ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯ ನಾಶ, ವಿದೇಶಕ್ಕೆ ಪಲಾಯನ ಮಾಡಲು ಜಾಕ್ವೆಲಿನ್‌ ಯತ್ನ: ಇ.ಡಿ

Last Updated 23 ಅಕ್ಟೋಬರ್ 2022, 2:24 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ತಮ್ಮ ಫೋನ್‌ನಲ್ಲಿದ್ದ ಸಾಕ್ಷ್ಯ ಅಳಿಸಿದ್ದಾರೆ ಮತ್ತು ದೇಶ ತೊರೆಯಲು ಪ್ರಯತ್ನ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ.

ಸುಖೇಶ್ ಚಂದ್ರಶೇಖರ್ ಎಂಬುವವರ ವಿರುದ್ಧದ ₹200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡ ಆರೋಪಿಯಾಗಿದ್ದಾರೆ. ಆರೋಪಿ ಸುಖೇಶ್‌ ನಟಿ ಜಾಕ್ವೆಲಿನ್‌ಗೆ ಉಡುಗೊರೆ ರೂಪದಲ್ಲಿ ₹10 ಕೋಟಿ ನೀಡಿರುವುದನ್ನು ಇ.ಡಿ ಅಧಿಕಾರಿಗಳು ಬಯಲಿಗೆಳೆದಿದ್ದರು. ಈ ಪ್ರಕರಣದಲ್ಲಿ ಜಾಮೀನು ಕೋರಿರುವ ಜಾಕ್ವೆಲಿನ್‌ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದೆ.

‘ತಮ್ಮ ಫೋನ್‌ನಲ್ಲಿದ್ದ ನಿರ್ಣಾಯಕ ಪುರಾವೆಗಳನ್ನು ಅಳಿಸಿರುವುದಾಗಿ ನಟಿ ಒಪ್ಪಿಕೊಂಡಿದ್ದಾರೆ. ದಾಖಲೆಗಳನ್ನು ಅಳಿಸಿಹಾಕುವಂತೆ ಇತರರಿಗೂ ಹೇಳಿದ್ದಾರೆ. ಇದು ಸಾಕ್ಷ್ಯ ನಾಶದ ಸ್ಪಷ್ಟ ಪ್ರಯತ್ನ. ಅವರು ವಿದೇಶಕ್ಕೆ ಪಲಾಯನ ಮಾಡಲೂ ಪ್ರಯತ್ನಿಸಿದ್ದರು’ ಎಂದು ಇ.ಡಿ ತಿಳಿಸಿದೆ. ಈ ಕುರಿತ ದಾಖಲೆಗಳ ಆಧಾರದಲ್ಲಿ ಸುದ್ದಿ ಸಂಸ್ಥೆ ಐಎಎನ್‌ಎಸ್‌ ಶನಿವಾರ ವರದಿ ಪ್ರಕಟಿಸಿದೆ.

ಪ್ರಮುಖ ಆರೋಪಿಗಳು (ಸುಖೇಶ್ ಚಂದ್ರಶೇಖರ್ ಮತ್ತು ಲೀನಾ ಮರಿಯಾ ಪೌಲ್) ಅದಿತಿ (ಶಿವಿಂದರ್ ಸಿಂಗ್ ಅವರ ಪತ್ನಿ) ಅವರಿಂದ ಸುಲಿಗೆ ಮಾಡಿದ ಹಣವನ್ನು ಜಾಕ್ವೆಲಿನ್ ಬಳಸಿಕೊಂಡಿದ್ದಾರೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಇ.ಡಿ ಹೇಳಿದೆ.

ಪ್ರಮುಖ ಆರೋಪಿಗಳಾದ ಸುಖೇಶ್‌ ಮತ್ತು ಲೀನಾ ಅವರ ಅಪರಾಧಗಳ ಪೂರ್ವಾಪರಗಳ ಬಗ್ಗೆ ಜಾಕ್ವೆಲಿನ್‌ಗೆ ಅರಿವಿತ್ತು ಎಂದು ಇ.ಡಿ ಆರೋಪಿಸಿದೆ.

‘ಅಪರಾಧ ಕೃತ್ಯದಿಂದ ಬಂದ ಹಣವನ್ನು ಅವರು ಬಳಸಿಕೊಂಡಿರುವುದೂ ಅಲ್ಲದೆ, ವಿದೇಶದಲ್ಲಿ ನೆಲೆಸಿರುವ ತಮ್ಮ ಕುಟುಂಬ ಸದಸ್ಯರೊಂದಿಗೂ ಹಂಚಿಕೊಂಡಿದ್ದಾರೆ. ಸುಖೇಶ್‌ ನೀಡಿರುವ ಹಣ ಮತ್ತು ಉಡುಗೊರೆ ಒಳ್ಳೆ ಮಾರ್ಗದಿಂದ ಬಂದಿದ್ದಲ್ಲ ಎಂಬುದು ಅವರಿಗೆ ಗೊತ್ತಿತ್ತು ಎಂದು ಇ.ಡಿ ಪ್ರತಿಪಾದಿಸಿದೆ.

ಜಾಕ್ವೆಲಿನ್ ತನಿಖಾ ತಂಡದೊಂದಿಗೆ ಎಂದಿಗೂ ಸಹಕರಿಸಿಲ್ಲ. ಸಾಕ್ಷ್ಯಗಳು ಮತ್ತು ಹೇಳಿಕೆಗಳನ್ನು ಮುಖಕ್ಕೆ ಹಿಡಿದಾಗಲಷ್ಟೇ ಅವರು ಮಾಹಿತಿ ನೀಡುತ್ತಿದ್ದರು ಎಂದು ಇಡಿ ಹೇಳಿದೆ.

ಜಾಕ್ವೆಲಿನ್‌ ಕುಟುಂಬಸ್ಥರಿಗಾಗಿ ಸುಖೇಶ್‌ ಎರಡು ಕಾರು ಖರೀದಿಸಿದ್ದನ್ನು ನಟಿ ಆರಂಭದಲ್ಲಿ ನಿರಾಕರಿಸಿದ್ದರು. ಆದರೆ 2021ರ ಡಿಸೆಂಬರ್ 12 ರಂದು ಅವರು ಅದನ್ನು ಒಪ್ಪಿಕೊಂಡರು. ಅವರ ಸಹೋದರಿಯೂ 1,72,913 ಡಾಲರ್‌ (₹1,42,72,498)ಗಳನ್ನು ಪಡೆದುಕೊಂಡಿದ್ದಾರೆ ಎಂದು ಇ.ಡಿ ತಿಳಿಸಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಜಾಕ್ವೆಲಿನ್‌ ಫರ್ನಾಂಡೀಸ್‌ಗೆ ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ಸೆ. 26ರಂದು ಮಧ್ಯಂತರ ಜಾಮೀನನ್ನು ಮಾತ್ರವೇ ನೀಡಿದೆ. ಆಕೆಗೆ ಸಾಮಾನ್ಯ ಜಾಮೀನು ಮಂಜೂರಾಗಿಲ್ಲ. ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಲ್ಲಿಯ ವರೆಗೆ ಮಧ್ಯಂತರ ಜಾಮೀನನ್ನು ವಿಸ್ತರಿಸಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT