ಮಂಗಳವಾರ, ಮಾರ್ಚ್ 28, 2023
32 °C
ಜೈಪುರ ಸಾಹಿತ್ಯೋತ್ಸವದಲ್ಲಿ ಅಂಬೇಡ್ಕರ್‌ ಬದುಕು–ಕಾಲದ ಕುರಿತ ಚಿಂತನಾಗೋಷ್ಠಿಯಲ್ಲಿ ಸುಮಿತ್ ಸಾಮೊಸ್

ಜೈಪುರ ಸಾಹಿತ್ಯೋತ್ಸವ | ಅಂಬೇಡ್ಕರ್‌ಗಾಗಿ ಆರ್‌ಎಸ್‌ಎಸ್‌ ಹೆಣಗಾಟ: ಸುಮಿತ್ ಸಾಮೊಸ್

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಜೈಪುರ: ‘ಆರ್‌ಎಸ್‌ಎಸ್‌ನವರು ಇಲ್ಲಸಲ್ಲದ ಸಂಕಥನಗಳ ಮೂಲಕ ಅಂಬೇಡ್ಕರ್ ಅವರನ್ನು ತಮ್ಮವರನ್ನಾಗಿಸಿಕೊಳ್ಳಲು ಹೆಣಗುತ್ತಿದ್ದಾರೆ. ಆ ಸಂಘಟನೆ ಅಪಾಯಕಾರಿ ಎಂದು ಅಂಬೇಡ್ಕರ್ ಬಹಳ‌ ಹಿಂದೆಯೇ ಪ್ರತಿಪಾದಿಸಿದ್ದರು’ ಎಂದು ಒಡಿಶಾದ ಸುಮಿತ್ ಸಾಮೊಸ್ ಹೇಳಿದರು.

ಜೈಪುರ ಸಾಹಿತ್ಯೋತ್ಸವದ ಮೊದಲ ದಿನ ನಡೆದ ‘ಬಿ.ಆರ್. ಅಂಬೇಡ್ಕರ್: ಲೈಫ್ ಅಂಡ್ ಟೈಮ್ಸ್’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಾತಿ ವಿರೋಧಿ ರ‍್ಯಾಪರ್ ಎಂದು ತಮ್ಮನ್ನು ಕರೆದುಕೊಳ್ಳುವ ಸುಮಿತ್, ‘ಅಫೇರ್ಸ್ ಆಫ್ ಕಾಸ್ಟ್: ಎ ಯಂಗ್ ಡೈರಿ’ ಎಂಬ ಕೃತಿಯನ್ನೂ ಬರೆದಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಸಚಿವರೂ ಆಗಿದ್ದ ಬರಹಗಾರ ಶಶಿ ತರೂರ್ ಅವರೊಡನೆ ಗೋಷ್ಠಿಯಲ್ಲಿ ಅವರು ಸಂವಾದದಲ್ಲಿ ತೊಡಗಿ, ಅಭಿಪ್ರಾಯ ಹಂಚಿಕೊಂಡರು.

‘ಮುಸ್ಲಿಮರಿಗೆ ಅಂಬೇಡ್ಕರ್ ಬೇರೆ ಬೇರೆ ಸಂದರ್ಭಗಳಲ್ಲಿ ತಿಳಿಹೇಳಿದ್ದ ಪ್ರಸಂಗಗಳಿದ್ದವು. ಆ ಸಂದರ್ಭಗಳನ್ನು ಪ್ರಸ್ತಾಪ ಮಾಡದೆ ಆರ್‌ಎಸ್‌ಎಸ್‌ ಬರೀ ಅಂಬೇಡ್ಕರ್ ಮಾಡಿದ್ದ ಟೀಕೆಗಳನ್ನು ಉದ್ಧರಿಸಿ ರಾಜಕೀಯಗೊಳಿಸುತ್ತಿದೆ’ ಎಂದರು.

‘ದಲಿತರೂ ಭಕ್ತರಾಗಿ, ಪೂಜೆ- ಪುನಸ್ಕಾರದ ಮೊರೆಹೋಗುತ್ತಿದ್ದಾರೆ ಎಂಬ ಶಶಿ ತರೂರ್ ಅಭಿಪ್ರಾಯಕ್ಕೆ ಸುಮಿತ್ ಖಾರವಾದ ಪ್ರತಿಕ್ರಿಯೆ ನೀಡಿದ್ದು ಹೀಗೆ: ‘ತಮಿಳಿನ ಮೇಲ್ಜಾತಿಯವರು ತಮ್ಮ ಐಟಿ ಕೆಲಸದ ನಡುವೆ ಬಿಡುವು ಮಾಡಿಕೊಂಡು ಬಂದು ಆಚಾರ ಪರಿಪಾಲನೆ ಮಾಡುತ್ತಾರೆ. ಬಂಗಾಳಿಗಳು ಕೆಲಸ ಆದ ಮೇಲೆ ದೈವದ ಮುಂದೆ ನರ್ತಿಸುತ್ತಾರೆ. ದಲಿತರು ವಿದ್ಯೆ ಸಿಗದೆ ವಿಧಿಯೇ ಇಲ್ಲದೆ ದೇವರ ಮೊರೆ ಹೋದರೆ ನಮಗೆ ತಪ್ಪಾಗಿ ಕಾಣುತ್ತದೆ.'

'ಸರ್ಕಾರಿ ವ್ಯವಸ್ಥೆಯಲ್ಲಿ ಇರುವ ಮೇಲ್ಜಾತಿಯ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಲೇ ದಲಿತರಿಗೆ ಸಿಗಬೇಕಾದ ಹಕ್ಕುಗಳು ಸುಲಭಕ್ಕೆ ದೊರೆಯುತ್ತಿಲ್ಲ ಎಂದು ಉದಾಹರಣೆಗಳ ಸಮೇತ ಸುಮಿತ್ ಹೇಳಿದರು. ಇವತ್ತಿಗೂ ಊರ ಹೊರಗಿನ ಕಾಲೊನಿಗಳಲ್ಲಿ ದಲಿತರು ವಾಸ ಮಾಡುತ್ತಿರುವುದು ಅವರ ತಪ್ಪಲ್ಲ. ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣಿನ ಮೇಲೆ ಅತ್ಯಾಚಾರ– ಕೊಲೆ ನಡೆದಾಗಲೂ ಸ್ಥಳೀಯ ವ್ಯವಸ್ಥೆ ವರ್ತಿಸುವ ಬಗೆಯಲ್ಲೂ ಮೇಲ್ಜಾತಿಯವರ ಉದಾಸೀನ ಕಾಣುತ್ತದೆ’ ಎಂದು ಭಾವುಕರಾದರು.

ಮಹಿಳೆಯರಿಗೆ ಸಮಾನ ವೇತನವನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದು ಹಾಗೂ ಮೇಲ್ಜಾತಿಯವರಂತೆ ಸೀರೆ ಉಡಲು ಹೇಳಿ ಆ ಕಾಲದಲ್ಲೇ ಪ್ರತಿರೋಧದ ಕಿಡಿ ಹಚ್ಚಿದ್ದನ್ನು ಶಶಿ ತರೂರ್ ನೆನಪಿಸಿದರು. ಪ್ರಜ್ಞಾ ತಿವಾರಿ ಗೋಷ್ಠಿ ನಿರ್ವಹಿಸಿದರು.

ಗಟ್ಟಿ ಸೀತೆ, ದಿಟ್ಟೆ ಸರಳಾದೇವಿ
'ಪ್ರೇಮ ಹರಳುಗಟ್ಟಿದ ಹೆಣ್ಣು ತನಗೆ ಏಟು ಬೀಳತ್ತೆ, ಯಾರೊ ಕೊಡೊಲ್ಲ ಎಂದೇ ಭಾವಿಸುತ್ತಾಳೆ. ನನ್ನ ಸೀತೆಯೂ ಹಾಗೆಯೇ. ಅವಳು ಸಾಕಷ್ಟು ತರ್ಕ ಮಾಡುತ್ತಾಳೆ. ನಾನೊಂದು ಬಾಗಿಲು; ಬಡಿದಷ್ಟೂ ತೆರೆದುಕೊಳ್ಳುವೆ ಎನ್ನುವ ನನ್ನ ಉಮೇದೇ ಅವಳದೂ...' ಹಿಂದಿ ಸಾಹಿತಿ ಅನಾಮಿಕಾ ತಮ್ಮ 'ತೃನ್ ಧರಿ ಓಟ್'ನಲ್ಲಿನ ಸೀತೆಯ ಪಾತ್ರದ ರೂಹುಗಳನ್ನು ಹಂಚಿಕೊಂಡದ್ದು ಹೀಗೆ.

ಜೈಪುರ ಸಾಹಿತ್ಯೋತ್ಸವದ 'ಕಥಾಸಂಧಿ' ಎಂಬ ಗೋಷ್ಠಿಯಲ್ಲಿ ಅವರು ಕಾದಂಬರಿಯ ಕೆಲವು ಸಾಲುಗಳನ್ನು ಓದಿದರು. ಸೀತೆಯು ರಾಮನಿಗೆ ಪತ್ರವೊಂದನ್ನು ಬರೆದು, ತನ್ನ ವಿರಹವನ್ನೂ, ಪ್ರೇಮವನ್ನೂ, ಮಕ್ಕಳಿಗೆ ಎಲ್ಲವನ್ನೂ ಹೇಳಿದ ತಾಯ್ತನವನ್ನೂ, ಅಲೆಮಾರಿ ಜನರೊಟ್ಟಿಗೆ ಅನುಭವಿಸುವ ಮಾತೃತ್ವವನ್ನೂ ಅರುಹುವ ಪರಿಯನ್ನು ವಾಚಿಸಿ, ಚಪ್ಪಾಳೆ ಗಿಟ್ಟಿಸಿದರು.

'ಗಾಂಧಿ ಔರ್ ಸರಳಾದೇವಿ ಚೌಧರಾನಿ-12 ಅಧ್ಯಾಯ್' ಎಂಬ ತಮ್ಮ ಕೃತಿಯ ಸಾಲುಗಳನ್ನು ಮತ್ತೊಬ್ಬ ಹಿಂದಿ ಕಾದಂಬರಿಗಾರ್ತಿ ಅಲ್ಕಾ ಸರಾವಗಿ ಓದಿದರು. ಮಹಾತ್ಮ ಗಾಂಧಿ ಒಮ್ಮೆ ಸರಳಾದೇವಿಯ ಒಂದು ನಿಷ್ಕಲ್ಮಶ ನಗುವನ್ನು ಕಂಡು, ಅದನ್ನು ಮುಗ್ಧತೆಯಿಂದ ‘ಹಿಂದೂಸ್ತಾನದ ಸಂಪದ‘ ಎಂದು ಹೇಳಿದ್ದ ಪ್ರಸಂಗವನ್ನು ನೆನಪಿಸಿದರು. ಸರಳಾದೇವಿ ಹಾಗೂ ಗಾಂಧಿ ನಡುವೆ ಸಶಕ್ತ ಸಂಬಂಧವಿತ್ತು. ರಾಜಗೋಪಾಲಾಚಾರಿ ಅವರಂತಹವರು ಕೂಡ ಅದನ್ನು ತಪ್ಪಾಗಿ ಅರ್ಥೈಸಿದ್ದರು. ಇಂತಹ ಸೂಕ್ಷ್ಮವನ್ನು ತಮ್ಮ ಕೃತಿ ತೆರೆದಿಟ್ಟಿರುವುದಾಗಿ ಅಲ್ಕಾ ಹೇಳಿದರು.  ಗಾಂಧಿ ಜತೆಗಿನ ಮಹಿಳಾ‌ ಸಂಬಂಧವನ್ನು ಯಾವುದೋ ಪೂರ್ವನಿರ್ಧರಿತ ಭಾವದಲ್ಲಿ ನೋಡುವುದು ತಪ್ಪಬೇಕು ಎಂದರು. ಪತ್ರಕರ್ತೆ ನಿಷ್ಠಾ ಗೌತಮ್ ಅವರು ಗೋಷ್ಠಿ ನಿರ್ವಹಿಸಿದರು.

ಅಬ್ದುಲ್‌ರಜಾಕ್ ಪ್ರತಿರೋಧದ ಪಾಠ
‘ಬರಹಗಾರನಲ್ಲಿ ಪ್ರತಿರೋಧ ಇರಬೇಕು ಎನ್ನುತ್ತಾರೆ. ಮರೆಗುಳಿತನ, ಹೇಳಬೇಕಾದದ್ದರಿಂದ ದಿಕ್ಕು ತಪ್ಪುವುದು, ಉದಾಸೀನ, ವೇದಿಕೆ ಮೇಲೆ ನಿಂತು ಸುಖಾಸುಮ್ಮನೆ ನಿಂತು ಜೋರು ಭಾಷಣ ಮಾಡುವುದು... ಇವೆಲ್ಲದರ ಕುರಿತು ಬರಹಗಾರನಲ್ಲಿ ಪ್ರತಿರೋಧ ಇರಬೇಕೆನ್ನುವುದು ನನ್ನ ಭಾವನೆ. ಸಣ್ಣ ಸಾಹಿತ್ಯ ಕೃಷಿಯೂ ದೊಡ್ಡದೇನನ್ನೋ ಮಾಡುತ್ತದೆನ್ನುವುದೂ ಪ್ರತಿರೋಧವೇ ಹೌದು’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಬ್ದುಲ್‌ರಜಾಕ್ ಗುರ್ನಾ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಪ್ರತಿಪಾದಿಸಿದರು.

ಮಾಘ ಮಾಸದಲ್ಲಿ ಗಾಳಿಪಟಗಳ ಬಣ್ಣವರಳುವಂತೆ ಜೈಪುರ ಸಾಹಿತ್ಯೋತ್ಸವದಲ್ಲಿ ವಿಷಯ ವೈವಿಧ್ಯ ಅನಾವರಣಗೊಳ್ಳುತ್ತವೆ ಎಂದು ಸಾಹಿತ್ಯೋತ್ಸವದ ಸಹ ಸಂಸ್ಥಾಪಕಿ ನಮಿತಾ ಗೋಖಲೆ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಜೈಪುರ ಸಾಹಿತ್ಯೋತ್ಸವವನ್ನು ಕಳೆದೆರಡು ವರ್ಷಗಳಲ್ಲಿ ಅನ್‌ಲೈನ್‌ನಲ್ಲಿ ನೋಡುವವರ ಸಂಖ್ಯೆ ಎರಡೂವರೆ ಕೋಟಿ ಅಗಿರುವುದನ್ನು ಸಾಹಿತ್ಯೋತ್ಸವದ ಮತ್ತೊಬ್ಬ ಸಹ ಸಂಸ್ಥಾಪಕ ವಿಲಿಯಂ ಡಾಲ್‌ರಿ‌ಂಪಲ್ ಹೆಮ್ಮೆಯಿಂದ ಹೇಳಿದರು. ಅಮೆರಿಕ, ಯುಕೆ, ಚೀನಾ, ಜರ್ಮನಿ ದೇಶದ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್‌ನಲ್ಲಿ ನೋಡುತ್ತಿರುವುದನ್ನು ಉಲ್ಲೇಖಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು