ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ತೇಜಸ್ವಿ ಸೂರ್ಯ

Last Updated 17 ಜನವರಿ 2023, 22:03 IST
ಅಕ್ಷರ ಗಾತ್ರ

ಚೆನ್ನೈ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ತೇಜಸ್ವಿ ಸೂರ್ಯ ಅವರು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು ಟೀಕೆಗೆ ಗುರಿಯಾಗಿದ್ದಾರೆ.

ತೇಜಸ್ವಿ ಅವರು ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಜೊತೆ ಡಿಸೆಂಬರ್‌ 10ರಂದು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ವಿಮಾನ ಏರಿದ್ದರು. ಈ ವೇಳೆ ತುರ್ತು ನಿರ್ಗಮನ ದ್ವಾರದ ‘ಲಿವರ್‌’ ಎಳೆದಿದ್ದರು. ಕ್ಷಮಾಪಣಾ ಪತ್ರ ನೀಡಿದ ಬಳಿಕ ಅದೇ ವಿಮಾನದಲ್ಲಿ ಪ್ರಯಾಣಿಸಲು ಅವರಿಗೆ ಅನುವು ಮಾಡಿಕೊಡಲಾಗಿತ್ತು.

ವಿಮಾನಯಾನ ನಿಯಮಾವಳಿಗಳ ಅನುಸಾರ ತುರ್ತು ನಿರ್ಗಮನ ದ್ವಾರ ತೆರೆಯುವುದು ಶಿಕ್ಷಾರ್ಹ ಅಪರಾಧ. ಹೀಗಿದ್ದರೂ ತೇಜಸ್ವಿ ವಿಚಾರದಲ್ಲಿ ಇಂಡಿಗೊ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮೃದುಧೋರಣೆ ತಳೆದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡಿದ, ಅವರ ಜೀವದ ಜೊತೆ ಚೆಲ್ಲಾಟವಾಡಿದ್ದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಏಕೆ? ಅಧಿಕಾರಿಗಳು ಈ ವಿಚಾರವನ್ನು ಒಂದು ತಿಂಗಳವರೆಗೂ ಗೌಪ್ಯವಾಗಿ ಇಟ್ಟಿದ್ದರ ಹಿಂದಿನ ಉದ್ದೇಶವೇನು ಎಂದು ವಿಮಾನಯಾನ ತಜ್ಞರು ‍ಪ್ರಶ್ನಿಸಿದ್ದಾರೆ. ತುರ್ತು ನಿರ್ಗಮನ ದ್ವಾರ ತೆರೆದಿದ್ದವರ ವಿರುದ್ಧ ಈ ಹಿಂದೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು ಎಂದೂ ಹೇಳಿದ್ದಾರೆ.

‘ಡಿ.10ರಂದು 6ಇ7339 ವಿಮಾನ ದಲ್ಲಿ ನಡೆದಿದ್ದೇನು? ವಿಮಾನಯಾನ ಸಚಿವಾಲಯದಿಂದ ಬಂದ ಒಂದು ಕರೆಯ ಬಳಿಕ ಎಲ್ಲವೂ ತಣ್ಣಗಾಗಿದ್ದೇಕೆ? ಒಬ್ಬನ ಅಚಾತುರ್ಯದಿಂದಾಗಿ ನಾವು 70 ಜನರ ಜೀವ ಕಳೆದುಕೊಳ್ಳಬೇಕಾಗಿತ್ತು’ ಎಂದು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರು ಮಂಗಳವಾರ ಟ್ವೀಟ್‌ ಮಾಡಿದ ಬಳಿಕ ಈ ವಿಚಾರ ಬಹಿರಂಗವಾಗಿದೆ.

ಇದಾಗಿ ಒಂದು ಗಂಟೆಯ ನಂತರ ಡಿಜಿಸಿಎ ಹಾಗೂ ಇಂಡಿಗೊ ಸಂಸ್ಥೆ ಘಟನೆ ನಡೆದಿರುವುದನ್ನು ಒಪ್ಪಿಕೊಂಡಿದ್ದವು. ಆದರೆ ಪ್ರಯಾಣಿಕನ ಹೆಸರು ಬಹಿರಂಗಪಡಿಸಿರಲಿಲ್ಲ. ಚೆನ್ನೈ ವಿಮಾನ ನಿಲ್ದಾಣದ ಮೂಲಗಳು ಹಾಗೂ ಆ ವಿಮಾನದಲ್ಲಿ ಪ್ರಯಾಣಿಸಿದ್ದವರು ಆ ವ್ಯಕ್ತಿ ತೇಜಸ್ವಿ ಸೂರ್ಯ ಎಂದು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

‘ಬಸ್‌ನಲ್ಲಿ ಕುಳಿತಿರುವ ವೇಳೆಯೇ ಸೂರ್ಯ ಕ್ಷಮಾಪಣಾ ಪತ್ರ ಬರೆದು ಅಧಿಕಾರಿಗಳಿಗೆ ನೀಡಿದರು. ಬಳಿಕ ಎಲ್ಲರಿಗೂ ವಿಮಾನದೊಳಗೆ ಬಿಡಲಾಯಿತು. ಸೂರ್ಯ ಹಾಗೂ ಅಣ್ಣಾಮಲೈ ಅವರಿಗೆ ನಿಯೋಜಿತ ಆಸನದ ಬದಲು ಬೇರೆಡೆ ಆಸನದ ವ್ಯವಸ್ಥೆ ಮಾಡಿಕೊಡಲಾಯಿತು’ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಪ್ರಕರಣ ಕುರಿತು ಪ್ರತಿಕ್ರಿಯೆ ಪಡೆಯಲು ತೇಜಸ್ವಿ ಸೂರ್ಯ ಅವರನ್ನು ಸಂಪರ್ಕಿಸಲಾಯಿತು. ಅವರು ದೂರವಾಣಿ ಕರೆಗೆ ಲಭ್ಯರಾಗಲಿಲ್ಲ.

ಆಕಸ್ಮಿಕವಾಗಿ ನಡೆದ ಘಟನೆ
‘ವಿಮಾನ ಹೊರಡಲು ಸಿದ್ಧವಾಗಿದ್ದ ವೇಳೆ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ತುರ್ತು ನಿರ್ಗಮನ ದ್ವಾರ ತೆರೆದಿದ್ದರು. ಅದಕ್ಕಾಗಿ ತಕ್ಷಣವೇ ಕ್ಷಮೆ ಕೋರಿದ್ದರು. ಬಳಿಕ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದ್ದರು’ ಎಂದು ಇಂಡಿಗೊ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

*

ವಿಮಾನವು ಹಾರಾಟ ನಡೆಸಲು ಸಿದ್ಧವಾಗಿದ್ದ ವೇಳೆ ನಮ್ಮನ್ನೆಲ್ಲಾ ಏಕಾಏಕಿ ಕೆಳಗಿಳಿಸಲಾಯಿತು. ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ನಮಗೆ ಅರ್ಥವಾಗಿರಲಿಲ್ಲ. ಎರಡು ಗಂಟೆ ಬಳಿಕ ವಿಮಾನ ಹಾರಾಟ ನಡೆಸಿತು.
–ಕೆ.ಟಿ.ಅರಸಕುಮಾರ್‌, ಡಿಎಂಕೆ ವಕ್ತಾರ, ವಿಮಾನದ ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT