಹಲಿ: ಬೇರೆ ಬೇರೆ ರಾಷ್ಟ್ರಗಳು ನೆರವು ನೀಡಿದ 80 ಟನ್‌ ದ್ರವೀಕೃತ ಆಮ್ಲಜನಕ ಸೇರಿ ವಿವಿಧ ಔಷಧಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಹಡಗುಗಳು ಸೋಮವಾರ ದೇಶದ ಬಂದರು ತಲುಪಿದವು. 20 ಕ್ರಯೊಜೆನಿಕ್ ಆಮ್ಲಜನಕ ಟ್ಯಾಂಕ್‌ಗಳು, 3,150 ಸಿಲಿಂಡರ್‌ಗಳು ಹಾಗೂ ದೊಡ್ಡ ಪ್ರಮಾಣದ ಔಷಧಗಳು ಇದರಲ್ಲಿ ಸೇರಿದೆ.

ಹಡಗುಗಳ ಮೂಲಕ ತರಲಾದ ಔಷಧಗಳಲ್ಲಿ ಆಮ್ಲಜನಕ ಭರ್ತಿಯಾಗಿದ್ದ900 ಸಿಲಿಂಡರ್‌ಗಳು, 10 ಸಾವಿರ ರ‍್ಯಾಪಿಡ್‌ ಆ್ಯಂಟಿಜೆನ್‌ ಕೋವಿಡ್‌ ಪರೀಕ್ಷೆ ಕಿಟ್‌ಗಳು, 54 ಆಮ್ಲಜನಕ ಕಾನ್ಸಂಟ್ರೇಟರ್‌ಗಳು, 450 ಪಿಪಿಇ ಕಿಟ್‌ಗಳು ಒಳಗೊಂಡಿವೆ ಎಂದು ನೌಕಾಪಡೆಯ ವಕ್ತಾರ ಕಮಾಂಡೆರ್‌ ವಿವೇಕ್‌ ಮಾಧ್ವಾಳ್‌ ತಿಳಿಸಿದರು.

ಭಾರತ ನೌಕಾಪಡೆಯ ‘ಐರಾವತ’ ಸಿಂಗಪುರದಿಂದ ವಿಶಾಖಪಟ್ಟಣ ಬಂದರನ್ನು ತಲುಪಿದೆ. ತಲಾ 20 ಮೆಟ್ರಿಕ್ ಟ್ರನ್‌ ಸಾಮರ್ಥ್ಯದ ಎಂಟು ಕ್ರಯೊಜೆನಿಕ್‌ ಆಮ್ಲಜನಕ ಟ್ಯಾಂಕ್‌ಗಳು, ಇತರೆ ಔಷಧಗಳನ್ನು ತರಲಾಗಿವೆ.

ಅಲ್ಲದೆ, ಕತಾರ್ ಮತ್ತು ಕುವೈತ್‌ನಿಂದ ಔಷಧಗಳನ್ನು ಹೊತ್ತ ಮತ್ತೊಂದು ಯುದ್ಧಹಡಗು ‘ಐಎನ್‌ಎಸ್‌ ಕೋಲ್ಕತ್ತ’ ನವ ಮಂಗಳೂರು ಬಂದರನ್ನು ತಲುಪಿದೆ. ಇದರಲ್ಲಿ 40 ಮೆಟ್ರಿಕ್‌ ಟನ್‌ ದ್ರವೀಕೃತ ಆಮ್ಲಜನಕ, 400 ಆಮ್ಲಜನಕ ಸಿಲಿಂಡರ್‌ಗಳು, 47 ಆಮ್ಲಜನಕ ಕಾನ್ಸಂಟ್ರೇಟರ್‌ಗಳು ಸೇರಿವೆ.

ಇನ್ನೊಂದೆಡೆ ‘ಐಎನ್‌ಎಸ್ ತ್ರಿಕಂಡ್‌‘ ಹಡಗು ಮುಂಬೈ ಬಂದರನ್ನು ತಲುಪಿದ್ದು, ಕತಾರ್‌ನಿಂದ 40 ಟನ್‌ನಷ್ಟು ಆಮ್ಲಜನಕವನ್ನು ತರಲಾಗಿದೆ ಎಂದು ವಕ್ತಾರರು ವಿವರಿಸಿದರು.

ಗಲ್ಫ್‌ ರಾಷ್ಟ್ರಗಳು ಸೇರಿದಂತೆ ವಿದೇಶಗಳಿಂದ ಔಷಧಗಳನ್ನು ತರಲು 9 ಯುದ್ಧ ಹಡಗುಗಳನ್ನು ಭಾರತೀಯ ನೌಕಾಪಡೆ ಕಳೆದವಾರ ನಿಯೋಜಿಸಿತ್ತು. ‘ಆಪರೇಷನ್ ಸಮುದ್ರಸೇತು–2’ ಭಾಗವಾಗಿ ಔಷಧಗಳ ಸಾಗಣೆಗೆ ಮುಂಬೈ, ವಿಶಾಖಪಟ್ಟಣಂ ಮತ್ತು ಕೊಚ್ಚಿಯಲ್ಲಿ ಲಭ್ಯವಿದ್ದ ಎಲ್ಲ ಹಡಗುಗಳನ್ನು ನಿಯೋಜಿಸಲಾಗಿತ್ತು.

ಕಳೆದ ವರ್ಷವೂ ನೌಕಾಪಡೆಯು ಆಪರೇಷನ್ ಸಮುದ್ರ ಸೇತು ಕಾರ್ಯಕ್ಕೆ ಚಾಲನೆ ನೀಡಿದ್ದು, ಮಾಲ್ಡೀವ್ಸ್‌, ಶ್ರೀಲಂಕಾ ಮತ್ತು ಇರಾನ್‌ನಲ್ಲಿ ಅತಂತ್ರರಾಗಿದ್ದ ಸುಮಾರು 4,000 ಭಾರತೀಯರನ್ನು ದೇಶಕ್ಕೆ ಕರೆತಂದಿತ್ತು.

ದೇಶದಲ್ಲಿ ಪ್ರಸ್ತುತ ಕಂಡುಬಂದಿರುವ ಕೋವಿಡ್‌ ಪರಿಸ್ಥಿತಿಯನ್ನು ಎದುರಿಸಲು ಅಮೆರಿಕ, ರಷ್ಯಾ, ಫ್ರಾನ್ಸ್‌, ಜರ್ಮನಿ, ಆಸ್ಟ್ರೇಲಿಯಾ, ಐರ್ಲೆಂಡ್‌, ಬೆಲ್ಜಿಯಂ, ರೊಮೇನಿಯಾ, ಸಿಂಗಪುರ, ಸ್ವೀಡನ್‌, ನ್ಯೂಜಿಲೆಂಡ್‌, ಕುವೈತ್‌ ಸೇರಿದಂತೆ ವಿವಿಧ ದೇಶಗಳು ಔಷಧಗಳು ಸೇರಿದಂತೆ ಅಗತ್ಯವಸ್ತುಗಳ ನೆರವು ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT