ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ನಿಶಿತ್ ಪ್ರಮಾಣಿಕ್ ಬಾಂಗ್ಲಾದವರೇ? ಸರ್ಕಾರದ ಸ್ಪಷ್ಟನೆ ಕೇಳಿದ ಪ್ರತಿಪಕ್ಷಗಳು

ಸಂಸತ್ ಕಲಾಪ; ಸರ್ಕಾರದ ಸ್ಪಷ್ಟನೆ ಕೇಳಿದ ಪ್ರತಿಪಕ್ಷಗಳು
Last Updated 19 ಜುಲೈ 2021, 18:59 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಗೃಹಖಾತೆ ರಾಜ್ಯ ಸಚಿವರಾಗಿ ನೂತನವಾಗಿ ನೇಮಕವಾಗಿರುವ ನಿಶಿತ್ ಪ್ರಮಾಣಿಕ್ ಅವರ ರಾಷ್ಟ್ರೀಯತೆ ಬಗ್ಗೆ ಸೋಮವಾರ ಆರಂಭವಾದ ಸಂಸತ್ ಅಧಿವೇಶನ ದಲ್ಲಿ ಭಾರಿ ಚರ್ಚೆ ನಡೆಯಿತು. ನಿಶಿತ್ ಅವರು ಬಾಂಗ್ಲಾದೇಶದ
ವರು ಎಂಬ ಆರೋಪಗಳಿದ್ದು, ಇದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು.‍ಪ್ರತಿಪಕ್ಷ
ಗಳ ಆರೋಪವನ್ನು ಅಲ್ಲಗಳೆದ ಸರ್ಕಾರ, ದಲಿತ ಮುಖಂಡನೊಬ್ಬನ ಚಾರಿತ್ರ್ಯವಧೆ ಮಾಡುವ ಯತ್ನವಿದು ಎಂದು ಕರೆದಿದೆ.

ಸಚಿವರ ರಾಷ್ಟ್ರೀಯತೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ರಾಜ್ಯಸಭೆಯ ‍ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಟಿಎಂಸಿ ಸಂಸದ ಸುಖೇಂದು ಶೇಖರ್ ಆಗ್ರಹಿಸಿದರು.

ಸಚಿವರ ಹೆಸರು ಉಲ್ಲೇಖಿಸದೇ ಮಾತನಾಡಿದ ಶೇಖರ್, ವಿಕಿಪೀಡಿಯಾದಲ್ಲಿ ಪರಿಶೀಲಿಸಿದರೆ, ಗೃಹಖಾತೆ ರಾಜ್ಯ ಸಚಿವರು ಬಾಂಗ್ಲಾದೇಶಿಗರು ಎಂಬುದು ಉಲ್ಲೇಖವಾಗಿದೆ ಎಂದರು. ಶೇಖರ್ ಮಾತಿಗೆ ಖರ್ಗೆ ದನಿಗೂಡಿಸಿದರು. ‘ಸಂಸದರು ಪ್ರಸ್ತಾಪಿಸಿರುವ ವಿಷಯ ಸರಿಯಾಗಿದ್ದು,ಸಚಿವರು ಬಾಂಗ್ಲಾದೇಶಿಗರೇ, ಅಲ್ಲವೇ ಎಂದು ತಿಳಿಯಲು ಹಕ್ಕಿದೆ’ ಎಂದು ಹೇಳಿದರು.

ರಾಷ್ಟ್ರೀಯತೆ ಕುರಿತು ತನಿಖೆ ನಡೆಸುವಂತೆ ಕೋರಿರಾಜ್ಯಸಭಾ ಸದಸ್ಯ ಮತ್ತು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಿಪೂನ್
ಬೋರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳೆದ ವಾರ ಪತ್ರ ಬರೆದಿದ್ದರು.

ಪ್ರತಿಪಕ್ಷಗಳ ಆರೋಪವನ್ನು ಅಲ್ಲಗಳೆದ ಸಚಿವ ಪೀಯೂಷ್ ಗೋಯಲ್, ಇದು ದೊಡ್ಡ ನಾಯಕ ಹಾಗೂ ದೊಡ್ಡ ಸಮುದಾಯವೊಂದಕ್ಕೆ ಮಾಡುತ್ತಿರುವ ಅಪಮಾನ ಎಂದು ಕರೆದರು.

ಆಗ ಆಡಳಿತ–ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು. ರಾಜ್ಯಸಭಾ ಉಪಸಭಾಪತಿ ಹರಿವಂಶ ನಾರಾಯಣ್ ಅವರು ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಬಂದರು ಸಚಿವ ಸರ್ವಾನಂದ ಸೋನೊವಾಲ್ ಅವರು ‘ಜಲಸಾರಿಗೆ ನೆರವು ಮಸೂದೆ–2021’ ಅನ್ನುಗದ್ದಲದ ಮಧ್ಯೆಯೇ ಮಂಡಿಸಿದರು.

ಒಂಬತ್ತು ದಶಕಗಳಷ್ಟು ಹಳೆಯ ಕಾನೂನಿನ ಬದಲು ಹೊಸ ಮಸೂದೆ ಮಂಡಿಸಲಾಗಿದೆ. ಹಡಗು ಸಂಚಾರ ಸೇವೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಹೊಸ ಚೌಕಟ್ಟನ್ನು ಒದಗಿಸಲು ಈ ಮಸೂದೆ ಯತ್ನಿಸುತ್ತಿದೆ. ಸದನ ಗದ್ದಲದಲ್ಲಿ ಮುಳುಗಿದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಪರಿಚಯಕ್ಕೆ ಗದ್ದಲ ಅಡ್ಡಿ

ಹೊಸದಾಗಿ ಸೇರ್ಪಡೆಗೊಂಡ ಕೇಂದ್ರ ಸಚಿವರನ್ನು ರಾಜ್ಯಸಭೆಗೆ ಪರಿಚಯಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾದರು. ಆದರೆ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಅವರಿಗೆ ಅಡಚಣೆಯಾಯಿತು. ಕೃಷಿ ಕಾನೂನುಗಳು ಮತ್ತು ಇಂಧನ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರತಿಪಕ್ಷಗಳ ನಡವಳಿಕೆಯನ್ನು ಪ್ರಧಾನಿ ಪ್ರಶ್ನಿಸಿದರು. ‘ಇದು ಯಾವ ರೀತಿಯ ಮನಸ್ಥಿತಿ’ ಎಂದು ಕೇಳಿದರು. ಮಹಿಳೆಯರು, ದಲಿತರು, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಸಮುದಾಯಗಳಿಂದ ಬಂದಿರುವ ಹೊಸ ಮಂತ್ರಿಗಳಿಗೆ ಗೌರವ ನೀಡುವುದನ್ನು ಈ ವರ್ತನೆ ತಡೆಯುತ್ತದೆ ಎಂದು ಹೇಳಿದರು.

ತೀಕ್ಷ್ಣ ಪ್ರಶ್ನೆ ಕೇಳಿ: ಪ್ರಧಾನಿ ಮೋದಿ

‘ಎಲ್ಲ ಸಂಸದರು ಮತ್ತು ಪಕ್ಷಗಳು ಅಧಿವೇಶನದಲ್ಲಿ ತೀಕ್ಷ್ಣ ಮತ್ತು ಕಠಿಣ ಪ್ರಶ್ನೆಗಳನ್ನು ಕೇಳಬೇಕು. ಜತೆಗೆ, ಈ ಪ್ರಶ್ನೆಗಳಿಗೆ ಸೌಹಾರ್ದಯುತ ವಾತಾವರಣದಲ್ಲಿಯೇ ಉತ್ತರಿಸಲು ಸರ್ಕಾರಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಂಸತ್‌ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸತ್‌ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎನ್ನುವುದು ಸರ್ಕಾರದ ಆಶಯ’ ಎಂದು ಹೇಳಿದರು.

‘ಈ ಅಧಿವೇಶನವನ್ನು ಪರಿಣಾಮಕಾರಿ ಮತ್ತು ಅರ್ಥಪೂರ್ಣ ಚರ್ಚೆಗೆ ಮೀಸಲಿಡಬೇಕು. ದೇಶದ ಜನತೆ ಉತ್ತರ ಬಯಸುತ್ತಿದ್ದಾರೆ ಮತ್ತು ಯಾವುದೇ ಪ್ರಶ್ನೆಗೆ ಉತ್ತರ ನೀಡಲು ಸರ್ಕಾರ ಸಿದ್ಧವಿದೆ. ಸತ್ಯವು ಜನರಿಗೆ ತಲುಪಿದರೆ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠವಾಗುತ್ತದೆ. ಜನರ ನಂಬಿಕೆಯನ್ನು ಸಹ ಹೆಚ್ಚಿಸುತ್ತದೆ’ ಎಂದು ಪ್ರತಿಪಾದಿಸಿದರು.

‘ಮಂಗಳವಾರ ಸಂಜೆ ಕೋವಿಡ್ ಪರಿಸ್ಥಿತಿ ಬಗ್ಗೆ ವಿವರವಾದ ಮಾಹಿತಿ ಒದಗಿಸಲಾಗುವುದು. ಆದ್ದರಿಂದ, ಸದನದ ನಾಯಕರು ತಮ್ಮ ಸಮಯ ಮೀಸಲಿಡಬೇಕು’ ಎಂದು ಕೋರಿದರು.

ಅಕ್ರಮ ಕಣ್ಗಾವಲು ಅಸಾಧ್ಯ: ವೈಷ್ಣವ್‌

ಪೆಗಾಸಸ್ ಗೂಢಚರ್ಯೆ ಪ್ರಕರಣವು ಸಂಸತ್ ಅಧಿವೇಶನದಲ್ಲಿ ಪ್ರತಿಧ್ವನಿಸಿತು. ಗೂಢಚರ್ಯೆ ಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿರುವುದಾಗಿ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ತಿಳಿಸಿದರು.

ಸ್ವಯಂಪ್ರೇರಿತ ಹೇಳಿಕೆ ನೀಡಿದ ಅವರು, ಭಾರತದಲ್ಲಿ ಅನಧಿಕೃತ ವ್ಯಕ್ತಿಗಳಿಂದ ಯಾವುದೇ ರೀತಿಯ ಅಕ್ರಮ ಕಣ್ಗಾವಲು ಸಾಧ್ಯವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT