ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಚಿವ ಪಾಟೀಲ್ ಮೇಲೆ ಮಸಿ ಎರಚಿದ ಪ್ರಕರಣ: 10 ಪೊಲೀಸರ ಅಮಾನತು

Last Updated 11 ಡಿಸೆಂಬರ್ 2022, 11:44 IST
ಅಕ್ಷರ ಗಾತ್ರ

ಪುಣೆ: ಮಹಾರಾಷ್ಟ್ರದ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್ ಅವರ ಮೇಲೆ ಮಸಿ ಎರೆಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಲೋಪದ ಆರೋಪದಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚವಾಡ ಪೊಲೀಸ್‌ ಠಾಣೆಯ ಮೂವರು ಅಧಿಕಾರಿ ಮತ್ತು ಏಳು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಾಟೀಲ ಅವರ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಶನಿವಾರ ಪಿಂಪ್ರಿ ಪ್ರದೇಶದಲ್ಲಿ ಮಸಿ ಎರಚಲಾಗಿತ್ತು. ಈ ಸಂದರ್ಭದಲ್ಲಿ ಸಚಿವರಿಗೆ ಸರಿಯಾದ ಭಧ್ರತೆ ಒದಗಿಸದ ಆರೋಪದಲ್ಲಿಹತ್ತು ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಪಿಂಪ್ರಿ ಚಿಂಚವಾಡ ಪೊಲೀಸ್‌ ಆಯುಕ್ತ ಅಂಕುಶ್‌ ಶಿಂದೆ ತಿಳಿಸಿದ್ದಾರೆ.

ಪಿಂಪ್ರಿಯ ಬಿಜೆಪಿ ಪದಾಧಿಕಾರಿಯೊಬ್ಬರ ಮನೆಯಿಂದ ಹೊರಬರುತ್ತಿದ್ದಾಗ ಸಚಿವರ ಮೇಲೆ ಮಸಿ ಎರಚಲಾಯಿತು. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ವಿವಾದ?: ಔರಂಗಾಬಾದ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಪಾಟೀಲ್‌, ‘ಅಂಬೇಡ್ಕರ್‌ ಮತ್ತು ಫುಲೆ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸರ್ಕಾರದ ಅನುದಾನ ಕೇಳಿರಲಿಲ್ಲ, ಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸಲು ನಿಧಿ ಸಂಗ್ರಹಕ್ಕಾಗಿ ಅವರು ಜನರಿಂದ ಭಿಕ್ಷೆ ಬೇಡಿದ್ದರು’ ಎಂದು ಹೇಳಿದ್ದರು. ಅವರು ಬಳಸಿದ ‘ಭಿಕ್ಷೆ’ ಪದ ವಿವಾದಕ್ಕ ಕಾರಣವಾಗಿತ್ತು.

ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ, ಹೀಗಾಗಿ ಭದ್ರತಾ ಲೋಪದ ಕಾರಣಕ್ಕೆ ಪೊಲೀಸರ ಮೇಲೆ ಕ್ರಮ ಕೈಗೊಳ್ಳದಂತೆ ಸಚಿವ ಪಾಟೀಲ್‌ ಅವರು ಗೃಹ ಸಚಿವ ದೇವೇಂದ್ರ ಫಡಣವೀಸ್ ಅವರಲ್ಲಿ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT