ಭಾರತ ಜಿ20 ಅಧ್ಯಕ್ಷತೆ ವಹಿಸಿರುವುದರಿಂದ ಜಾಗತಿಕ ಆರ್ಥಿಕತೆಗೆ ಬಲ: ಸುಂದರ್ ಪಿಚೈ

ನವದೆಹಲಿ: ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡಿರುವುದು ಮುಕ್ತ, ಸಂಪರ್ಕಿತ, ಸುರಕ್ಷಿತ ಮತ್ತು ಎಲ್ಲರಿಗೂ ಇಂಟರ್ನೆಟ್ ದೊರಕಿಸಿಕೊಡುವ ಮೂಲಕ ಜಾಗತಿಕ ಆರ್ಥಿಕತೆಯನ್ನು ಬಲ ಪಡಿಸಲು ಅದ್ಭುತವಾದ ಅವಕಾಶವಾಗಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ತರಂಜಿತ್ ಸಿಂಗ್ ಸಂಧು ಅವರು ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾಗಿರುವ 'ಪದ್ಮಭೂಷಣ' ಪ್ರಶಸ್ತಿಯನ್ನು ಪಿಚೈ ಅವರಿಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಶುಕ್ರವಾರ ನೀಡಿದರು. ಈ ವೇಳೆ ಮಾತನಾಡಿದ ಪಿಚೈ, 'ನನ್ನನ್ನು ರೂಪಿಸಿದ ದೇಶವು ಈ ರೀತಿಯಾಗಿ ಗೌರವಿಸುತ್ತಿರುವುದು ನಂಬಲಸಾಧ್ಯವಾದದ್ದು' ಎಂದು ಹೇಳಿದ್ದಾರೆ.
ಮುಂದುವರಿದು, 'ನನ್ನ ಬದುಕಿನ ಭಾಗವಾಗಿರುವ ಭಾರತವನ್ನು, ಎಲ್ಲಿಗೆ ಹೋದರೂ ಕೊಂಡೊಯುತ್ತೇನೆ. ನನ್ನ ಆಸಕ್ತಿಗಳನ್ನು ಅನ್ವೇಷಿಸಲು ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳಲು ಬಹಳಷ್ಟು ತ್ಯಾಗ ಮಾಡಿದ ಪೋಷಕರನ್ನು ಪಡೆಯಲು ಹಾಗೂ ಕಲಿಕೆಯನ್ನು ಪ್ರೋತ್ಸಾಹಿಸುವ ಕುಟುಂಬದಲ್ಲಿ ಬೆಳೆಯಲು ಅದೃಷ್ಟ ಮಾಡಿದ್ದೆ' ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಾನು ಎಲ್ಲಿಗೆ ಹೋದರೂ ಭಾರತವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ: ಸುಂದರ್ ಪಿಚೈ
ಪ್ರಧಾನಿ ನರೇಂದ್ರ ಮೋದಿಯವರ 'ಡಿಜಿಟಲ್ ಇಂಡಿಯಾ' ದೃಷ್ಟಿ ನಿಸ್ಸಂಶಯವಾಗಿ ವೇಗವರ್ಧಕವಾಗಿದೆ. ಪರಿವರ್ತನಾಶೀಲವಾದ ಎರಡು ದಶಕಗಳಿಂದ ಸರ್ಕಾರಗಳು, ಉದ್ಯಮಗಳು ಮತ್ತು ಸಮುದಾಯಗಳ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ಹೂಡಿಕೆ ಮಾಡುವುದನ್ನು ಗೂಗಲ್ ಮುಂದುವರಿಸಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.
'ಡಿಜಿಟಲ್ ಕೌಶಲ್ಯ ತರಬೇತಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದೇವೆ. ಮಹಿಳಾ ಉದ್ಯಮಶೀಲತೆ ಕಾರ್ಯಕ್ರಮದ ಮೂಲಕ 10 ಲಕ್ಷ ಮಹಿಳೆಯರಿಗೆ ತರಬೇತಿ ನೀಡಿದ್ದೇವೆ' ಎಂದು ಪಿಚೈ ವಿವರಿಸಿದ್ದಾರೆ.
ಭಾರತದ ಡಿಜಿಟಲೀಕರಣಕ್ಕೆ ₹ 814,21 ಕೋಟಿ (ಅಂದಾಜು 10 ಬಿಲಿಯನ್ ಡಾಲರ್) ಮೊತ್ತದ ಬಂಡವಾಳ ಹೂಡಿಕೆ ಮಾಡುವುದಾಗಿ ಗೂಗಲ್ ಇತ್ತೀಚೆಗೆ ಘೋಷಿಸಿತ್ತು.
ಭಾರತವು ಜಿ–20 ಗುಂಪಿನ ಅಧ್ಯಕ್ಷತೆಯನ್ನು ಗುರುವಾರ (ಡಿಸೆಂಬರ್ 1) ವಹಿಸಿಕೊಂಡಿದೆ. ಅಧ್ಯಕ್ಷತೆ ಅವಧಿಯಲ್ಲಿ ದೇಶದ 50ಕ್ಕೂ ಹೆಚ್ಚು ನಗರಗಳ 32 ವಿವಿಧ ವಲಯಗಳಲ್ಲಿ 200 ಸಭೆಗಳನ್ನು ಆಯೋಜಿಸಲಾಗುತ್ತದೆ.
ನವೆಂಬರ್ 16ರಂದು ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷತೆ ಹಸ್ತಾಂತರಿಸಿದ್ದರು.
ಇದನ್ನೂ ಓದಿ: ಚಿಕ್ಕವನಾಗಿದ್ದಾಗ ಜನಾಂಗೀಯ ತಾರತಮ್ಯ ಅನುಭವಿಸಿದ್ದೆ: ರಿಷಿ ಸುನಕ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.