ಶುಕ್ರವಾರ, ನವೆಂಬರ್ 27, 2020
21 °C

‘ಅಮೆರಿಕಕ್ಕಿಂತ ಭಾರತದ ನಿಲುವು ಭಿನ್ನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶಕ್ಕೆ ಸಂಬಂಧಿಸಿ ತನ್ನ ನಿಲುವು ಅಮೆರಿಕದ ನಿಲುವಿಗಿಂತ ಭಿನ್ನ ಎಂದು ಭಾರತ ಸ್ಪಷ್ಟಪಡಿಸಿದೆ.

ಭಾರತ–ಅಮೆರಿಕದ ರಕ್ಷಣೆ ಮತ್ತು ವಿದೇಶಾಂಗ ಸಚಿವರ ನಡುವೆ 2+2 ಮಾತುಕತೆ ನಡೆದ ಕೆಲವೇ ದಿನಗಳಲ್ಲಿ ಈ ಸ್ಪಷ್ಟೀಕರಣ ಹೊರಬಿದ್ದಿದೆ. ಪೂರ್ವ ಲಡಾಖ್‌ನಲ್ಲಿನ ಗಡಿ ಬಿಕ್ಕಟ್ಟು ಕಾರಣಕ್ಕೆ ಕಳೆದ ಆರು ತಿಂಗಳಿನಿಂದ ಚೀನಾ ಜತೆಗೆ ಭಾರತದ ಸಂಬಂಧ ಹದಗೆಟ್ಟಿದೆ. ಹಾಗಿದ್ದರೂ, ಚೀನಾದ ಪ್ರಗತಿಗೆ ಅಡ್ಡಿ ಮಾಡುವುದು ತನ್ನ ಉದ್ದೇಶ ಅಲ್ಲ ಎಂದು ಭಾರತ ಹೇಳಿದೆ. 

‘ಯಾವುದೇ ದೇಶವನ್ನು ಗುರಿ ಮಾಡುವುದು ಅಥವಾ ಹೊರಗೆ ಇರಿಸುವುದನ್ನು‍ ನಾವು ಬಯಸುವುದಿಲ್ಲ. ಪರಸ್ಪರರ ಸಾರ್ವಭೌಮತೆಯನ್ನು ಗೌರವಿಸಿ, ಜಾಗತಿಕ ಮಟ್ಟದಲ್ಲಿ ಎಲ್ಲರ ಒಳಿತಿಗೆ ಪೂರಕವಾದ ವಾತಾವರಣ ಸೃಷ್ಟಿ ನಮ್ಮ ಉದ್ದೇಶ’ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಹೇಳಿದ್ದಾರೆ. ಪ್ಯಾರಿಸ್‌ಗೆ ಭೇಟಿ ನೀಡಿರುವ ಅವರು ಅಲ್ಲಿನ ಸಂಸ್ಥೆಯೊಂದರಲ್ಲಿ ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದ ಬಗ್ಗೆ ಭಾರತದ ನಿಲುವು ಏನು ಎಂಬ ಬಗ್ಗೆ ಮಾತನಾಡಿದರು. 

ಅಮೆರಿಕಕ್ಕೆ ಇನ್ನಷ್ಟು ಹತ್ತಿರವಾಗುವ ಉದ್ದೇಶ ಭಾರತಕ್ಕೆ ಇಲ್ಲ. ಹಾಗೆಯೇ, ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿ ತನ್ನ ನಿಲುವನ್ನು ಪರಿಷ್ಕರಿಸುವ ಬಯಕೆಯೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಈ ಹೇಳಿಕೆ ನೀಡಲಾಗಿದೆ ಎಂದು
ವಿಶ್ಲೇಷಿಸಲಾಗಿದೆ. 

‘ಕೋವಿಡ್‌ನಿಂದಾಗಿ ಜಾಗತಿಕ ಭೌಗೋಳಿಕ ರಾಜಕಾರಣವು ಮರುರೂಪುಗೊಂಡಿದೆ. ಮುಖ್ಯವಾಗಿ ಚೀನಾ ಮತ್ತು ಅಮೆರಿಕ ತಮ್ಮ ನಿಲುವು ಬದಲಾಯಿಸಿಕೊಂಡಿವೆ. ಐರೋಪ್ಯ ಒಕ್ಕೂಟ ಕೂಡ ನಿಲುವನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಂಡಿದೆ. ಸ್ವಾಯತ್ತತೆಯ ದೃಢೀಕರಣಕ್ಕೆ ಸಂಬಂಧಿಸಿದಂತೆ ಭಾರತದ ನಿಲುವಿಗೆ ಸಮನಾದ ನಿಲುವನ್ನು ಐರೋಪ್ಯ ಒಕ್ಕೂಟ ಹೊಂದಿದೆ’ ಎಂದು ಶೃಂಗ್ಲಾ ಹೇಳಿದ್ದಾರೆ. 

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಜತೆಗೆ ದೆಹಲಿಯಲ್ಲಿ ಮಂಗಳವಾರ ಮಾತುಕತೆ ನಡೆಸಿದ್ದರು. ಭಾರತದ ಗಡಿಯಲ್ಲಿ ಮಾತ್ರವಲ್ಲದೆ, ತೈವಾನ್‌ ಖಾರಿ, ದಕ್ಷಿಣ ಚೀನಾ ಸಮುದ್ರ, ಪೂರ್ವ ಚೀನಾ ಸಮುದ್ರ ಮತ್ತು ಇತರೆಡೆಗಳಲ್ಲಿ ಚೀನಾದ ಅತಿಕ್ರಮಣಕಾರಿ ವರ್ತನೆಯೇ ಮಾತುಕತೆಯ ಮುಖ್ಯ ವಿಷಯವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು