ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್ಬುಕ್‌ ಸಿಬ್ಬಂದಿ ಪ್ರಧಾನಿಯನ್ನೇ ನಿಂದಿಸುತ್ತಾರೆ: ಜುಕರ್ಬರ್ಗ್‌ಗೆ ಸಚಿವ ಪತ್ರ

Last Updated 1 ಸೆಪ್ಟೆಂಬರ್ 2020, 15:55 IST
ಅಕ್ಷರ ಗಾತ್ರ

ದೆಹಲಿ: ಫೇಸ್‌ಬುಕ್ ಭಾರತದ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಬಿಜೆಪಿ ಪರ ಧೋರಣೆ ಹೊಂದಿದ್ದಾರೆ ಎಂಬ ವಿವಾದದ ನಡುವೆಯೇ, ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಮಂಗಳವಾರ ಮಾರ್ಕ್ ಜುಕರ್‌ಬರ್ಗ್‌ಗೆ ಪತ್ರ ಬರೆದಿದ್ದಾರೆ. ಫೇಸ್‌ಬುಕ್‌ನ ನೌಕರರು ಸತತ ಚುನಾವಣೆಗಳಲ್ಲಿ ಸೋತ ರಾಜಕೀಯ ವರ್ಗವನ್ನು ಬೆಂಬಲಿಸುತ್ತಾ, ಪ್ರಧಾನ ಮಂತ್ರಿಯನ್ನು ಮತ್ತು ಕೇಂದ್ರ ಸಚಿವರನ್ನು ನಿಂದಿಸುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ ಬರ್ಗ್‌ ಅವರಿಗೆ ಮೂರು ಪುಟಗಳ ಪತ್ರ ಬರೆದಿರುವ ರವಿಶಂಕರ್‌ ಪ್ರಸಾದ್‌, ‘ಬಲ-ಮಧ್ಯಮ ಸಿದ್ಧಾಂತವನ್ನು ಬೆಂಬಲಿಸುವ ಜನರ ದೂರುಗಳ ವಿಚಾರವಾಗಿ ಫೇಸ್‌ಬುಕ್‌ ಭಾರತದ ಸಿಬ್ಬಂದಿ ನಿಷ್ಕ್ರಿಯರೂ, ಪಕ್ಷಪಾತಿಗಳೂ ಆಗಿದ್ದಾರೆ,’ ಎಂದು ಆರೋಪಿಸಿದ್ದಾರೆ.

ಫೇಸ್‌ಬುಕ್‌ ಭಾರತವು ಬಿಜೆಪಿ ವಿಷಯದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಸಂಸ್ಥೆಯ ಅಧಿಕಾರಿ ಅಂಕಿದಾಸ್‌ ಎಂಬುವವರು ಸ್ವತಃ ಬಿಜೆಪಿ ಪರ ಧೋರಣೆ ಹೊಂದಿದ್ದಾರೆ ಎಂಬ ಪತ್ರಿಕಾ ವರದಿಯ ಆಧಾರದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಅನ್ನು ವಿಚಾರಣೆ ನಡೆಸಲು ಸಂಸದೀಯ ಸಮಿತಿಯು ನಾಳೆ ಸಭೆ ಸೇರುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

‘2019ರ ಸಾರ್ವತ್ರಿಕ ಚುನಾವಣೆಗಳಲ್ಲಿ, ಬಲ–ಮಧ್ಯಮ ಸಿದ್ಧಾಂತ ಪ್ರತಿಪಾದಿಸುವವರ ಫೇಸ್‌ಬುಕ್‌ ಪುಟಗಳನ್ನು ಡಿಲಿಟ್‌ ಮಾಡುವ, ಅವುಗಳ ವ್ಯಾಪ್ತಿಯನ್ನು ಮೊಟಕುಗೊಳಿಸುವ ಪ್ರಯತ್ನ ನಡೆದಿತ್ತು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅಲ್ಲದೆ, ಇದರಲ್ಲಿ ಸಮಸ್ಯೆಗೀಡಾದವರಿಗೆ ಯಾವುದೇ ಸಹಾಯ ಅಥವಾ ಮನವಿಯ ಹಕ್ಕನ್ನು ನೀಡಿರಲಿಲ್ಲ,’ ಎಂದು ಪ್ರಸಾದ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

‘ಫೇಸ್‌ಬುಕ್‌ ಆಡಳಿತಗಾರರಿಗೆ ಡಜ್‌ನ್‌ಗಟ್ಟಲೆ ಇಮೇಲ್‌ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ನಿಷ್ಕ್ರಿಯತೆ, ಪೂರ್ವಾಗ್ರಹವು ಫೇಸ್‌ಬುಕ್ ಇಂಡಿಯಾ ತಂಡದ ಪ್ರಬಲ ರಾಜಕೀಯ ನಂಬಿಕೆಗಳಿಗೆ ಹಿಡಿದ ಕನ್ನಡಿಯಂತಿದೆ,’ ಎಂದೂ ಅವರು ಆರೋಪಿಸಿದ್ದಾರೆ.

‘ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ತನ್ನ ವೈಯಕ್ತಿಕ ನಂಬುಗೆ, ಇಷ್ಟಾನಿಷ್ಟಗಳನ್ನು ಹೊಂದಿರಬಹುದು. ಆದರೆ, ಅದು ಸಾರ್ವಜನಿಕ ನೀತಿಗಳು ಮತ್ತು ಸಂಸ್ಥೆಯ ಕಾರ್ಯಕ್ಷಮತೆ ಮೇಲೆ ಯಾವುದೇ ಪರಿಣಾಮ ಬೀರಬಾರದು,’ ಎಂದು ಪ್ರಸಾದ್ ಪತ್ರದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

‘ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಲ್ಲಿ ಜನರಿಂದ ಸತತ ತಿರಸ್ಕಾರ, ಸೋಲಿಗೆ ಗುರಿಯಾಗಿರುವವರು ಈಗ ಪ್ರಜಾಪ್ರಭುತ್ವದ ನ್ಯಾಯಸಮ್ಮತ ಹಾದಿಯನ್ನು ಕಳೆದುಕೊಂಡಿದ್ದಾರೆ. ಅವರು ಈಗ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ನೀತಿ ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ,’ ಎಂದೂ ಪ್ರಸಾದ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾಜವನ್ನು ಒಡೆಯಲು, ಅಶಾಂತಿ ಸೃಷ್ಟಿಸಲು ಈಗ ಸಾಮಾಜಿಕ ತಾಣಗಳು ಅವರಿಗೆ ಹೊಸ ಅಸ್ತ್ರವಾಗಿ ಮಾರ್ಪಟ್ಟಿದೆ ಎಂದು ರವಿಶಂಕರ್‌ ಪ್ರಸಾದ್‌ ಅವರು ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT