ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಕುರಿತ ಇಸ್ಲಾಮಿಕ್‌ ಸಹಕಾರ ಸಂಘಟನೆ ಹೇಳಿಕೆಯಲ್ಲಿ ಮತಾಂಧತೆ ವಾಸನೆ: ಭಾರತ

Last Updated 6 ಆಗಸ್ಟ್ 2022, 3:01 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕುರಿತ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಹೇಳಿಕೆಯಲ್ಲಿ ‘ಮತಾಂಧತೆಯ ವಾಸನೆ’ ಇದೆ ಎಂದು ಭಾರತ ಆರೋಪಿಸಿದೆ.

ಒಐಸಿಯು, ಭಯೋತ್ಪಾದನೆಯಿಂದ ಪ್ರೇರಿತವಾದ ಕೋಮುವಾದಿ ಕಾರ್ಯಸೂಚಿಗಷ್ಟೇ ಮೀಸಲಾದ ಸಂಘಟನೆಯಾಗಿದೆ ಎಂಬುದು ಅದರ ಹೇಳಿಕೆಯಿಂದಲೇ ಬಹಿರಂಗವಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್‌ ಬಾಗ್ಚಿ ಶುಕ್ರವಾರ ಹೇಳಿದ್ದಾರೆ. ಈ ಮೂಲಕ ಒಐಸಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ ಮೂರು ವರ್ಷಗಳಾಗಿರುವ ಹೊತ್ತಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಒಐಸಿ, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ವಿಶ್ವ ಸಮುದಾಯವು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿತ್ತು.

‘ಮೂರು ವರ್ಷಗಳ ಹಿಂದೆ ಆದ ಬಹುನಿರೀಕ್ಷಿತ ಬದಲಾವಣೆಗಳ ಪರಿಣಾಮವಾಗಿ, ಇಂದು ಜಮ್ಮು ಕಾಶ್ಮೀರದಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತಿದೆ’ ಎಂದು ಬಾಗ್ಚಿ ಹೇಳಿದರು.

‘ಇಷ್ಟಾದರೂ ಒಐಸಿ, ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಮತ್ತು ಗಡಿಯಾಚೆಗಿನ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಭಯೋತ್ಪಾದನೆಗೆ ಕುಖ್ಯಾತಿಯಾಗಿರುವ ದೇಶವೊಂದರ ಆದೇಶದ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದೆ’ ಎಂದು ಅವರು ಪಾಕಿಸ್ತಾನದ ಹೆಸರು ಹೇಳದೇ ಟೀಕಿಸಿದರು.

‘ಒಐಸಿ, ಭಯೋತ್ಪಾದನೆಯಿಂದ ಪ್ರೇರಿತವಾದ ಕೋಮುವಾದಿ ಕಾರ್ಯಸೂಚಿಗೆ ಮೀಸಲಾದ ಸಂಘಟನೆ ಎಂಬುದು ಅದರ ಹೇಳಿಕೆ ಮೂಲಕ ಬಹಿರಂಗವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಜಮ್ಮು ಮತ್ತು ಕಾಶ್ಮೀರವು ಇಂದು, ಮುಂದು, ಎಂದೆಂದು ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಬಾಗ್ಚಿ ಪ್ರತಿಪಾದಿಸಿದರು.

ಕಾಶ್ಮೀರ ವಿಷಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬರುವಂತೆ ಮಾಡಲು ಪಾಕಿಸ್ತಾನ ಸತತ ಪ್ರಯತ್ನ ನಡೆಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಾಗಿಸುವ ನಿರ್ಧಾರವನ್ನು ಭಾರತ ಸರ್ಕಾರ ಆಗಸ್ಟ್ 5, 2019 ರಂದು ಘೋಷಿಸಿತ್ತು. ಅಂದಿನಿಂದಲೂ ಈ ವಿಚಾರವಾಗಿ ಭಾರತ ವಿರೋಧಿ ಅಭಿಯಾನವನ್ನು ಪಾಕಿಸ್ತಾನ ನಡೆಸಿಕೊಂಡೇ ಬಂದಿದೆ.

ಪ್ರವಾದಿ ಮೊಹಮ್ಮದರ ವಿರುದ್ಧ ಬಿಜೆಪಿ ನಾಯಕಿ ನೂಪುರ್‌ ಶರ್ಮಾ ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಯನ್ನೂಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಈ ಹಿಂದೆ ಖಂಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ,ಒಐಸಿಯ ಟೀಕೆಗಳು ‘ಅನಗತ್ಯ ಮತ್ತು ಸಂಕುಚಿತ ಮನಸ್ಸಿನದ್ದು’ ಎಂದಿತ್ತು.

370ನೇ ವಿಧಿ ರದ್ದತಿ ಬಳಿಕ ಹಿಂಸಾಚಾರದಲ್ಲಿ ಗಣನೀಯ ಇಳಿಕೆ

370ನೇ ವಿಧಿ ರದ್ದತಿಯ ನಂತರದ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.

2016ರ ಆಗಸ್ಟ್ 5ರಿಂದ 2019ರ ಆಗಸ್ಟ್ 5ರ ಅವಧಿಯಲ್ಲಿ ಕಲ್ಲು ತೂರಾಟ ಮತ್ತು ಪ್ರತಿಭಟನೆಗಳ ವೇಳೆ ಪೊಲೀಸರು ಹಾಗೂ ಭದ್ರತಾ ಪಡೆಗಳಿಂದ 124 ಮಂದಿ ನಾಗರಿಕರು ಹತರಾಗಿದ್ದರು. ಇಂಥ ಒಂದೇ ಒಂದು ಪ್ರಕರಣ ಕಳೆದ ಮೂರು ವರ್ಷಗಳಲ್ಲಿ ವರದಿಯಾಗಿಲ್ಲ ಎಂಬುದು ಅಂಕಿಅಂಶಗಳಿಂದ ಗೊತ್ತಾಗಿದೆ.

2016ರಿಂದ 2019ರ ಅವಧಿಯಲ್ಲಿ 3,686 ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಪ್ರಕರಣಗಳು ವರದಿಯಾಗಿದ್ದವು. 2019ರ ಆಗಸ್ಟ್ 5ರ ಬಳಿಕ ಈವರೆಗೆ 438 ಪ್ರಕರಣಗಳಷ್ಟೇ ವರದಿಯಾಗಿವೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT