ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಉಭಯ ಸದನದಲ್ಲಿ ಪ್ರತಿಧ್ವನಿಸಿದ ಕಾರ್ಮಿಕ ಸಂಘಟನೆಗಳ ಮುಷ್ಕರ

ಸಂಸತ್ತಿನ ಉಭಯ ಸದನಗಳಲ್ಲಿ ಮುಷ್ಕರ ಕುರಿತು ಚರ್ಚೆಗೆ ವಿಪಕ್ಷಗಳ ಆಗ್ರಹ
Last Updated 29 ಮಾರ್ಚ್ 2022, 14:27 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸಂಬಂಧಿಸಿದ ವಿಷಯಗಳನ್ನು ಮಂಗಳವಾರ ಸಂಸತ್ತಿನ ಉಭಯಸದನಗಳಲ್ಲಿ ಪ್ರಸ್ತಾಪಿಸಿದ ವಿರೋಧಪಕ್ಷಗಳು, ಸಂಘಟನೆಗಳ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದವು.

12 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಕಾರ್ಮಿಕ ಸಂಘಟನೆಗಳ ವಿಷಯದ ಕುರಿತು ಚರ್ಚಿಸಲು, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಸಲ್ಲಿಸಿದ ಮನವಿಯನ್ನು ಶೂನ್ಯವೇಳೆಯಲ್ಲಿ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರು ಸ್ವೀಕರಿಸಲಿಲ್ಲ.

ಹಲವು ಸದಸ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ಆದರೆ ಸಭಾಪತಿ ಅದನ್ನು ಸ್ವೀಕರಿಸಲಿಲ್ಲ ಮತ್ತು ಹಣಕಾಸು ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ ವಿಷಯವನ್ನು ಪ್ರಸ್ತಾಪಿಸಲು ಸಂಸದರಿಗೆ ಸೂಚಿಸಿದರು.

ಕೆಲಕಾಲ ನಾಯ್ಡು ಅವರು ಮುಷ್ಕರಕ್ಕೆ ಸಂಬಂಧಿಸಿದ ವಿಷಯವನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಲು ಮೂವರು ಸಂಸದರಿಗೆ ಅನುಮತಿ ನೀಡಿದರು.

ಮುಷ್ಕರವನ್ನು ಉಲ್ಲೇಖಿಸಿ ಮಾತನಾಡಿದ ಸಿಪಿಎಂನ ಸಂಸದ ಜಾನ್ ಬ್ರಿಟಾಸ್, ಜನಸಾಮಾನ್ಯರ ಸಂಕಷ್ಟಗಳನ್ನು ತಪ್ಪಿಸಲು ಸರ್ಕಾರವು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಸಿಪಿಐನ ಸಂಸದ ಬಿನೋಯ್ ವಿಶ್ವಂ, ‘ಕಾರ್ಮಿಕ ವರ್ಗವು ಮುಷ್ಕರ ನಡೆಸುತ್ತಿರುವಾಗ ಆ ವಿಷಯವನ್ನು ಚರ್ಚಿಸುವ ಜವಾಬ್ದಾರಿ ಸದನಕ್ಕೆ ಇರಬೇಕು. ತಡವಾದರೂ ಈ ಬಗ್ಗೆ ಚರ್ಚಿಸಲು ಸಮಯಾವಕಾಶ ನೀಡಬೇಕು’ ಎಂದರು.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯನಿರ್ವಹಣೆಯ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳಲು ಸೋಮವಾರ ಪಟ್ಟಿ ಮಾಡಲಾಗಿತ್ತು. ಆದರೆ ಮಂಗಳವಾರದ ಅದನ್ನು ಪಟ್ಟಿಯಿಂದ ಅದನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಗಮನಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಅವರು, ‘ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸದಸ್ಯರಿಗೆ ಅವಕಾಶವಿದೆ’ ಎಂದರು.

ಹಣಕಾಸು ಮಸೂದೆ 2022 ಸೇರಿದಂತೆ ಇತರ ಮಸೂದೆಗಳ ಚರ್ಚೆಗಳನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡಿ, ನಂತರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಕೈಗೊಳ್ಳಲು ನಾವು ಸರ್ಕಾರಕ್ಕೆ ಸೂಚಿಸುತ್ತೇವೆ ಎಂದು ಅವರು ಹೇಳಿದರು.

ಬಾಕ್ಸ್

ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು

ನವದೆಹಲಿ: ಸರ್ಕಾರ ಅನುಸರಿಸುತ್ತಿರುವ ಖಾಸಗೀಕರಣ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಒಕ್ಕೂಟದ ದೇಶವ್ಯಾಪಿ ಮುಷ್ಕರಕ್ಕೆ ಮಂಗಳವಾರ ವಿರೋಧ ಪಕ್ಷದ ಸದಸ್ಯರು ಬೆಂಬಲ ಘೋಷಿಸಿದರು ಮತ್ತು ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ತೃಣಮೂಲ ಕಾಂಗ್ರೆಸ್‌ ಸಂಸದ ಸೌಗತ ರಾಯ್ ಅವರು, ‘ಮುಷ್ಕರಕ್ಕೆ ಭಾರೀ ಪ್ರತಿಕ್ರಿಯೆ ದೊರೆತಿದ್ದು, ಇದು ಸರ್ಕಾರದ ನೀತಿಗಳ ಬಗ್ಗೆ ಜನರಿಗಿರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿ ಚರ್ಚೆಗೆ ಕೋರಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಸಂಸದ ಅಧೀರ್ ರಾಯ್ ಚೌಧರಿ, ‘ಬಿಜೆಪಿಯ ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ, ಉಳಿದೆಲ್ಲ ಕಾರ್ಮಿಕ ಸಂಘಟನೆಗಳು ಸರ್ಕಾರದ ವಿರುದ್ಧದ ಮುಷ್ಕರದಲ್ಲಿ ಪಾಲ್ಗೊಂಡಿವೆ. ಹೊಸ ಕಾರ್ಮಿಕ ಕಾನೂನುಗಳು, ಸರ್ಕಾರದ ಖಾಸಗೀಕರಣ ನೀತಿಗಳ ವಿರುದ್ಧ ಮುಷ್ಕರದ ಕರೆ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರು ಸದನವನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪಶ್ಚಿಮ ಬಂಗಾಳದಲ್ಲಿ, ಟಿಎಂಸಿಯು ತನ್ನ ಕಾರ್ಯಕರ್ತರ ಮೂಲಕ ಕಾರ್ಮಿಕ ಹಿತಾಸಕ್ತಿಗಳನ್ನು ತಡೆಯುತ್ತಿದೆ. ಆದರೆ, ಸದನದಲ್ಲಿ ಅದೇ ಟಿಎಂಸಿಯ ಸದಸ್ಯರು ಕಾರ್ಮಿಕರ ಹಿತಾಸಕ್ತಿಯ ಬಗ್ಗೆ ಮಾತನಾಡುತ್ತಾರೆ. ಇದು ವಿಷಾದನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT