ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 25 ಕೋಟಿ ಜನರಲ್ಲಿ ಕೊರೊನಾ ಸೋಂಕು: ಸೆರೊ ಸಮೀಕ್ಷೆ ಫಲಿತಾಂಶ

ಗ್ರಾಮೀಣ ಪ್ರದೇಶದಲ್ಲಿ ಹರಡುವಿಕೆ ಪ್ರಮಾಣ ಶೇ 19:
Last Updated 4 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ದೇಶದ 25 ಕೋಟಿ ಜನರು ಕೊರೊನಾ ಸೋಂಕಿಗೆ ತೆರೆದುಕೊಂಡಿದ್ದಾರೆ. ಅಂದರೆ, ದೇಶದ ಶೇ 21ರಷ್ಟು ಜನರು ಸೋಂಕಿಗೆ ಒಳಗಾಗಿರಬಹುದು ಎಂದು ಮೂರನೇ ರಾಷ್ಟ್ರೀಯ ಸೆರೊ ಸಮೀಕ್ಷೆಯಿಂದ ತಿಳಿದುಬಂದಿದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಸೋಂಕಿನ ಅಪಾಯ ಇನ್ನೂ ಇದೆ ಎಂಬುದು ಇದರ ಅರ್ಥಎಂದು ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಕಳೆದ ಡಿಸೆಂಬರ್ 7ರಿಂದ ಜನವರಿ 8ರ ನಡುವೆ ಈ ಸಮೀಕ್ಷೆ ನಡೆಸಿತ್ತು. 18 ವರ್ಷಕ್ಕೆ ಮೇಲ್ಪಟ್ಟ 28,589 ಜನರ ಪೈಕಿ ಶೇ 21.4ರಷ್ಟು ಜನರಲ್ಲಿ ಸೋಂಕಿಗೆ ಒಳಗಾದದ್ದರ ಲಕ್ಷಣಗಳು ಕಂಡುಬಂದಿವೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಗುರುವಾರ ತಿಳಿಸಿದ್ದಾರೆ.

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊರತುಪಡಿಸಿ, ಭಾರತದ ಜನಸಂಖ್ಯೆಯನ್ನು 136 ಕೋಟಿ ಎಂದು ಪರಿಗಣಿಸಿದರೆ, ಸುಮಾರು 25 ಕೋಟಿ ಭಾರತೀಯರಿಗೆ ಸೋಂಕು ತಗುಲಿದೆ. ದೇಶದಲ್ಲಿ ಈವರೆಗೆ 1.08 ಕೋಟಿ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.

10ರಿಂದ 17 ವರ್ಷದೊಳಗಿನ ಮಕ್ಕಳ ಸಮೀಕ್ಷೆ ನಡೆಸಿದಾಗ ಶೇ 25.3ರಷ್ಟು ಮಕ್ಕಳಿಗೆ ಕೋವಿಡ್ ತಗುಲಿರುವುದು ಕಂಡು
ಬಂದಿದೆ. ನಗರದ ಕೊಳೆಗೇರಿಗಳಲ್ಲಿ ಶೇ 31.7ರಷ್ಟು, ನಗರದ ಕೊಳೆಗೇರಿಯೇತರ ಪ್ರದೇಶಗಳಲ್ಲಿ 26.2ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. 60 ವರ್ಷ ಮೇಲ್ಪಟ್ಟವರಲ್ಲಿ ಈ ಪ್ರಮಾಣ ಶೇ 23.4ರಷ್ಟು ಎಂದು ಭಾರ್ಗವ ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶೇ 19.1ರಷ್ಟು ಜನರಿಗೆ ಸೋಂಕು ತಗುಲಿದೆ. ದೇಶದ ಹೆಚ್ಚಿನ ಜನ ವಾಸಮಾಡುವ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳು ಅಪಾಯಕ್ಕೆ ತೆರೆದುಕೊಂಡಿವೆ ಎಂಬುದನ್ನು ಸಮೀಕ್ಷೆ ಎತ್ತಿ ತೋರಿಸುತ್ತದೆ. ‘ದೇಶದ ಶೇ 75ಕ್ಕಿಂತ ಹೆಚ್ಚು ಜನರು ಇನ್ನೂ ಅಪಾಯ ಎದುರಿಸುತ್ತಿದ್ದಾರೆ’ ಎಂದು ನೀತಿ ಆಯೋಗದ ಸದಸ್ಯ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಾಜಿ ಪ್ರಾಧ್ಯಾಪಕ ವಿ.ಕೆ. ಪಾಲ್ ಹೇಳಿದ್ದಾರೆ.

‘ಇಲ್ಲಿಯವರೆಗೆ ನಮಗೆ ತಿಳಿದಿರುವಂತೆ, ಕೊಳೆಗೇರಿಯೇತರ ಪ್ರದೇಶಗಳು ಮತ್ತು ಹಳ್ಳಿಗಳಿಗೆ ಹೋಲಿಸಿದರೆ, ನಗರ ಪ್ರದೇಶಗಳಲ್ಲಿನ ದಟ್ಟ ಜನ ಸಾಂದ್ರತೆಯ ಪ್ರದೇಶಗಳಲ್ಲಿ ಇರುವವರಲ್ಲಿ ಪ್ರತಿಕಾಯಗಳ ಪ್ರಮಾಣ ಹೆಚ್ಚಾಗಿದೆ. ಕೋವಿಡ್ ಲಸಿಕೆ ಎಲ್ಲ ಪ್ರದೇಶಗಳಿಗೂ ತಲುಪುವವರೆಗೆ ನಾವು ಸೋಂಕು ತಡೆ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ’ ಎಂದು ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಅಡ್ಡ ಪರಿಣಾಮ ವರದಿ ಸದ್ಯದಲ್ಲೇ ಬಿಡುಗಡೆ: ಕೋವಿಡ್ ಲಸಿಕೆ ಪಡೆದು ಸಾವನ್ನಪ್ಪಿದ ಪ್ರಕರಣಗಳಲ್ಲಿ ರಾಜ್ಯಗಳು ನಡೆಸಿರುವ ತನಿಖಾ ವರದಿಗಳನ್ನು ರಾಷ್ಟ್ರೀಯ ಸಮಿತಿ ಪರಿಶೀಲನೆ ನಡೆಸಿದ ಬಳಿಕ ಅವುಗಳನ್ನು ಸದ್ಯದಲ್ಲೇ ಬಹಿರಂಗಪಡಿಸಲಾಗುವುದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಕೋವಿಡ್ ಲಸಿಕೆ ಪಡೆದು ಈವರೆಗೆ ದೇಶದಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಪ್ರತಿಯೊಂದು ಮರಣೋತ್ತರ ಪರೀಕ್ಷೆ
ಯನ್ನು ಮೂವರು ವೈದ್ಯರ ತಂಡ ನೆರವೇರಿಸಿದೆ. ಈ ವರದಿಗಳನ್ನು ‘ಲಸಿಕೆ ಅಡ್ಡಪರಿಣಾಮ’ (ಎಇಎಫ್‌ಐ) ಕುರಿತ ರಾಜ್ಯಮಟ್ಟದ ಸಮಿತಿ ಪರಿಶೀಲಿಸಿದೆ.

ಈ ಸಾವುಗಳಿಗೆ ಲಸಿಕೆಯ ನಂಟಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಜಯ್ ಭೂಷಣ್ ತಿಳಿಸಿದ್ದಾರೆ. ಈವರೆಗೆ 45 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವುಗಳಲ್ಲಿ 8563 ಪ್ರಕರಣಗಳು ಅಡ್ಡಪರಿಣಾಮಕ್ಕೆ ಸಂಬಂಧಿಸಿದ ಚಿಕ್ಕ ಘಟನೆಗಳು. 34 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಮೂಹ ರೋಗನಿರೋಧಕತೆ ಹತ್ತಿರವಿಲ್ಲ

ಸೋಂಕಿಗೆ ಒಳಗಾದ ಜನಸಂಖ್ಯೆಯ ಪ್ರಮಾಣ ಮತ್ತು ಅವರ ದೇಹದಲ್ಲಿ ಬೆಳೆದಿರುವ ಪ್ರತಿಕಾಯಗಳನ್ನು (ಆಂಟಿಬಾಡಿಸ್‌) ಗುರುತಿಸಲು ಸೆರೊ ಸಮೀಕ್ಷೆ ನಡೆಸಲಾಗುತ್ತದೆ. ಜನಸಮುದಾಯಗಳನ್ನು ಸಾಮೂಹಿಕ ರಕ್ತ ತಪಾಸಣೆಗೆ ಒಳಪಡಿಸಲಾಗುತ್ತದೆ.

ಸಹಜ ಸಮೂಹ ರೋಗನಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ಗಳಿಸುವಿಕೆಗೆ ಭಾರತ ಇನ್ನೂ ಹತ್ತಿರವಾಗಿಲ್ಲ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ದೆಹಲಿ: ಶೇ 50ಕ್ಕಿಂತ ಹೆಚ್ಚು

ದೆಹಲಿ ಸರ್ಕಾರವು ತನ್ನ ಐದನೇ ಸಮೀಕ್ಷೆಯ ಫಲಿತಾಂಶಗಳನ್ನು ಬುಧವಾರ ಬಿಡುಗಡೆ ಮಾಡಿತ್ತು. ಇದರ ಪ್ರಕಾರ, ದೆಹಲಿಯ ಜನಸಂಖ್ಯೆಯ ಶೇ 56ಕ್ಕಿಂತ ಹೆಚ್ಚು ಜನರು ವೈರಸ್‌ಗೆ ತೆರೆದುಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯ 11 ಜಿಲ್ಲೆಗಳ ಪೈಕಿ ಹತ್ತರಲ್ಲಿ ಹರಡುವಿಕೆ ಪ್ರಮಾಣ ಶೇ 50ಕ್ಕಿಂತ ಹೆಚ್ಚಿನದಾಗಿದ್ದರೆ, ಆಗ್ನೇಯ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ 62ಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿತ್ತು. ಐಸಿಎಂಆರ್ ಸಮೀಕ್ಷೆಯಲ್ಲಿ ದೆಹಲಿಯನ್ನು ಹೊರಗಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT