ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆರ್ಥಿಕತೆ ಸುಧಾರಿಸುತ್ತದೆ, ನಮ್ಮ ಹೂಡಿಕೆ ಯೋಜನೆಗಳು ಪ್ರಗತಿಯಲ್ಲಿವೆ: ಸೌದಿ

Last Updated 21 ಡಿಸೆಂಬರ್ 2020, 5:29 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರ ಸೌದಿ ಅರೇಬಿಯಾ, ಭಾರತದಲ್ಲಿನ ತನ್ನ ಹೂಡಿಕೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದು, ಕೊರೊನಾ ವೈರಸ್ ಬಿಕ್ಕಟ್ಟಿನ ದುಷ್ಪರಿಣಾಮದಿಂದ ಚೇತರಿಸಿಕೊಳ್ಳಲು ಭಾರತೀಯ ಆರ್ಥಿಕತೆಗೆ ಶಕ್ತಿ ಇದೆ ಎಂದು ಹೇಳಿದೆ.

ಭಾರತದಲ್ಲಿ ಪೆಟ್ರೋಕೆಮಿಕಲ್ಸ್, ಸಂಸ್ಕರಣೆ, ಮೂಲಸೌಕರ್ಯ, ಗಣಿಗಾರಿಕೆ ಮತ್ತು ಉತ್ಪಾದನೆ, ಕೃಷಿ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಕಳೆದ ವರ್ಷ ಫೆಬ್ರುವರಿಯಲ್ಲಿ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ್ದರು.

ಭಾರತದಲ್ಲಿ ಹೂಡಿಕೆ ಮಾಡುವ ನಮ್ಮ ಯೋಜನೆಗಳು ಜಾರಿಯಲ್ಲಿವೆ ಮತ್ತು ಎರಡೂ ದೇಶಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳಿಗೆ ಆದ್ಯತೆ ನೀಡಲು ನಾವು ಚರ್ಚಿಸುತ್ತಿದ್ದೇವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಸೌದಿ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ತಿಳಿಸಿದ್ದಾರೆ.

ಸೌದಿ ಅರೇಬಿಯಾವು ಭಾರತವನ್ನು ತನ್ನ ಕಾರ್ಯತಂತ್ರದ ಪಾಲುದಾರ ಮತ್ತು ಆಪ್ತ ಸ್ನೇಹಿತ ಎಂದು ಗೌರವಿಸುತ್ತದೆ. ತರಬೇತಿ, ಜ್ಞಾನ ಹಂಚಿಕೆ ಮತ್ತು ಭಯೋತ್ಪಾದನೆ ಮಟ್ಟ ಹಾಕುವ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವು, ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿಯೂ ಸಹಭಾಗಿತ್ವದ ಪ್ರಮುಖ ಅಂಶಗಳಾಗಿವೆ ಎಂದು ಸತಿ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದಿಂದ ಉಂಟಾದ ದುಷ್ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಭಾರತ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿರುವ ಅಲ್ ಸತಿ, ಉಭಯ ದೇಶಗಳ ಆರ್ಥಿಕತೆಯ ಚೇತರಿಕೆಯು ಈ ಪ್ರದೇಶದ ಇತರ ಆರ್ಥಿಕತೆಗಳನ್ನು ಮೇಲೆತ್ತಲು ನೆರವಾಗುತ್ತದೆ ಎಂದು ಹೇಳಿದರು.

ಆರ್ಥಿಕತೆಯನ್ನು ಮೇಲೆತ್ತಲು ಭಾರತವು ತನ್ನ ಪ್ರಮುಖ ಕ್ಷೇತ್ರಗಳಿಗೆ ಒದಗಿಸಿರುವ ಆರ್ಥಿಕ ಪರಿಹಾರ ಪ್ಯಾಕೇಜ್ ಶ್ಲಾಘನೀಯ. ಜಾಗತಿಕವಾಗಿ ಐದನೇ ಅತಿದೊಡ್ಡ ಆರ್ಥಿಕತೆ ಮತ್ತು ದಕ್ಷಿಣ ಏಷ್ಯಾದ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದ ಆರ್ಥಿಕತೆಯು ಸದ್ಯದ ಸಾಂಕ್ರಾಮಿಕ ರೋಗದಿಂದ ಉಂಟಾದ ಪರಿಣಾಮದಿಂದ ಚೇತರಿಸಿಕೊಳ್ಳಲು ಉತ್ತೇಜನ ನೀಡುತ್ತಿದೆ ಎಂದು ಎಂದಿದ್ದಾರೆ.

ಕಳೆದ ವಾರ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಸೌದಿ ಅರೇಬಿಯಾ ಭೇಟಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಉಭಯ ದೇಶಗಳು ಕಾರ್ಯತಂತ್ರ ಪಾಲುದಾರಿಕೆ ಮಂಡಳಿ (Strategic Partnership Council) ಸ್ಥಾಪಿಸಿರುವುದರಿಂದ ರಕ್ಷಣೆ ಮತ್ತು ಭದ್ರತೆ ಹಾಗೂ ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರದ ಹೊಸ ಮಾರ್ಗಗಳಿಗೆ ದಾರಿಯಾಗಿದೆ ಎಂದು ಹೇಳಿದರು.

2019ರಲ್ಲಿ ಉಭಯ ದೇಶಗಳು ಸ್ಥಾಪಿಸಿದ ಕಾರ್ಯತಂತ್ರದ (ಪಾಲುದಾರಿಕೆ) ಮಂಡಳಿಯು ರಕ್ಷಣಾ, ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ ಭದ್ರತೆ ಮತ್ತು ನವೀಕರಿಸಬಹುದಾದ ಇಂಧನ ಮುಂತಾದ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಸಹಭಾಗಿತ್ವದ ಬಗ್ಗೆ ಹೊಸ ಮಾರ್ಗಗಳನ್ನು ತೆರೆದಿದೆ ಎಂದರು.

ಮಿಲಿಟರಿ ಸಂಬಂಧಗಳಿಗೆ ಭದ್ರ ಅಡಿಪಾಯ ಒದಗಿಸಲು ಯುಎಇ ಮತ್ತು ಸೌದಿ ಅರೇಬಿಯ ರಾಷ್ಟ್ರಗಳಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ನರವಣೆ ಅವರು, ರಾಯಲ್ ಸೌದಿ ಭೂ ಪಡೆಗಳ ಕಮಾಂಡರ್ ಜನರಲ್ ಫಹಾದ್ ಬಿನ್ ಅಬ್ದುಲ್ಲಾ ಮೊಹಮ್ಮದ್ ಅಲ್-ಮುತಿರ್ ಅವರೊಂದಿಗೆ ಭಾನುವಾರ ವ್ಯಾಪಕ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT