ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಬಿಕ್ಕಟ್ಟು | ಭಾರತದ ನಿಲುವು ಅಚಲ: ವಿದೇಶಾಂಗ ಸಚಿವ ಜೈಶಂಕರ್‌

ರಷ್ಯಾ ಜತೆಗಿನ ವ್ಯಾಪಾರ, ಹಣ ಪಾವತಿ ಸಮಸ್ಯೆ ಪರಿಹರಿಸಲು ಪರಿಶೀಲನೆ
Last Updated 24 ಮಾರ್ಚ್ 2022, 19:32 IST
ಅಕ್ಷರ ಗಾತ್ರ

ನವದೆಹಲಿ:‘ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತ‌ ಅನುಸರಿಸಿರುವ ತಟಸ್ಥ ನಿಲುವು ‘ಸ್ಥಿರ ಮತ್ತು ದೃಢ’ವಾಗಿದೆ. ತಕ್ಷಣವೇ ಹಿಂಸಾಚಾರ ನಿಲ್ಲಿಸಿ, ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳುವಂತೆ ಎರಡೂ ರಾಷ್ಟ್ರಗಳನ್ನು ಒತ್ತಾಯಿಸುತ್ತಲೇ ಇದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ಹೇಳಿದರು.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರ ನೀಡಿದ ಅವರು, ‘ಜಾಗತಿಕ ವ್ಯವಸ್ಥೆಯು, ಅಂತರರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಸನ್ನದು ಹಾಗೂ ರಾಷ್ಟ್ರಗಳ ಗಡಿ ಏಕತೆ ಮತ್ತು ಸಾರ್ವಭೌಮತೆಯನ್ನು ಗೌರವಿಸುವ ತಳಹದಿಯ ಮೇಲೆ ನಿಂತಿದೆ. ಇದನ್ನು ಭಾರತ ಸ್ಪಷ್ಟವಾಗಿ ಪ್ರತಿಪಾದಿಸುತ್ತಲೇ ಬಂದಿದೆ. ಜಾಗತಿಕ ನಾಯಕರೊಂದಿಗಿನ ಉನ್ನತಮಟ್ಟದ ಮಾತುಕತೆಯಲ್ಲೂ ಮತ್ತು ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳಿಗೂ ಇದೇ ಅಂಶಗಳನ್ನುಒತ್ತಿಹೇಳಿದ್ದೇವೆ’ ಎಂದರು.

ಉಕ್ರೇನ್‌ ಮೇಲಿನ ಆಕ್ರಮಣಕ್ಕಾಗಿ ರಷ್ಯಾವನ್ನು ಟೀಕಿಸದ ಮತ್ತು ರಷ್ಯಾದ ಆಕ್ರಮಣ ಖಂಡಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಮತದಾನದಿಂದ ದೂರ ಉಳಿದಿರುವ ಭಾರತದ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಕಳವಳದ ಹಿನ್ನೆಲೆಯಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದರು. ಭಾರತ ತಳೆದಿರುವ ನಿಲುವು ಅಸ್ಥಿರತೆಯಿಂದ ಕೂಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕೂಡ ಇತ್ತೀಚೆಗೆ ಟೀಕಿಸಿದ್ದರು.

‘ಉಕ್ರೇನ್‌ನ ಪರಿಸ್ಥಿತಿಯ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಹಿಂಸಾಚಾರ ತಕ್ಷಣವೇ ನಿಲ್ಲಿಸಲು ಮತ್ತು ಶತ್ರುತ್ವ ಕೊನೆಗೊಳಿಸಲು ಕರೆ ನೀಡಿದ್ದೇವೆ’ ಎಂದು ಅವರು ಹೇಳಿದರು.

‘ವಿವಿಧ ಅಂತರರಾಷ್ಟ್ರೀಯ ವೇದಿಕೆಗಳು ಮತ್ತು ಸಂಸ್ಥೆಗಳಲ್ಲಿ ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಕುರಿತು ನಮ್ಮ ನಿಲುವು ಈ ತಾರ್ಕಿಕತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಜೈಶಂಕರ್ ಹೇಳಿದರು.

‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಮತ್ತು ಸಾಮಾನ್ಯ ಸಭೆಯಲ್ಲೂ ನಾವು ಉಕ್ರೇನ್‌ನಲ್ಲಿ ತುರ್ತು ಕದನ ವಿರಾಮ ಘೋಷಿಸಬೇಕು. ಯುದ್ಧಪೀಡಿತ ನೆಲದಲ್ಲಿ ಸಿಲುಕಿರುವ ನಾಗರಿಕರ ಸುರಕ್ಷಿತಸ್ಥಳಾಂತರಕ್ಕೆ ಕಾರಿಡಾರ್‌ ತೆರೆಯುವಂತೆ ಒತ್ತಾಯಿಸಿದ್ದೇವೆ. ಈ ಬಿಕ್ಕಟ್ಟಿನ ವೇಳೆ ಉಕ್ರೇನ್‌ ಮತ್ತು ಅದರ ನೆರೆಯ ರಾಷ್ಟ್ರಗಳಿಗೆ ಭಾರತ ನೀಡಿದ ಮಾನವೀಯ ನೆರವನ್ನು ಎತ್ತಿತೋರಿಸಿದ್ದೇವೆ. ಬಿಕ್ಕಟ್ಟಿನ ಶುರುವಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ ಮತ್ತು ರಷ್ಯಾ ಹಾಗೂ ಇತರ ಪ್ರಮುಖ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ’ ಎಂದರು.

‘ಪುಟಿನ್ ಮತ್ತು ಝೆಲೆನ್‌ಸ್ಕಿ ನಡುವೆ ನೇರ ಮಾತುಕತೆ ನಡೆದರೆ ಶಾಂತಿ ಸ್ಥಾಪಿಸುವ ಪ್ರಯತ್ನಗಳಿಗೆ ಹೆಚ್ಚು ನೆರವಾಗಲಿದೆ ಎಂದು ಮೋದಿ ಸಲಹೆ ನೀಡಿದ್ದಾರೆ.ಉಕ್ರೇನ್ ಮತ್ತು ರಷ್ಯಾದ ಪ್ರತಿನಿಧಿಗಳ ನಡುವಿನ ಮಾತುಕತೆಗಳ ಬಗ್ಗೆ ಪುಟಿನ್‌ ಅವರೂ ಮೋದಿಯವರಿಗೆ ವಿವರಿಸಿದ್ದಾರೆ. ಮಾತುಕತೆಯನ್ನು ಸ್ವಾಗತಿಸಿರುವ ಪ್ರಧಾನಿ, ಸಂಘರ್ಷ ಶಮನದ ಭರವಸೆ ಹೊಂದಿದ್ದಾರೆ’ ಎಂದರು.

*
ಉಕ್ರೇನ್‌ಬಿಕ್ಕಟ್ಟಿಗೆ ರಾಜತಾಂತ್ರಿಕತೆ ಮತ್ತು ಮಾತುಕತೆಯೊಂದೇ ಪರಿಹಾರ, ಇದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎನ್ನುವುದನ್ನೂ ಸಂಬಂಧಿಸಿದ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ.
-ಎಸ್‌. ಜೈಶಂಕರ್‌, ವಿದೇಶಾಂಗ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT