ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ವರದಿ ಪ್ರಕಟಿಸಿದ ಸಂಸ್ಥೆಗಳಿಗೆ ಐ.ಟಿ. ಬಿಸಿ

ದೈನಿಕ್‌ ಭಾಸ್ಕರ್‌ ಪತ್ರಿಕೆ, ಭಾರತ್‌ ಸಮಾಚಾರ್‌ ವಾಹಿನಿ ಕಚೇರಿಗಳು ಗುರಿ: ರಾಜಕೀಯ ಮುಖಂಡರ ಆಕ್ರೋಶ
Last Updated 22 ಜುಲೈ 2021, 16:49 IST
ಅಕ್ಷರ ಗಾತ್ರ

ನವದೆಹಲಿ/ಅಹಮದಾಬಾದ್‌: ದೈನಿಕ್‌ ಭಾಸ್ಕರ್‌ ದಿನಪತ್ರಿಕೆ ಮತ್ತು ಭಾರತ್‌ ಸಮಾಚಾರ್‌ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸಂಸ್ಥೆಗಳಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ಶೋಧ ನಡೆಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೋವಿಡ್‌ ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿಯ ಬಗ್ಗೆ ವಿಮರ್ಶಾತ್ಮಕವಾದ ವರದಿಗಳನ್ನು ಈ ಎರಡೂ ಮಾಧ್ಯಮ ಸಂಸ್ಥೆಗಳು ‍ಪ್ರಕಟಿಸಿದ್ದವು.

ತೆರಿಗೆ ವಂಚನೆ ಆರೋಪದಲ್ಲಿ ಹಲವು ಸ್ಥಳಗಳಲ್ಲಿ ಶೋಧ ನಡೆದಿದೆ. ಈ ಕಾರ್ಯಾಚರಣೆಗೆ ವಿರೋಧ ಪಕ್ಷಗಳು ಆಕ್ರೋಶದ ಪ್ರತಿಕ್ರಿಯೆ ನೀಡಿವೆ. ಇದು ಮಾಧ್ಯಮವನ್ನು ಬೆದರಿಸಿ ದಮನಿಸುವ ಪ್ರಯತ್ನ ಎಂದಿವೆ.

ಹಿಂದಿ ಮತ್ತು ಗುಜರಾತಿ ಭಾಷೆಯಲ್ಲಿ ವಿವಿಧ ರಾಜ್ಯಗಳಲ್ಲಿ ಆವೃತ್ತಿಗಳನ್ನು ಪ್ರಕಟಿಸುತ್ತಿರುವ ದೈನಿಕ್‌ ಭಾಸ್ಕರ್‌ನ ಭೋಪಾಲ್‌, ಜೈಪುರ, ಅಹಮದಾಬಾದ್‌, ನೋಯ್ಡಾ ಮತ್ತು ಇತರೆಡೆಗಳಲ್ಲಿರುವ ಕಚೇರಿಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗಿದೆ. ಸಂಸ್ಥೆಯ ಪ್ರವರ್ತಕರಿಗೆ ಸೇರಿದ ಭೋಪಾಲ್‌ನ ಕಚೇರಿಗಳಲ್ಲಿಯೂ ಶೋಧ ನಡೆದಿದೆ.

ಅಹಮದಾಬಾದ್‌ನ ದೈನಿಕ್‌ ಭಾಸ್ಕರ್‌ ಕಚೇರಿಯಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಶೋಧ ನಡೆಸಿದ್ದು, ಕಚೇರಿಯನ್ನು ಮೊಹರು ಮಾಡಲಾಗಿದೆ. ಗುಜರಾತ್‌ನಲ್ಲಿ ಸಂಸ್ಥೆಯು ‘ದಿವ್ಯ ಭಾಸ್ಕರ್‌’ ಎಂಬ ದಿನಪತ್ರಿಕೆಯನ್ನು ಸಂಸ್ಥೆಯು ಪ್ರಕಟಿಸುತ್ತಿದೆ.

12 ರಾಜ್ಯಗಳಲ್ಲಿ ಪತ್ರಿಕೆ, ರೇಡಿಯೊ ಕೇಂದ್ರ, ವೆಬ್‌ ಪೋರ್ಟಲ್‌ಗಳನ್ನು ದೈನಿಕ್‌ ಭಾಸ್ಕರ್‌ ನಡೆಸುತ್ತಿದೆ. ಒಟ್ಟು 30 ಸ್ಥಳಗಳಲ್ಲಿ ಶೋಧ ನಡೆದಿದೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ 5.30ಕ್ಕೆ ಆರಂಭವಾದ ಕಾರ್ಯಾಚರಣೆ ಸಂಜೆಯವರೆಗೆ ಮುಂದುವರಿದಿದೆ.

ಸಂಸ್ಥೆಯು ಜವಳಿ ಜತ್ತು ಗಣಿಗಾರಿಕೆ ಚಟುವಟಿಕೆಯನ್ನೂ ನಡೆಸುತ್ತಿದೆ. ಈ ಉದ್ಯಮಗಳಿಗೆ ಸಂಬಂಧಿಸಿದ ವಹಿವಾಟಿನ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಮಾಧ್ಯಮ ಸಂಸ್ಥೆಗಳ ಕಚೇರಿಗಳಲ್ಲಿ ನಡೆದ ಶೋಧದ ಬಗ್ಗೆ ಆದಾಯ ತೆರಿಗೆ ಇಲಾಖೆಯು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಶೋಧದ ವಿಚಾರವು ರಾಜ್ಯಸಭೆಯಲ್ಲಿ ಪ್ರಸ್ತಾಪ ಆಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆದಾಯ ತೆರಿಗೆ ಇಲಾಖೆಯ ನಡೆಯನ್ನು ಖಂಡಿಸಿದ್ದಾರೆ.

ಲಖನೌದ ಸುದ್ದಿ ವಾಹಿನಿ ಭಾರತ್‌ ಸಮಾಚಾರ್‌ ಕಚೇರಿ ಮತ್ತು ಪ್ರಧಾನ ಸಂಪಾದಕ ಬ್ರಿಜೇಶ್‌ ಮಿಶ್ರಾ, ರಾಜ್ಯ ಘಟಕದ ಮುಖ್ಯಸ್ಥ ವಿರೇಂದ್ರ ಸಿಂಗ್‌ ಮತ್ತು ಇತರ ಉದ್ಯೋಗಿಗಳ ಮನೆಯಲ್ಲಿಯೂ ಶೋಧ ನಡೆಸಲಾಗಿದೆ.

ನಾಯಕರ ಆಕ್ರೋಶ

‌ಸತ್ಯವನ್ನು ಹೊರತರುವ ಧ್ವನಿಗಳ ವಿರುದ್ಧ ಪ್ರತೀಕಾರದ ಕ್ರಮ ಇದು. ಎಲ್ಲರೂ ಒಟ್ಟಾಗಿ ಈ ನಿರಂಕುಶವಾದಿಗಳು ಯಶಸ್ವಿಯಾಗದಂತೆ ತಡೆಯೋಣ

- ಮಮತಾ ಬ್ಯಾನರ್ಜಿ,ಪಶ್ವಿಮ ಬಂಗಾಳ ಮುಖ್ಯಮಂತ್ರಿ

ಯಾರೆಲ್ಲಾ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುತ್ತಾರೊ ಅವರನ್ನು ಸುಮ್ಮನೆ ಬಿಡುವುದಿಲ್ಲ. ಈ ಯೋಚನೆಯೇ ಬಹಳ ಆತಂಕಕಾರಿಯಾಗಿದೆ

- ಅರವಿಂದ ಕೇಜ್ರಿವಾಲ್‌,ದೆಹಲಿ ಮುಖ್ಯಮಂತ್ರಿ

ಚಿಕ್ಕ ಟೀಕೆಯನ್ನೂ ಮೋದಿ ನೇತೃತ್ವದ ಸರ್ಕಾರ ಸಹಿಸುವುದಿಲ್ಲ. ಇದು ಬಿಜೆಪಿಯ ಮನಸ್ಥಿತಿಯಾಗಿದೆ

- ಅಶೋಕ್‌ ಗೆಹಲೋತ್‌,ರಾಜಸ್ಥಾನ ಮುಖ್ಯಮಂತ್ರಿ

ಸತ್ಯ ಮೇಲೆ ಬರದಂತೆ ಬೆದರಿಸಬಹುದು. ಆದರೆ, ಗಂಗಾ ನದಿಯಲ್ಲಿ ಮೃತದೇಹಗಳು ತೇಲಿದಂತೆಯೇ ಸತ್ಯವನ್ನು ಮುಚ್ಚಿಡಲು ಸರ್ಕಾರಕ್ಕೆ ಸಾಧ್ಯವಿಲ್ಲ

- ಸೀತಾರಾಮ್‌ ಯೆಚೂರಿ,ಸಿಪಿಎಂ ಪ್ರಧಾನ ಕಾರ್ಯದರ್ಶಿ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭಯ ಬಿಜೆಪಿಗೆ ಇದೆ. ಆದ್ದರಿಂದ ಅದು ಮಾಧ್ಯಮಗಳನ್ನು ಗುರಿಯಗಿಸಿಕೊಂಡು ದಾಳಿ ನಡೆಸುತ್ತಿದೆ

- ಆಶುತೋಶ್‌ ವರ್ಮಾ,ಎಸ್‌ಪಿ ವಕ್ತಾರ

ಕೇಂದ್ರೀಯ ಸಂಸ್ಥೆಗಳು ಅವುಗಳ ಕೆಲಸ ಮಾಡುತ್ತಿವೆ. ಅದರಲ್ಲಿ ಸರ್ಕಾರ ಮೂಗು ತೂರಿಸಿಲ್ಲ. ಮಾಹಿತಿ ಅಪೂರ್ಣವಾಗಿದ್ದರೆ ಅಸತ್ಯ ಹೊರಬರುತ್ತದೆ

- ಅನುರಾಗ್‌ ಸಿಂಗ್‌ ಠಾಕೂರ್‌,ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT