ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ‘ಇಂಡಿಯಾ‘, ‘ಹಿಂದಿಯಾ’ ಅಲ್ಲ: ಅಮಿತ್ ಶಾಗೆ ಸ್ಟ್ಯಾಲಿನ್ ತಿರುಗೇಟು

Last Updated 14 ಸೆಪ್ಟೆಂಬರ್ 2022, 16:22 IST
ಅಕ್ಷರ ಗಾತ್ರ

ಚೆನ್ನೈ: ಹಿಂದಿ ಅಧಿಕೃತ ಭಾಷೆಯಾಗಿ ಇಡೀ ರಾಷ್ಟ್ರವನ್ನು ಏಕತೆಯ ಎಳೆಯಲ್ಲಿ ಒಗ್ಗೂಡಿಸುತ್ತದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶವು ‘ಇಂಡಿಯಾ’ ಆಗಿಯೇ ಉಳಿದಿದೆ. ‘ಹಿಂದಿಯಾ’ ಆಗಿ ಅಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ಸಂವಿಧಾನದ 8ನೇ ಪರಿಚ್ಛೇದದ ಅಡಿಯಲ್ಲಿ ಪಟ್ಟಿ ಮಾಡಲಾಗಿರುವ 22 ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳೆಂದು ಘೋಷಿಸುವಂತೆ ಅವರು ಒತ್ತಾಯಿಸಿದ್ದಾರೆ.

22 ಭಾಷೆಗಳನ್ನು ದೇಶದ ಅಧಿಕೃತ ಭಾಷೆಗಳೆಂದು ಘೋಷಿಸಿದ ಬಳಿಕ ಸೆಪ್ಟೆಂಬರ್ 14 ಅನ್ನು ಹಿಂದಿ ದಿವಸದ ಬದಲು ‘ಭಾರತೀಯ ಭಾಷೆಗಳ ದಿನ’ವನ್ನಾಗಿ ಆಚರಿಸುವಂತೆ ಒತ್ತಾಯಿಸಿದ್ದಾರೆ.

‘ಭಾರತದ ಸಂಸ್ಕೃತಿ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹಿಂದಿಯನ್ನು ಕಲಿಯಬೇಕು ಎಂದು ಹೇಳುವುದು ವಿವಿಧ ಭಾಷೆಗಳನ್ನು ಮಾತನಾಡುವ ಜನರನ್ನು ಒಳಗೊಂಡಿರುವ ಭಾರತದ ವೈವಿಧ್ಯತೆಯ ಏಕತೆ ತತ್ವಕ್ಕೆ ವಿರುದ್ಧವಾಗಿದೆ. ಭಾರತದ ಸಂಸ್ಕೃತಿ ಮತ್ತು ಇತಿಹಾಸ ಹಿಂದಿಯಲ್ಲಿ ಅಡಗಿಲ್ಲ. ದ್ರಾವಿಡ ಭಾಷಾ ಕುಟುಂಬವು ಇಂದಿನ ಭಾರತ ಮತ್ತು ಅದರಾಚೆಗೂ ಹರಡಿದೆ ಎಂದು ಇತಿಹಾಸಕಾರರು ಗಮನಸೆಳೆದಿದ್ದಾರೆ’ ಎಂದು ಸ್ಟ್ಯಾಲಿನ್ ಹೇಳಿದರು.

ದೇಶದ ಸಂಸ್ಕೃತಿ ಮತ್ತು ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಭಾರತದ ಇತಿಹಾಸವನ್ನು ದೇಶದ ದಕ್ಷಿಣ ಭಾಗದಿಂದ ಪುನಃ ಬರೆಯಬೇಕು ಎಂದು ಇತಿಹಾಸಕಾರರು ಮತ್ತು ಸಂಶೋಧಕರು ಬಯಸುತ್ತಾರೆ ಎಂದು ಸ್ಟಾಲಿನ್ ಹೇಳಿದರು.

ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ ಇರುವ ದಕ್ಷಿಣದ ಇತರ ಭಾಷೆಗಳನ್ನು ಮುಂದಿಟ್ಟುಕೊಂಡು ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಪ್ರತಿಪಾದಿಸುತ್ತಿರುವುದು ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವವರ ಆಕ್ರಮಣಕಾರಿ ಧೋರಣೆಯ ಪ್ರತಿಬಿಂಬವಾಗಿದೆಯೇ ಹೊರತು ಬೇರೇನೂ ಅಲ್ಲ ಎಂದು ಹೇಳಿದ್ದಾರೆ.

ಹಿಂದಿಯ ಪ್ರಾಬಲ್ಯದಿಂದಾಗಿ ಉತ್ತರ ಭಾರತದಲ್ಲಿ ಮಾತನಾಡುವ ಮೈಥಿಲಿ ಮತ್ತು ಭೋಜ್‌ಪುರಿಯಂತಹ ಹಲವಾರು ಭಾಷೆಗಳು ಬಹುತೇಕ ಅಳಿವಿನಂಚಿನಲ್ಲಿವೆ ಎಂದು ಸ್ಟಾಲಿನ್ ಹೇಳಿದರು.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು, ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಸೇರಿಸುವ ಮೂಲಕ ಹಿಂದಿ ಪ್ರಾಬಲ್ಯದಿಂದ ತಮಿಳು ಮುಂತಾದ ಭಾಷೆಗಳನ್ನು ಉಳಿಸಲು ಬೇಲಿ ನಿರ್ಮಿಸಿದರು ಎಂದು ಸ್ಟ್ಯಾಲಿನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT