ಸೋಮವಾರ, ಸೆಪ್ಟೆಂಬರ್ 20, 2021
23 °C

ಇಸ್ರೇಲ್‌, ಯುರೋಪ್‌ ಬಾಹ್ಯಾಕಾಶ ಸಂಸ್ಥೆಗಳ ಜತೆ ಇಸ್ರೊ ಸಹಕಾರ ವೃದ್ಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಸ್ರೇಲ್‌ ಮತ್ತು ಯುರೋಪ್‌ನ ಬಾಹ್ಯಾಕಾಶ ಸಂಸ್ಥೆಗಳ ಜತೆಗೆ ಸಹಕಾರ ವೃದ್ಧಿಸಿ, ಜತೆಯಾಗಿ ಕೆಲಸ ಮಾಡುವುದಕ್ಕೆ ಸೂಕ್ತ ಅವಕಾಶಗಳನ್ನು ಗುರುತಿಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾತುಕತೆಯಲ್ಲಿ ತೊಡಗಿದೆ.

ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಅವರು ಇಸ್ರೇಲ್‌ ಸ್ಪೇಸ್‌ ಏಜೆನ್ಸಿಯ (ಐಎಸ್‌ಎ) ಮಹಾನಿರ್ದೇಶಕ ಅವಿ ಬ್ಲಸ್‌ಬರ್ಗರ್ ಮತ್ತು ಯುರೋಪಿಯನ್‌ ಸ್ಪೇಸ್ ಏಜೆನ್ಸಿಯ (ಇಎಸ್‌ಎ) ಮಹಾನಿರ್ದೇಶಕ ಜೋಸೆಫ್‌ ಆಶ್ಚ್‌ಬಚರ್ ಅವರೊಂದಿಗೆ ನಡೆಸಿದ ವರ್ಚುವಲ್‌ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು ಹಾಗೂ ಪ್ರಸಕ್ತ ನಡೆಯುತ್ತಿರುವ ಚಟುವಟಿಕೆಗಳ ಪರಿಶೀಲನೆ ನಡೆಸಲಾಯಿತು ಎಂದು ಇಸ್ರೊ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಣ್ಣ ಉಪಗ್ರಹಗಳಿಗೆ ಎಲೆಕ್ಟ್ರಿಕ್‌ ಪ್ರಪಲ್ಷನ್ ವ್ಯವಸ್ಥೆ,  ಭೂಸ್ಥಿರ ಕಕ್ಷೆ, ಕೆಳಸ್ತರದ ಭೂ ಕಕ್ಷೆಗಳ (ಜಿಯೊ–ಲಿಯೊ) ಆಪ್ಟಿಕಲ್‌ ಸಂಪರ್ಕಗಳ ಬಗ್ಗೆ ಶಿವನ್ ಅವರು ಬ್ಲಸ್‌ಬರ್ಗರ್ ಜತೆಗೆ ಚರ್ಚಿಸಿದರು. ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಮತ್ತು ಭಾರತ –ಇಸ್ರೇಲ್‌ ರಾಜತಾಂತ್ರಿಕ ಸಂಬಂಧದ 30ನೇ ವರ್ಷಾಚರಣೆ ಪ್ರಯುಕ್ತ ಭಾರತೀಯ ಉಡಾವಣಾ ವಾಹಕಗಳ ಮೂಲಕ ಇಸ್ರೇಲ್‌ನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಸೇರಿಸುವ ಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಶಿವನ್‌ ಮತ್ತು ಆಶ್ಚಬಚರ್‌ ಅವರು ಭೂ ಪರಿವೀಕ್ಷಣೆ, ಬಾಹ್ಯಾಕಾಶ ವಿಜ್ಞಾನ, ಉಪಗ್ರಹ ಪಥಚಲನೆ, ಮಾನವಸಹಿತ ಬಾಹ್ಯಾಕಾಶ ಯಾನ ಮೊದಲಾದ ವಿಷಯಗಳಲ್ಲಿನ ಸಹಕಾರಗಳ ಬಗ್ಗೆ ಚರ್ಚಿಸಿದರು. ಇಸ್ರೊ– ಇಎಸ್‌ಎ ನಡುವಿನ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಅವಕಾಶಗಳನ್ನು ಗುರುತಿಸುವುದಕ್ಕಾಗಿ ವಿಷಯಾಧಾರಿತ ಕ್ರಿಯಾ ಗುಂಪುಗಳನ್ನು ರಚಿಸಲು ಅವರು ಒಪ್ಪಿಕೊಂಡರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು