ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.8ರಿಂದ ಭಾರತ– ಅಮೆರಿಕ ಜಂಟಿ ಸಮರಭ್ಯಾಸ

Last Updated 3 ಫೆಬ್ರುವರಿ 2021, 11:32 IST
ಅಕ್ಷರ ಗಾತ್ರ

ಜೈಪುರ: ಭಾರತ– ಅಮೆರಿಕ ಸೇನೆಗಳ ನಡುವಣ 16ನೇ ಆವೃತ್ತಿಯ ಸೇನಾ ಜಂಟಿ ಸಮರಾಭ್ಯಾಸ ‘ಯುದ್ಧ್‌ ಅಭ್ಯಾಸ್‌’ ಫೆ.8ರಿಂದ 21ರವರೆಗೆ ರಾಜಸ್ಥಾನದಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಬುಧವಾರ ತಿಳಿಸಿದ್ದಾರೆ.

ಭಾರತ ಮತ್ತು ಪಾಕ್‌ ಗಡಿಯ ಸಮೀಪ ನಡೆಯಲಿರುವ ಎರಡೂ ಸೇನೆಗಳ ಸಮರಭ್ಯಾಸವು ವಿಶ್ವಸಂಸ್ಥೆಯ ನಿಯಮಾನುಸಾರ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಎರಡೂ ಸೇನೆಗಳ ಪರಸ್ಪರ ಸಹಕಾರ ಮತ್ತು ಕಾರ್ಯಸಾಧ್ಯತೆಯನ್ನು ಕೇಂದ್ರೀಕರಿಸಿರಲಿದೆ ಎಂದು ವಕ್ತಾರರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಭಾರತ ಮತ್ತು ಫ್ರಾನ್ಸ್‌ನ ವಾಯುಪಡೆಗಳು ಜನವರಿಯಲ್ಲಿ ಐದು ದಿನಗಳ ಜಂಟಿ ಸಮರಾಭ್ಯಾಸ ನಡೆಸಿದ್ದವು. ಇದರ ಬೆನ್ನಲ್ಲೇ ಈ ‘ಯುದ್ಧ್‌ ಅಭ್ಯಾಸ್‌’ ಕೂಡ ನಡೆಯುತ್ತಿದೆ.

ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ, ‘ಸೇನಾ ವಿನಿಮಯದ ಯೋಜನೆಯ ಭಾಗವಾಗಿ 16ನೇ ಆವೃತ್ತಿಯ ‘ಯುದ್ಧ್‌ ಅಭ್ಯಾಸ್’ಗೆ ಫೆ.5ರಂದು ಭಾರತಕ್ಕೆ ಆಗಮಿಸಲಿರುವ ಅಮೆರಿಕದ ಸೇನಾ ಪಡೆಗಳು, ಭಾರತೀಯ ಸೇನಾ ಪಡೆಗಳನ್ನು ಕೂಡಿಕೊಳ್ಳಲಿವೆ. ಮಹಾಜನ್‌ ಫೀಲ್ಡ್‌ ಫೈರಿಂಗ್‌ ರೇಂಜಸ್‌ನಲ್ಲಿರುವ ವಿದೇಶಿ ತರಬೇತಿ ತಾಣದಲ್ಲಿ ಈ ದ್ವಿಪಕ್ಷೀಯ ತರಬೇತಿ ಅಭ್ಯಾಸವನ್ನು ನಡೆಸಲಾಗುತ್ತದೆ’ ಎಂದರು.

‘ಜಾಗತಿಕ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳು ಭದ್ರತಾ ಸವಾಲುಗಳನ್ನು ಎದುರಿಸುತ್ತಿದ್ದು, ಅಮೆರಿಕ ಸೇನೆಯೊಂದಿಗೆ ನಡೆಯುತ್ತಿರುವ ಈ ಜಂಟಿ ಸಮರಾಭ್ಯಾಸವು ಮಹತ್ವದ್ದಾಗಿದೆ. ಇದು ಎರಡೂ ರಾಷ್ಟ್ರಗಳ ಸೇನೆಗಳ ನಡುವೆ ರಕ್ಷಣಾ ಸಹಕಾರ ಹೆಚ್ಚಿಸಲಿದೆ. ಜತೆಗೆ ದ್ವಿಪಕ್ಷೀಯ ಸಂಬಂಧವನ್ನೂ ವೃದ್ಧಿಸುತ್ತದೆ. ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಭಾರತವು ಪ್ರಮುಖ ಪಾಲುದಾರನಾಗಿ ಪಾತ್ರವಹಿಸಲಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ಉತ್ತರದ ಗಡಿ ಭಾಗಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲೂ ಈ ಜಂಟಿ ಸಮರಾಭ್ಯಾಸವು ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಕೋವಿಡ್‌–19 ಸಾಂಕ್ರಾಮಿಕದ ಹೊರತಾಗಿಯೂ ಈ ಜಂಟಿ ಸಮರಾಭ್ಯಾಸ ನಡೆಸುತ್ತಿರುವುದು ಉಭಯ ರಾಷ್ಟ್ರಗಳ ಕಾರ್ಯತಂತ್ರ ಮತ್ತು ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT