ಗುರುವಾರ , ಮೇ 19, 2022
23 °C
ಗುಟ್ಕಾ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ಆದಾಯ ತೆರಿಗೆ ಇಲಾಖೆ ದಾಳಿ: ₹1500 ಕೋಟಿ ಲೆಕ್ಕವಿಲ್ಲದ ವಹಿವಾಟು ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗುಟ್ಕಾ ಮತ್ತು ಪಾನ್‌ ಮಸಾಲಾ ತಯಾರಿಸುವುದರಲ್ಲಿ ತೊಡಗಿರುವ ಮುಂಬೈ ಮೂಲದ ಕಂಪನಿ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಸುಮಾರು ₹1500 ಕೋಟಿಯಷ್ಟು ಲೆಕ್ಕವಿಲ್ಲದ ವಹಿವಾಟು ಪತ್ತೆ ಮಾಡಿದ್ದಾರೆ.

ಅಧಿಕಾರಿಗಳು ಈ ಕಂಪನಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಕಂಪನಿ 'ಜೆಎಂಜೆ' ಸಮೂಹಕ್ಕೆ ಸೇರಿದ್ದು, ಉದ್ಯಮಿ ಜೆ.ಎಂ. ಜೋಶಿ ಪ್ರವರ್ತಕರಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.

ಈ ಸಮೂಹದ ವಿರುದ್ಧ ಹಲವು ನಗರಗಳಲ್ಲಿ ಆರು ದಿನಗಳ ಕಾಲ ಶೋಧ ಮತ್ತು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿತ್ತು. ಫೆಬ್ರುವರಿ 13ರಂದು ಈ ಕಾರ್ಯ ಮುಕ್ತಾಯಗೊಂಡಿದ್ದು, ₹1500 ಕೋಟಿ ಲೆಕ್ಕ ಇಲ್ಲದ ವಹಿವಾಟು ಪತ್ತೆಯಾಗಿದೆ. ದಾಳಿ ಸಂದರ್ಭದಲ್ಲಿ ₹13 ಲಕ್ಷ ನಗದು ಮತ್ತು ₹7 ಕೋಟಿ ಮೌಲ್ಯದ ಆಭರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬ್ರಿಟನ್‌ ಸೇರಿದಂತೆ ವಿದೇಶದಲ್ಲೂ ಆಸ್ತಿ ಇರುವುದು ಪತ್ತೆಯಾಗಿದೆ. ದುಬೈನಲ್ಲಿ ಕಚೇರಿಯೂ ಇದೆ. ಈ ಎಲ್ಲ ಆಸ್ತಿಗಳ ನಿಯಂತ್ರಣ ಮತ್ತು ನಿರ್ವಹಣೆಯನ್ನು ಸಮೂಹದ ಅಧ್ಯಕ್ಷರೇ ಕೈಗೊಂಡಿದ್ದಾರೆ. ಬ್ರಿಟಿಷ್‌ ವರ್ಜಿನ್‌ ದ್ವೀಪದಲ್ಲಿರುವ ಆಸ್ತಿಯ ಮೌಲ್ಯ ₹830 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದೆ.

ಜೆ.ಎಂ. ಜೋಶಿ ಪುತ್ರ ಮತ್ತು ನಟ ಸಚಿನ್‌ ಜೋಶಿ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಭಾನುವಾರ ಬಂಧಿಸಿತ್ತು. ಫೆಬ್ರುವರಿ 18ರವರೆಗೆ ಜಾರಿ ನಿರ್ದೇಶನಾಲಯ ವಶಕ್ಕೆ ಒಪ್ಪಿಸಲು ನ್ಯಾಯಾಲಯ ಆದೇಶಿಸಿದೆ. ಈ ಬೆಳವಣಿಗೆ ನಡೆದ ಮರುದಿನವೇ ಅಕ್ರಮ ವಹಿವಾಟು ನಡೆದಿರುವುದು ಪತ್ತೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು