ಶುಕ್ರವಾರ, ಮೇ 20, 2022
23 °C

ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 112 ಕೋವಿಡ್‌ ಸಾವು: ದಕ್ಷಿಣ ಏಷ್ಯಾದಲ್ಲೇ ಅಧಿಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ ಪ್ರತಿಯಾಗಿ ಸಂಭವಿಸುವ ಕೋವಿಡ್‌ ಸಾವಿನ ಸಂಖ್ಯೆ ದಕ್ಷಿಣ ಏಷ್ಯಾ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗಿಂತಲೂ ಅಧಿಕವಿರುವುದಕ್ಕೆ ಅನೇಕ ಅಂಶಗಳು ಕಾರಣವಾಗಿರಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಭಾರತದಂಥ ದೇಶದಲ್ಲಿ ಸಾವಿನ ಸಂಖ್ಯೆಯನ್ನು ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕುವುದು ಸೂಕ್ತವಲ್ಲ. ಇಲ್ಲಿನ ಭೌಗೋಳಿಕ ಪರಿಸ್ಥಿತಿ, ಇಲ್ಲಿರುವ ಪ್ರಕರಣಗಳು, ಪರೀಕ್ಷೆ ಮತ್ತು ವರದಿಯ ಶಿಷ್ಟಾಚಾರಗಳು ಕೂಡ ಸಾವಿನ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವ ಅಶ್ವಿನ್‌ ಕುಮಾರ್‌ ಚೌಬೆ ಹೇಳಿದ್ದಾರೆ

ದಕ್ಷಿಣ ಏಷ್ಯಾದ ಇತರ ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಸಂಭವಿಸುವ ಕೋವಿಡ್‌ ಸಾವಿನ ಸಂಖ್ಯೆ ಅಧಿಕವಾಗಿರುವುದು ನಿಜವೇ ಎಂಬ ಪ್ರಶ್ನೆಗೆ ಸಚಿವ ಚೌಬೆ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ. ' ಹೌದು. ಆದರೆ, ಪ್ರತಿ ಹತ್ತುಲಕ್ಷ ಜನಸಂಖ್ಯೆಯೊಂದಿಗೆ ಕೋವಿಡ್‌ ಸಾವಿನ ಸಂಖ್ಯೆಗಳನ್ನು ತಾಳೆ ಮಾಡುವುದು ಸರಿಯಾದ ಕ್ರಮವಲ್ಲ. ಇಲ್ಲಿ ಬೇರೆಲ್ಲ ಅಂಶಗಳೂ ಪರಿಣಾಮ ಬೀರುತ್ತವೆ,' ಎಂದಿದ್ದಾರೆ.

ಆದರೆ, ಅಧಿಕ ಪ್ರಕರಣಗಳಿರುವ ದೇಶಗಳೊಂದಿಗೆ ಹೋಲಿಕೆ ಮಾಡಿದರೆ, ಪ್ರತಿ ಹತ್ತು ಲಕ್ಷಕ್ಕೆ ಕೋವಿಡ್‌ನಿಂದ ಸತ್ತವರ ಸಂಖ್ಯೆ ಕಡಿಮೆ ಇದೆ ಎಂದು ಚೌಬೆ ಇದೇ ವೇಳೆ ತಿಳಿಸಿದರು.

ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಪ್ರತಿಯಾಗಿ 112 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 1347, ಬ್ರಿಟನ್‌ನಲ್ಲಿ 1533, ಸ್ಪೇನ್‌ನಲ್ಲಿ 1247, ಬ್ರೆಜಿಲ್‌ನಲ್ಲಿ 1044 ಮತ್ತು ರಷ್ಯಾದಲ್ಲಿ 495 ಪ್ರಕರಣಗಳು ಪ್ರತಿಹತ್ತು ಲಕ್ಷ ಜನಸಂಖ್ಯೆಗೆ ಪ್ರತಿಯಾಗಿ ಸಂಭವಿಸಿದ ಸಾವುಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು