ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಹಣಿಯಲು ಸಮಾಜವಾದಿ ಪಕ್ಷದ ‘ಇಂಟರ್‌ನೆಟ್‌’ ತಂತ್ರ

ಪತ್ರಿಕಾ ತುಣುಕು, ವಿಡಿಯೊ ಮೂಲಕ ಪ್ರಭಾವಕ್ಕೆ ಯತ್ನ
Last Updated 1 ಜನವರಿ 2023, 19:45 IST
ಅಕ್ಷರ ಗಾತ್ರ

ಲಖನೌ: ‘ರಸಗೊಬ್ಬರಕ್ಕಾಗಿ ಸರತಿಯಲ್ಲಿ ನಿಂತ ರೈತರು, ನೀರು ಬರದ ಕೊಳಾಯಿಯ ಸುತ್ತ ಖಾಲಿ ಬಿಂದಿಗೆಗಳು, ರೋಗಿಯನ್ನು ಹೆಗಲಲ್ಲಿ ಹೊತ್ತೊಯ್ದ ಸಂಬಂಧಿಕರು, ವ್ಯಾಪಾರಿಯ ಹತ್ಯೆ’... ಸಮಾಜವಾದಿ ಪಕ್ಷದ ಫೇಸ್‌ಬುಕ್‌ ಪುಟ ಮತ್ತು ಟ್ವಿಟರ್ ಖಾತೆಯಲ್ಲಿ ಈಗ ಇಂತಹ ತಲೆಬರಹಗಳ ಸುದ್ದಿ ಕ್ಲಿಪ್ಪಿಂಗ್‌ಗಳು ತುಂಬಿ ಹೋಗಿವೆ. ಇಂತಹ ಕ್ಲಿಪ್ಪಿಂಗ್‌ ಇರುವ ಪೋಸ್ಟ್‌ ಮತ್ತು ಟ್ವೀಟ್‌ಗಳು ಲಕ್ಷಾಂತರ ಸಂಖ್ಯೆಯಲ್ಲಿ ಹಂಚಿಕೆಯಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪಕ್ಷವು ಮಾಡಿಕೊಂಡಿರುವ ಸಿದ್ಧತೆ ಇದು.

ಮೈನ್‌ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇತ್ತೀಚಿಗೆ ದೊರೆತಿರುವ ಅಭೂತಪೂರ್ವ ಗೆಲುವು ಸಮಾಜವಾದಿ ಪಕ್ಷದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಇಂಟರ್‌ನೆಟ್‌ ಅನ್ನು ಸಮರ್ಥವಾಗಿ ಬಳಸಿಕೊಳ್ಳಲು ಪಕ್ಷ ಮುಂದಾಗಿದೆ.

ಪ್ರತೀ ಹಂತವೂ ಬಿಜೆಪಿಗೆ ಸವಾಲಾಗುವಂತೆ ನೋಡಿಕೊಳ್ಳುವತ್ತ ಹೆಜ್ಜೆ ಇಟ್ಟಿರುವ ಪಕ್ಷ, ಕಾನೂನು ಸುವ್ಯವಸ್ಥೆ, ಆರೋಗ್ಯ, ರೈತರು, ಯುವಜನತೆಯಂತಹ ವಿಚಾರಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರವನ್ನು ಹಣಿಯಲು ನಿರ್ಧರಿಸಿದೆ.

ರಾಜ್ಯದಲ್ಲಿ ನಡೆದ ಅಪರಾಧ ಪ್ರಕರಣಗಳು, ರಸಗೊಬ್ಬರ ಕೊರತೆ, ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಪ್ರಕಟವಾಗಿರುವ ಪತ್ರಿಕಾ ವರದಿಯ ತುಣುಕುಗಳನ್ನು ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಮಾಜವಾದಿ ಪಕ್ಷ ಹಂಚಿಕೊಳ್ಳುತ್ತಿದೆ. ಈ ವಿಷಯಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳನ್ನೂ ಹಂಚಿಕೊಳ್ಳುತ್ತಿದೆ.

ಆಡಳಿತ ಪಕ್ಷದ ಶಾಸಕರೊಬ್ಬರ ಜಿಲ್ಲೆಯಲ್ಲಿ ನಾಗರಿಕರೊಬ್ಬರ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಿದ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ತನ್ನ ಮನೆಯ ಧ್ವಂಸದ ಹಿಂದೆ ಶಾಸಕರ ಕೈವಾಡವಿದೆ ಎಂದು ಮನೆಯ ಮಾಲೀಕ ಆರೋಪ ಮಾಡಿರುವ ಪತ್ರಿಕಾ ಸುದ್ದಿಯ ತುಣುಕನ್ನೂ ಈ ವಿಡಿಯೊ ಒಳಗೊಂಡಿದೆ.

ಬೀದಿನಾಯಿಗಳ ಹಾವಳಿ, ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಆಂಬುಲೆನ್ಸ್‌ಗಳ ಕೊರತೆ, ನೀರಿನ ಬವಣೆಯನ್ನು ವರದಿ ಮಾಡಿರುವ ಪತ್ರಿಕಾ ವರದಿಯ ತುಣುಕುಗಳನ್ನೂ ಪಕ್ಷದ ವೇದಿಕೆಗಳ ಮೂಲಕ ಫೇಸ್‌ಬುಕ್‌ಗೆ ಪೋಸ್ಟ್ ಮಾಡಲಾಗಿದೆ.

‘ವಾಸ್ತವ ತಿಳಿಸುವ ಯತ್ನ’

‘ರಾಜ್ಯದ ಆಡಳಿತಾರೂಢ ಬಿಜೆಪಿಯು ತನ್ನ ಸಾಮಾಜಿಕ ತಾಲತಾಣ ವೇದಿಕೆಗಳ ಮೂಲಕ ವ್ಯವಸ್ಥಿತವಾಗಿ ಜನರ ಮೇಲೆ ಪ್ರಭಾವ ಬೀರುತ್ತಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಕುರಿತು ಧನಾತ್ಮಕ ವಿಚಾರಗಳನ್ನು ಬಿಂಬಿಸುತ್ತಿದೆ. ಇದರಿಂದ ಜನರಿಗೆ ವಾಸ್ತವ ಸ್ಥಿತಿಯನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬುದನ್ನು ನಾವು ಪಕ್ಷದ ಸಾಮಾಜಿಕ ಜಾಲತಾಣದ ವೇದಿಕೆಗಳ ಮೂಲಕ ಜನರಿಗೆ ತಿಳಿಸುತ್ತಿದ್ದೇವೆ’ ಎಂದು ಎಸ್‌ಪಿ ಮುಖಂಡರೊಬ್ಬರು ಹೇಳುತ್ತಾರೆ.

‘ಸಮಾಜವಾದಿ ಪಕ್ಷವು ಬಿಜೆಪಿ ವಿರುದ್ಧ ಮಾಡುವ ಆರೋಪಗಳಿಗಿಂತ, ಪತ್ರಿಕಾ ವರದಿಗಳು ಹಾಗೂ ವಿಡಿಯೊಗಳು ಜನರ ದೃಷ್ಟಿಯಲ್ಲಿ ಹೆಚ್ಚು ವಿಶ್ವಾಸಾರ್ಹವಾಗಿ ಕಾಣುತ್ತವೆ. ಸರ್ಕಾರದ ನೀತಿಗಳನ್ನು ವಿರೋಧಿಸಿ ಪಕ್ಷವು ಸದ್ಯದಲ್ಲೇ ಬೀದಿಗಿಳಿದು ಹೋರಾಟ ಮಾಡಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT