ಮಂಗಳವಾರ, ಮೇ 18, 2021
27 °C
ಕೋವ್ಯಾಕ್ಸಿನ್‌ ತಯಾರಿಕೆ ಹೆಚ್ಚಳಕ್ಕೆ ಕ್ರಮ

ಕೊರತೆ: ಲಸಿಕೆ ಕಾರ್ಯಕ್ರಮಕ್ಕೆ ಹಿನ್ನಡೆ, ವಿದೇಶಗಳಿಗೆ ನೀಡಿದ್ದರಿಂದ ಅಭಾವ

ರಾಯಿಟರ್ಸ್/ ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದಲ್ಲಿ ಕೋವಿಡ್‌-19 ಲಸಿಕೆ ಕಾರ್ಯಕ್ರಮವು ವೇಗ ಕಳೆದುಕೊಂಡಿದೆ. ಲಸಿಕೆಯ ಕೊರತೆಯ ಕಾರಣ ಜನರಿಗೆ  ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಲಸಿಕೆ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳ ಮೇಲಿನ ರಫ್ತು ನಿರ್ಬಂಧವನ್ನು ತೆರವು ಮಾಡುವಂತೆ ಭಾರತದ ಲಸಿಕೆ ತಯಾರಕರು ಅಮೆರಿಕಕ್ಕೆ ಮನವಿ ಮಾಡಿದ್ದಾರೆ.

ಭಾರತವು ಹಲವು ದೇಶಗಳಿಗೆ ಬಹಳ ಉತ್ಸುಕತೆಯಿಂದ ಕೋಟ್ಯಂತರ ಡೋಸ್‌ಗಳಷ್ಟು ಲಸಿಕೆಯನ್ನು ನೀಡಿತ್ತು. ಆದರೆ ಈಗ ದೇಶದಲ್ಲೇ ಲಸಿಕೆ ಕೊರತೆ ಕಾಡುತ್ತಿದೆ. ಇದರ ಪರಿಣಾಮವಾಗಿ ಭಾರತದ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೂ ಹಿನ್ನಡೆಯಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಪ್ರತಿದಿನ ಸರಾಸರಿ 45 ಲಕ್ಷ ಡೋಸ್‌ನಷ್ಟು ಲಸಿಕೆ ನೀಡಲಾಗಿತ್ತು. ಈಗ ಈ ಸರಾಸರಿ ಸಂಖ್ಯೆ 30 ಲಕ್ಷಕ್ಕೆ ಕುಸಿದಿದೆ.

ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌, ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ಈಗ ನೀಡಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ಬಳಕೆಗೆ ಅನುಮತಿ ದೊರೆತಿದೆ. ಬೇರೆ ದೇಶಗಳ ಲಸಿಕೆ ಬಳಕೆಗೂ ಅನುಮತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಲಸಿಕೆ ಲಭ್ಯತೆ ಸುಧಾರಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಕೋವ್ಯಾಕ್ಸಿನ್ ತಯಾರಿಕೆ ಹೆಚ್ಚಳಕ್ಕೆ ಕ್ರಮ: ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್‌-19 ತಡೆ ಲಸಿಕೆ ಕೋವ್ಯಾಕ್ಸಿನ್‌ನ ತಯಾರಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಕಂಪನಿಗಳ ಜತೆ ಮಾತುಕತೆ ನಡೆಸಿದೆ.

ಭಾರತ್ ಬಯೊಟೆಕ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕಂಪನಿಯು ಪ್ರತಿತಿಂಗಳು ಗರಿಷ್ಠ 1 ಕೋಟಿ ಡೋಸ್‌ನಷ್ಟು ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯವನ್ನು ಸೆಪ್ಟೆಂಬರ್‌ ಅಂತ್ಯದ ವೇಳೆಗೆ 10 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗವು ಹೇಳಿದೆ.

ಈ ಸಂಬಂಧ ಮಹಾರಾಷ್ಟ್ರ ಸರ್ಕಾರದ ಅಧೀನ ಸಂಸ್ಥೆ ಎಚ್‌ಪಿಸಿಎಲ್‌ಗೆ ಕೋವ್ಯಾಕ್ಸಿನ್ ತಯಾರಿಕೆಗೆ ಅನುಮತಿ ನೀಡಲಾಗಿದೆ. ಕಂಪನಿಗೆ ₹ 65 ಲಕ್ಷ ಮೊತ್ತದ ಆರ್ಥಿಕ ನೆರವನ್ನೂ ಒದಗಿಸಲಾಗಿದೆ. ಭಾರತ್ ಬಯೊಟೆಕ್‌ ತನ್ನ ತಯಾರಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ₹ 65 ಲಕ್ಷದ ಆರ್ಥಿಕ ನೆರವು ನೀಡಲಾಗಿದೆ ಎಂದು ಜೈವಿಕ ತಂತ್ರಜ್ಞಾನ ವಿಭಾಗವು ಮಾಹಿತಿ ನೀಡಿದೆ.

***

ದೇಶದಲ್ಲಿ ಈಗ 3 ಕೋಟಿ ಡೋಸ್‌ ಕೋವಿಡ್‌ ಲಸಿಕೆಯ ಸಂಗ್ರಹವಿದೆ. ವಿವಿಧ ರಾಜ್ಯಗಳಿಗೆ ಪೂರೈಸಿರುವ ಈ ಡೋಸ್‌ಗಳು 10 ದಿನಗಳಿಗೆ ಸಾಕಾಗುತ್ತವೆ

- ಕೇಂದ್ರ ಆರೋಗ್ಯ ಸಚಿವಾಲಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು